ಕೇಜ್ರಿವಾಲ್ ರಾಜಿನಾಮೆಯೊಂದಿಗೆ ದುಃಸ್ವಪ್ನ ಅಂತ್ಯ: ಜೇಟ್ಲಿ
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಜಿನಾಮೆಯೊಂದಿಗೆ ದೆಹಲಿಗೆ ಹಿಡಿದಿದ್ದ ರಾಹು ಅಂತ್ಯವಾಗಿದೆ ಎಂದು ಬಿಜೆಪಿ ಹಿರಿಯ ನಾಯಕ ಮತ್ತು ರಾಜ್ಯಸಭೆ ವಿರೋಧ ಪಕ್ಷ ನಾಯಕ ಅರುಣ್ ಜೇಟ್ಲಿ ಅವರು ಶನಿವಾರ ಹೇಳಿದ್ದಾರೆ.
ದೆಹಲಿಯ ಇತಿಹಾಸದಲ್ಲೇ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರ ಅತಿ ಕೆಟ್ಟ ಸರ್ಕಾರ. ಇಂತಹ ಕೆಟ್ಟ ಸರ್ಕಾರ ಕೇಜ್ರಿವಾಲ್ ರಾಜಿನಾಮೆಯೊಂದಿಗೆ ನಿರ್ಗಮಿಸಿದೆ ಎಂದು ಆಪ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಿಂದಲೂ ಕೇಜ್ರಿವಾಲ್ರಿಂದ ದೆಹಲಿಗೆ ಒಂದಲ್ಲ ಒಂದು ತೊಂದರೆ ಎದುರಾಗುತ್ತಿತ್ತು. ಸಿಎಂ ಸ್ಥಾನಕ್ಕೆ ಕೇಜ್ರಿವಾಲ್ ರಾಜಿನಾಮೆಯಿಂದ ದುಃಸ್ವಪ್ನ ಅಂತ್ಯವಾಗಿದೆ ಎಂದು ತಮ್ಮ ಖಾಸಗಿ ವೆಬ್ಸೈಟ್ನಲ್ಲಿ ಜೇಟ್ಲಿ ಬರೆದುಕೊಂಡಿದ್ದಾರೆ.
ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ(ಆಪ್) ಸೂಕ್ತ ಅಜೆಂಡಾ ಮತ್ತು ಚಿಂತನೆ ಇಲ್ಲದ ಸರ್ಕಾರವಾಗಿತ್ತು. ಅಲ್ಲದೆ ರಾಜಕೀಯ ಪುಡಾರಿಗಳಿಂದ ತುಂಬಿದ್ದ ಸರ್ಕಾರ. ಬುದ್ಧಿವಂತ ರಾಜಕಾರಣ ಆದರೆ ಸೂಕ್ತ ಆಡಳಿತ ನಿರ್ವಹಿಸದೆ ಇರುವುದೇ ಆಪ್ ಸರ್ಕಾರದ ಗುರಿ ಎಂದು ಅರುಣ್ ಜೇಟ್ಲಿ ಆರೋಪಿಸಿದ್ದಾರೆ.
ಜನಲೋಕಪಾಲ್ ಮಸೂದೆ ಜಾರಿಯಾಗದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನಿನ್ನೆ ದೆಹಲಿ ಸಿಎಂ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದರು.