ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬೆಂಗಳೂರ್ ಹುಡ್ಗೀರನ್ನೇಕೆ ಮದ್ವೆ ಆಗ್ಬಾರ್ದು?

50 ಕಾರಣಗಳು

Lingaraj Badiger
Updated On : 18 Feb 2014, 3:24 am

50 ಕಾರಣಗಳು
ವೈಫ್ ಈಸ್ ಆಲ್ವೇಸ್ ಬ್ರೈಟ್. ಆದರೆ ಮದುವೆಗೆ ಮುನ್ನ ಅವರಲ್ಲಿ ತಪ್ಪು ಕಂಡುಹಿಡಿಯುವುದರಿಂದ ಯಾವುದೇ ಅಪಾಯವಿಲ್ಲ. ಆ ಧೈರ್ಯದಿಂದಲೇ ಬೆಂಗಳೂರಿನ ಭಾವಿ ವೈಫುಗಳಲ್ಲಿರಬಹುದಾದ ಕೊರತೆಗಳನ್ನು ಪಟ್ಟಿಮಾಡುವ ಸಾಹಸಕ್ಕೆ ಇಲ್ಲಿ ಕೈ ಹಾಕಲಾಗಿದೆ. ಹುಡುಗರಿಗೆ ಸಂಭವನೀಯ ಅಪಾಯದಿಂದ ಪಾರಾಗಲು ಹಾಗೂ ಹುಡುಗಿಯರಿಗೆ, ಮದುವೆಯವರೆಗೆ ಇವುಗಳ ಸುಳಿವು ಬಿಟ್ಟುಕೊಡದೆ ಬಚ್ಚಿಟ್ಟುಕೊಳ್ಳಲು ಈ ಪಟ್ಟಿ ನೆರವಾಗಬಹುದು.

  1. ಹೆಚ್ಚಿನ ಹುಡುಗಿಯರು ಕನ್ನಡದವರಾಗಿರುವುದಿಲ್ಲ. ತಮಿಳು, ತೆಲುಗು ಅಥವಾ ಮಲೆಯಾಳಿಗಳಾಗಿರುತ್ತಾರೆ. ಒಂದು ಪಕ್ಷ ಕನ್ನಡತಿಯಾಗಿದ್ದರೂ ಅದನ್ನು ತೋರಿಸಿಕೊಳ್ಳುವುದು ಅವರ ಲೆವೆಲ್ಲಿಗೆ ಸರಿಹೊಂದುವುದಿಲ್ಲ.
  2. ಅವರ ಇಂಗ್ಲಿಷ್ ನಮ್ಮ ಇಂಗ್ಲಿಷ್‌ಗಿಂತ ಚೆನ್ನಾಗಿರುತ್ತದೆ. ಮತ್ತು ಅದನ್ನು ಆಗಾಗ ನೀವು ನೆನಪಿಸಿಕೊಳ್ಳುವಂತೆ ಮಾಡುತ್ತಾರೆ.
  3. ನಿಮ್ಮ ತಾಯಿಯೊಂದಿಗೆ ಯಾವುದೇ ಕಾರಣಕ್ಕೂ ಅವರಿಗೆ ಸರಿಬರುವುದಿಲ್ಲ. ಇದು ಸಾರ್ವತ್ರಿಕ ಸತ್ಯವೂ ಹೌದು.
  4. ನೀವು ಅಮ್ಮನ ಬಗ್ಗೆ ಆಗಾಗ ಮಾತನಾಡುತ್ತಿದ್ದರೆ 'ಅಮ್ಮನ ಮಗ' ಅಂತ ಹಂಗಿಸುತ್ತಾರೆ. ಇದರರ್ಥ ನೀವು 'ಹೆಂಡತಿ ಗಂಡ' ಆಗಿರಬೇಕು ಎಂಬುದಷ್ಟೆ.
  5. ಯಾವುದೇ ಕಾರಣಕ್ಕೂ ನಿಮ್ಮ ಅಮ್ಮನ ಕಂಟ್ರೋಲ್‌ನಲ್ಲಿ ತಾವಿದ್ದೇವೆಂದು ತೋರಿಸಿಕೊಳ್ಳಲು ಅವರಿಗಿಷ್ಟವಿಲ್ಲ. ಆದರೆ ಎಲ್ಲವನ್ನೂ ಅವರ ಅಮ್ಮ ಹೇಳಿದಂತೆ ಮಾಡುತ್ತಾರೆ.
