'ರಾಜಕಾರಣ' ಅಂದ್ರೆ ನಮಗೆ 'ರಾಷ್ಟ್ರಭಕ್ತಿ': ಮೋದಿ
ಕೆಲವರಿಗೆ ರಾಜಕಾರಣ ಅಂದ್ರೆ ಬರೀ ವ್ಯಾಪಾರ, ಆದರೆ ನಮಗೆ ರಾಜಕಾರಣ ಅಂದ್ರೆ "ರಾಷ್ಟ್ರಭಕ್ತಿ' ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ...
ಹಮೀರ್ಪುರ(ಹಿಮಾಚಲ ಪ್ರದೇಶ): ಕೆಲವರಿಗೆ ರಾಜಕಾರಣ ಅಂದ್ರೆ ಬರೀ ವ್ಯಾಪಾರ, ಆದರೆ ನಮಗೆ ರಾಜಕಾರಣ ಅಂದ್ರೆ "ರಾಷ್ಟ್ರಭಕ್ತಿ' ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಭಾನುವಾರ ಹೇಳಿದ್ದಾರೆ.
ಹಿಮಾಚಲ ಪ್ರದೇಶದ ಹಮೀರ್ಪುರದಲ್ಲಿ ಬಿಜೆಪಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಕೆಲವರು ಕೇವಲ ವ್ಯಾಪಾರದ ದೃಷ್ಟಿಯನ್ನಿಟ್ಟುಕೊಂಡು ರಾಜಕಾರಣ ನಡೆಸುತ್ತಿದ್ದಾರೆ. ಆದರೆ ನಮಗೆ ರಾಜಕಾರಣ ಅಂದ್ರೆ ರಾಷ್ಟ್ರಭಕ್ತಿ ಎಂದು ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.
ಭ್ರಷ್ಟಾಚಾರದ ಮೂಲ ಕಾಂಗ್ರೆಸ್ ಪಕ್ಷವಾಗಿದ್ದು, ಸುಮಾರು 60 ವರ್ಷಗಳಿಂದ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ತೊಡಗಿದೆ. ಭ್ರಷ್ಟಾಚಾರ, ಬೆಲೆ ಏರಿಕೆಯಿಂದಾಗಿ ದೇಶ ಕಷ್ಟಕ್ಕೆ ಸಿಲುಕಿಸಿದ್ದು, 90 ದಿನಗಳಲ್ಲಿ ಬೆಲೆ ಏರಿಕೆ ನಿಯಂತ್ರಿಸುವ ಭರವಸೆ ನೀಡಿದ್ದ ಕಾಂಗ್ರೆಸ್ ತನ್ನ ಭರವಸೆಯನ್ನು ಈಡೇರಿಸಿದೆಯೇ ಎಂದು ಪ್ರಶ್ನಿಸಿದ್ದಾರೆ. ಆದರೆ ಬಿಜೆಪಿಗೆ ಕೇವಲ 100 ದಿನ ಕಾಲ ಅಧಿಕಾರ ನೀಡಿ ಬೆಲೆ ಏರಿಕೆ ನಿಯಂತ್ರಣ ಮಾಡುವುದಾಗಿ ಭರವಸೆ ನೀಡಿದರು. ಅಲ್ಲದೆ ದೇಶವನ್ನು ಭ್ರಷ್ಟಾಚಾರ ಮುಕ್ತ ರಾಷ್ಟ್ರವನ್ನಾಗಿಸಬೇಕಾದರೆ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ ಎಂದು ಕಾರ್ಯಕರ್ತರಿಗೆ ಮೋದಿ ಕರೆ ನೀಡಿದರು.
ಹಿಮಾಚಲ ಪ್ರದೇಶ ವೀರರು ಜನಿಸಿದ ಪುಣ್ಯ ಭೂಮಿ. ಈ ಪ್ರದೇಶದ ಜನರ ಪ್ರೀತಿಯನ್ನು ಮರೆಯಲು ಅಸಾಧ್ಯ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಈ ರಾಜ್ಯ ಎಂದರೆ ಹೆಚ್ಚು ಪ್ರೀತಿ. ಹೀಗಾಗಿ ಹಿಮಾಚಲ ಪ್ರದೇಶದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು. ರಾಜ್ಯದಲ್ಲಿ ರೇಲ್ವೆ ವ್ಯವಸ್ಥೆ ಅಭಿವೃದ್ಧಿಗೊಳಿಸುವ ಅವಶ್ಯಕತೆಯಿದೆ. ರೇಲ್ವೆ ವ್ಯವಸ್ಥೆ ಅಭಿವೃದ್ಧಿಯಿಂದ ಇಲ್ಲಿನ ಜನರಿಗೆ ಉದ್ಯೋಗ ಸೃಷ್ಟಿಸಬಹುದು ಎಂದು ಮೋದಿ ತಿಳಿಸಿದ್ದಾರೆ.
ಭ್ರಷ್ಟಾಚಾರ ಮತ್ತು ಬೆಲೆ ಏರಿಕೆಯಿಂದಾಗಿ ಕಾಂಗ್ರೆಸ್ ಪಕ್ಷದ ಮೇಲೆ ಜನರು ನಂಬಿಕೆ ಕಳೆದುಕೊಂಡಿದ್ದಾರೆ. ಅಲ್ಲದೆ ಕಾಂಗ್ರೆಸ್ನ ದುರ್ಬಲ ನೀತಿಯಿಂದಾಗಿ ಸೂಕ್ತ ಬೆಂಬಲ ಬೆಲೆ ಸಿಗದೆ ರೈತರು ಆಂತಕಕ್ಕೊಳಗಾಗಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಹಾಗೂ ರಕ್ಷಣೆ ಸಹ ಸಿಗುತ್ತಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಮೋದಿ ಕಿಡಿಕಾರಿದರು.