ಹಿಂದಿನ ಬಿಜೆಪಿ ಸರ್ಕಾರ 'ಬಳ್ಳಾರಿ' ಸರ್ಕಾರವಾಗಿತ್ತು: ರಾಹುಲ್
ರಾಜ್ಯದಲ್ಲಿ ಈ ಹಿಂದೆ ಇದ್ದ ಬಿಜೆಪಿ ಸರ್ಕಾರ 'ಬಳ್ಳಾರಿ' ಸರ್ಕಾರವಾಗಿತ್ತು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಬಿಜೆಪಿ ವಿರುದ್ಧ ಶನಿವಾರ ವಾಗ್ದಾಳಿ ...
ಬೆಳಗಾವಿ: ರಾಜ್ಯದಲ್ಲಿ ಈ ಹಿಂದೆ ಇದ್ದ ಬಿಜೆಪಿ ಸರ್ಕಾರ 'ಬಳ್ಳಾರಿ' ಸರ್ಕಾರವಾಗಿತ್ತು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಬಿಜೆಪಿ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದರು.
ಇಂದು ಬೆಳಗಾವಿಯಲ್ಲಿ ಭಾರತ್ ನಿರ್ಮಾಣ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಹಿಂದಿನ ಬಿಜೆಪಿ ಸರ್ಕಾರ ರಾಜ್ಯದ ಸಂಪತ್ತನ್ನು ಲೂಟಿ ಮಾಡಿದೆ. ಭ್ರಷ್ಟಾಚಾರದ ಕಾರಣದಿಂದ ಬಿಜೆಪಿ ಸರ್ಕಾರವನ್ನು ಜನರು ಕಿತ್ತು ಹಾಕಿದರು. ಆದರೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಲ್ಲೆಡೆ ಭ್ರಷ್ಟಾಚಾರ ಮುಕ್ತ ಭಾರತದ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
ಕರ್ನಾಟಕ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಕಂಡಿದ್ದು, ಬಡವರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಅಪಾರ ಕೊಡುಗೆ ನೀಡಿದೆ. ಬಡವರಿಗೆ ಆಹಾರ ಭದ್ರತೆ ನೀಡಿದ್ದು ಕಾಂಗ್ರೆಸ್ ಸರ್ಕಾರ. ಕಾಂಗ್ರೆಸ್‌ನಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ರಾಹುಲ್ ಹೇಳಿದರು.
1980ರಲ್ಲಿ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿವರು ಮಾಹಿತಿ ತಂತ್ರಜ್ಞಾನದ ಪ್ರಸ್ತಾಪ ಮಾಡಿದಾಗ ಬಿಜೆಪಿ ಅಪಹಾಸ್ಯ ಮಾಡಿತ್ತು. ಆದರೆ ಈಗ ಅದೇ ಕಂಪ್ಯೂಟರ್ ಬೆಂಗಳೂರಿನಲ್ಲಿ ಚಮತ್ಕಾರ ಮಾಡಿದೆ. ಐಟಿಯಿಂದಾಗಿ ಎಷ್ಟೊಂದು ಉದ್ಯೋಗ ಸೃಷ್ಟಿಯಾಗಿವೆ ಎಂದು ರಾಹುಲ್ ಹೇಳಿದರು.
ಇದೇ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧವೂ ಪರೋಕ್ಷ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಭ್ರಷ್ಟಾಚಾರದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿಯೊಬ್ಬರು ಜೈಲಿಗೆ ಹೋಗಿ ಬಂದಿದ್ದಾರೆ ಎಂದರು. ಅಲ್ಲದೆ ಬಿಜೆಪಿ ವಿರುದ್ಧ ಆರೋಪ ಮಾಡಿದ್ದ ಅವರು ಈಗ ಅದೇ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ವ್ಯಂಗ್ಯವಾಡಿದರು.