  6. ಗಿಫ್ಟ್ ರ್ಯಾಪರ್‌ಗಳನ್ನು ತಾಸುಗಟ್ಟಲೆ ಕುಳಿತು ಬಿಚ್ಚುತ್ತಾರೆ. ನಂತರ ಅದನ್ನು ಹಾಸಿಗೆ ಕೆಳಗೆ ಮಡಚಿಡುತ್ತಾರೆ. ನೀವು ಏನೂ ಹೇಳಿಲ್ಲ ಅಂತಾದರೆ ಸೆಲ್ಲೋಟೇಪನ್ನೂ ಕಿತ್ತಿಡುತ್ತಾರೆ.
  7. ಮನೆಯಲ್ಲಿರುವ ಯಾವುದೇ ಕನ್ನಡಿಗೂ ಬಿಂದಿ ಅಂಟಿಸದೆ ಬಿಡುವುದಿಲ್ಲ. ಲಿಪ್‌ಸ್ಟಿಕ್ ಕಲೆ ಇದ್ದೇ ಇರುತ್ತದೆ ಬಿಡಿ.
  8.  ಮದುವೆಯಾದ ಮೇಲೆ 'ನಾನು ದಪ್ಪ ಕಾಣ್ತಿದ್ದೀನಾ' ಎಂದು ಕೇಳುವುದನ್ನು ನಿಲ್ಲಿಸುತ್ತಾರೆ. ನೀವಾಗಿಯೇ ಹೇಳಿದರೆ ನಕ್ಕುಬಿಡುತ್ತಾರೆ.
  9. ಇಡೀ ದಿನ ಟ್ರಾಫಿಕ್‌ನಲ್ಲಿ ಬೈಕೋ ಕಾರೋ ಓಡಿಸಿ ನಿಮ್ಮ ದೇಹ ಭಯಂಕರ ಹೀಟ್ ಆಗಿದ್ದರೂ ಅವಳ ಜೊತೆ ಸಂಜೆ ಸುತ್ತಾಡಲು ಹೋದಾಗ ಗೋಬಿ ಮಂಚೂರಿಯನ್ನು ತಿನ್ನಲೇಬೇಕು.
  10. ಗಂಡನಿಗೆ ಹೊಟ್ಟೆ ಬರುತ್ತಿರುವುದು ಮಾತ್ರ ಅವರಿಗೆ ಬೇಗ ಕಾಣುತ್ತದೆ. ಮತ್ತು ಅದನ್ನು ನೀವು ಕರಗಿಸಲೇಬೇಕಾಗುತ್ತದೆ.
  11. ಸೀರೆ ಉಡುವುದು ವರ್ಷಕ್ಕೆ ಮೂರೇ ಬಾರಿಯಾದರೂ ಐದರಿಂದ ಎಂಟು ಸೀರೆ ಕೊಳ್ಳುವುದು ಕಡ್ಡಾಯ.
  12. ಆಗಾಗ ನೀವು ಚೂಡಿದಾರನ್ನೋ, ಜೀನ್ಸನ್ನೋ, ಬೇರೇನನ್ನೋ ಒಬ್ಬರೇ ಶಾಪಿಂಗ್‌ಗೆ ಹೋಗಿ ತಂದು ಸರ್‌ಪ್ರೈಸ್ ಕೊಡಬೇಕಾಗುತ್ತದೆ. ಆದರೆ ಅದು ಅವರಿಗಿಷ್ಟವಾಗುವುದಿಲ್ಲ.
  13. ನೀವು ಪ್ಯಾಂಟು ಶರ್ಟ್ ಕೊಳ್ಳಲು ಅವರನ್ನು ಕರೆದುಕೊಂಡು ಹೋಗಬೇಕು. ಮತ್ತು ಅವರಿಗಿಷ್ಟವಾದದ್ದನ್ನೇ ಕೊಳ್ಳಬೇಕು. ಆ ಕಲರ್‌ನಲ್ಲಿ ನಿಮ್ಮ ಸೈಜ್ ಇಲ್ಲದಿದ್ದರೆ ಹೊಟ್ಟೆಗೆ ಬೆಲ್ಟ್ ಸುತ್ತಿಕೊಳ್ಳಬಹುದು.
