ಕೇಜ್ರಿವಾಲ್ ಓರ್ವ ಹುಚ್ಚ, ಅಪ್ರಬುದ್ಧ ರಾಜಕಾರಣಿ: ಮೊಯ್ಲಿ
ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಾಂಗ್ರೆಸ್ ನಾಯಕರು ತೀವ್ರ ವಾಗ್ದಾಳಿ..
ಚಿಕ್ಕಬಳ್ಳಾಪುರ: ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಾಂಗ್ರೆಸ್ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದು, ಕೇಜ್ರಿವಾಲ್ ಓರ್ವ ಹುಚ್ಚ ಮತ್ತು ಅಪ್ರಬುದ್ಧ ರಾಜಕಾರಣಿ ಎಂದು ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಅವರು ಶನಿವಾರ ಹೇಳಿದ್ದಾರೆ.
ಇಂದು ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮೊಯ್ಲಿ, ಕೇಜ್ರಿವಾಲ್‌ಗೆ ಆಡಳಿತದ ಪರಿವೆಯೇ ಇಲ್ಲ. ಅವರನ್ನು ತುಘಲಕ್‌ಗೂ ಹೋಲಿಸಲು ಅಸಾಧ್ಯ. ಇಂತಹವರನ್ನು ನಾನು ಎಂದೂ ನೋಡಿರಲಿಲ್ಲ ಎಂದಿದ್ದಾರೆ.
ನನ್ನ ವಿರುದ್ಧ ಯಾವುದೇ ಭ್ರಷ್ಟಾಚಾರ ಪ್ರಕಣಗಳು ಇಲ್ಲ. ಆದರೂ ಅರವಿಂದ್ ಕೇಜ್ರಿವಾಲ್ ನನ್ನನ್ನು ಭ್ರಷ್ಟ ರಾಜಕಾರಣಿಗಳ ಪಟ್ಟಿಗೆ ಸೇರಿಸಿದ್ದರು ಎಂದು ಮೊಯ್ಲಿ ಕಿಡಿಕಾರಿದರು.
ಇನ್ನು ಕೇಜ್ರಿವಾಲ್ ಅವರ ರಾಜಿನಾಮೆ ಕೇವಲ ರಾಜಕೀಯ ನಾಟಕ ಎಂದಿರುವ ರೇಲ್ವೆ ಸಚಿವ ಮಲ್ಲಿಕಾರ್ಜುನ್ ಖರ್ಗೆ, ಕೇಜ್ರಿವಾಲ್ ಜನರಿಂದ ಅನುಕಂಪ ಗಿಟ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.