  14. ಅವರು ಇಶ್ಶೀ... ಅಂದರೆ ಅದರರ್ಥ ಇಷ್ಟವಿಲ್ಲ ಎಂದೇ ಆಗಿರುವುದಿಲ್ಲ. ಒಳಗೊಳಗೇ ಇಷ್ಟಪಡುವುದಕ್ಕೂ ಅವರ ಭಾಷೆಯಲ್ಲಿ ಹೀಗೆ ಹೇಳಲಾಗುತ್ತದೆ. ಬಹಳ ಮುಖ್ಯವಾದ ಸಂಗತಿಯೆಂದರೆ, ಅದು ನಿಮಗೆ ಅರ್ಥವಾಗಬೇಕು.
  15. ನೀವು ಯಾವಾಗಲೂ ಮಾತನಾಡುತ್ತಿರಬೇಕು. ಮೂಡ್ ಸರಿಯಿಲ್ಲದಿದ್ದರೂ ಮಾತನಾಡಬೇಕು. ಇಲ್ಲದಿದ್ದರೆ ಅವರಿಗೆ ಬೇಜಾರಾಗುತ್ತದೆ. ಅವರಿಗೆ ಮೂಡ್ ಸರಿಯಿಲ್ಲದಿದ್ದಾಗ ನೀವು ಸುಮ್ಮನಿದ್ದರಾಯಿತು.
  16. ತಲೆಸ್ನಾನ ಮಾಡುವ ಹಿಂದಿನ ದಿನ ಕೂದಲಿಗೆ ಅವರು ಹಚ್ಚಿಕೊಳ್ಳುವ ಎಣ್ಣೆಗಳಿಗೆ ನಿಮ್ಮನ್ನು ತಲೆಸುತ್ತಿ ಬೀಳಿಸುವ ತಾಕತ್ತಿರುತ್ತದೆ. ಆ ಕಷ್ಟ ಅನುಭವಿಸಿದ ಮೇಲೆ 'ನಿನ್ ಕೂದಲು ತುಂಬಾ ಚೆನ್ನಾಗಿದೆ' ಎಂದು ಮದುವೆಗೆ ಮುಂಚೆ ಹೇಳಿ ಎಂಥಾ ತಪ್ಪು ಮಾಡಿದ್ದೀರೆಂದು ನಿಮಗರ್ಥವಾಗುತ್ತದೆ.
  17. ಅಪರೂಪಕ್ಕೆ ಆಕೆ ಸೀರೆ ಉಟ್ಟಾಗ ನೀವು ಬಗ್ಗಿ ನೆರಿಗೆ ಸರಿಮಾಡಿಕೊಡಬೇಕು. ಆದರೆ, ಅದನ್ನು ಮಾಡುವುದು ಹೇಗೆಂದು ಅವಳಿಗೆ ಮಾತ್ರ ಗೊತ್ತಿರುತ್ತದೆ.
  18. ಅಪರೂಪಕ್ಕೊಮ್ಮೆ ನಿಮ್ಮ ಕೈಲಿ ಅಡುಗೆ ಮಾಡಿಸುವುದರಿಂದ ಅವರಿಗೆ ಥ್ರಿಲ್ ಸಿಗುತ್ತದೆ. ಬರುಬರುತ್ತ ಈ ಥ್ರಿಲ್ ಪದೇಪದೇ ಬೇಕೆಂದು ಕೇಳುತ್ತಾರೆ.
  19. ನಿಮ್ಮ ಆಫೀಸಿನಲ್ಲಿ ಕೆಲಸ ಮಾಡುವ ಹುಡುಗಿಯರ ಲಿಸ್ಟ್ ಅವರಿಗೆ ಬೇಕು. ನಂತರ ಆಗಾಗ ನಿಮ್ಮ ಮೊಬೈಲಿನಲ್ಲಿ ಅವರ ಹೆಸರಿಗೆ ಹೋಗಿರುವ ಕಾಲ್ ಹಾಗೂ ಎಸ್‌ಎಂಎಸ್‌ಗಾಗಿ ಹುಡುಕಾಟ ನಡೆಯುತ್ತದೆ.
  20. ತಾವು ಧರಿಸುವ ಒಳ್ಳೊಳ್ಳೆ ಬಟ್ಟೆಯಿಂದಲೇ ಬೊಜ್ಜು ಮುಚ್ಚಿಕೊಳ್ಳುತ್ತದೆ ಎಂಬ ಮೂಢನಂಬಿಕೆ  ಅವರಿಗಿದೆ. ಪುರುಸೊತ್ತಾದಾಗ ಒಂದೊಂದು ಬೆಳಿಗ್ಗೆಯೋ, ಸಂಜೆಯೋ ಹೋಗುವ ವಾಕಿಂಗ್‌ನಿಂದಲೇ ತಾವು ಸಣ್ಣಗಾಗುತ್ತೇವೆ ಎಂಬ ಖಾತ್ರಿಯೂ ಇದೆ.
  21. ಆಗಾಗ ಮೆಹಂದಿ ಹಾಕುವುದರಿಂದ ಕೂದಲು ಚೆನ್ನಾಗಿರುತ್ತದೆ ಎಂದು ಅವರ ತಲೆಗೆ ಮೊದಲೇ ತುಂಬಿರಲಾಗುತ್ತದೆ. ಮೆಹಂದಿ ಹಾಕಿದ ದಿನ ಬಾತ್ರೂಮ್‌ನಿಂದ ಹಿಡಿದು ಬೆಡ್ರೂಮಿನ ದಿಂಬಿನ ಕವರ್ ತನಕ ಎಲ್ಲೆಲ್ಲೂ ಅದರ ಕಲೆ ಮತ್ತು ವಾಸನೆ ಅಂಟಿಕೊಳ್ಳುತ್ತದೆ. ತಿಂಗಳವರೆಗೆ ಅದು ಹೋಗುವುದಿಲ್ಲ. ಮತ್ತು ತಿಂಗಳಿಗೊಮ್ಮೆ ಹೀಗೆ ಮೆಹಂದಿ ಹಾಕುವುದು ಒಳ್ಳೆಯದಂತೆ.
  22. ಮನೆಗೆ ಬರುವ ಮ್ಯಾಗಜಿನ್‌ನ್ನು ಅವರೇ ಮೊದಲು ಓದಬೇಕು. ಅದಕ್ಕೆ ಕಡಿಮೆಯೆಂದರೂ ಒಂದು ವಾರ ಬೇಕು. ಅಷ್ಟರಲ್ಲಿ ಹೊಸ ಮ್ಯಾಗಜಿನ್ ಬಂದಿರುತ್ತದೆ.
  23. ಗಾಸಿಪ್ ಅಂದರೆ ಅವರಿಗಿಷ್ಟ. ನಿಮ್ಮ ಫೇಸ್‌ಬುಕ್ ಪೇಜಿಗೆ ಅತಿ ಹೆಚ್ಚು ವಿಸಿಟ್ ಮಾಡುವ ವ್ಯಕ್ತಿ ಅವರೇ ಆಗಿರುತ್ತಾರೆ. ನೀವು ಅವರ ಮೊಬೈಲ್ ಮುಟ್ಟಿದರೆ ನೀವು ಅನುಮಾನದ ಪಿಶಾಚಿ. ಅವರು ಚೆಕ್ ಮಾಡುವುದು ಜನರಲ್ ಚೆಕಪ್.
  24. ಅವರಿಗಿಷ್ಟವಾದದ್ದನ್ನೇ ನೀವು ತೊಡುತ್ತೀರಿ ಎಂದು ಯಾವತ್ತಾದ್ರೂ ಬಾಯಿತಪ್ಪಿ ಹೇಳಿದ್ದರೆ ಮುಗಿಯಿತು. ನಿಮ್ಮ ಅಂಡರ್‌ವೇರ್ ಕಲರನ್ನೂ ಅವರೇ ಆಯ್ಕೆ ಮಾಡುತ್ತಾರೆ.
  25. ಸಂಜೆ ಏಳರಿಂದ ಹತ್ತು ಗಂಟೆ ಧಾರಾವಾಹಿ ನೋಡಲು ಮೀಸಲು. ಹಾಗಾಗಿ ನಿಮ್ಮ ಜೊತೆ ಮಾತನಾಡಲು ಟೈಮ್ ಸಿಗುವುದು ಮಧ್ಯಾಹ್ನದ ವೇಳೆ. ನೀವು ಆಫೀಸಿನಲ್ಲಿದ್ದರೂ ಆಗಲೇ ಫೋನ್‌ಮಾಡಿ ಮಾತನಾಡುತ್ತಾರೆ. ಫೋನ್  ಎತ್ತದಿದ್ದರೆ ಏನು ಕಾದಿದೆ ಅಂತ ನಿಮಗೆ ಗೊತ್ತು.
  26. ಅವರಿಗೆ ಸ್ಪೋರ್ಟ್ಸ್ ಅಂದರೆ ಆಗುವುದಿಲ್ಲ. ಹಾಗಾಗಿ ಸ್ಪೋರ್ಟ್ಸ್ ಚಾನಲ್ ಕಂಡರೂ ದ್ವೇಷ. ನೀವು ರಾಜ್ಯಮಟ್ಟದ ಚಾಂಪಿಯನ್ ಆಗಿದ್ದರೆ... ಹೂ ಕೇರ್ಸ್?
  27. ಲವ್ ಮಾಡುವಾಗಿನ ಅವಳಿಗೂ, ಮದುವೆಯಾದ ಮೇಲಿನ ಅವಳಿಗೂ ಬಹಳ ವ್ಯತ್ಯಾಸವಿರುತ್ತದೆ. ಹಾಗಾಗಿ ನಿಮಗೆ ಸಿಗುವ ಹೆಂಡತಿ ನೀವು ಲವ್ ಮಾಡಿದ ಹುಡುಗಿಯಾಗಿರುವುದಿಲ್ಲ.
  28. ಬಸ್ಸು, ರೈಲು, ವಿಮಾನದಲ್ಲಿ ವಿಂಡೋ ಸೀಟನ್ನು ಅವರಿಗೇ ಬಿಟ್ಟುಕೊಡಬೇಕು. ಒಂದೇ ವಿಂಡೋ ಸೀಟ್ ಇದ್ದರೆ ನಿಮ್ಮ ಮಗನೋ ಮಗಳೋ ಅದನ್ನು ಪಡೆಯುತ್ತಾರೆ.
  29. ಮನೆಗೆ ಅವರ ನೆಂಟರು ಬಂದರೆ ವಾರಪೂರ್ತಿ ವಿಶೇಷ ಅಡುಗೆ. ನಿಮ್ಮ ನೆಂಟರು ಬಂದರೆ ಅವಳಿಗೆ ತಲೆ ಅಥವಾ ಹೊಟ್ಟೆನೋವು ಬರುತ್ತದೆ. ಪ್ರತಿದಿನ ಹೋಟೆಲ್‌ಗೆ ಕರೆದುಕೊಂಡು ಹೋಗಬೇಕು ಅಥವಾ ಹೋಟೆಲ್‌ನಿಂದ ತರಬೇಕು. ಹಾಗಾಗಿ ಎರಡೇ ದಿನಕ್ಕೆ ಅವರು ಹೊರಡುತ್ತಾರೆ. ಒಂದು ರೀತಿಯಲ್ಲಿ ಒಳ್ಳೆಯದೇ.
  30. ಮೆಟ್ರೋದಲ್ಲಿ ಕೂತ 15 ನಿಮಿಷದ ಪ್ರಯಾಣದಲ್ಲೇ ಮಗುವಿನ ಹೊಟ್ಟೆಗೆ ಹಾಕಬೇಕಾಗುತ್ತದೆ. ಅದಕ್ಕಾಗಿ ಅರ್ಧ ಕೊಳೆತ, ವಾಸನೆ ಬರುತ್ತಿರುವ ಬಾಳೆಹಣ್ಣು ಬ್ಯಾಗಿನಿಂದ ಹೊರಬರುತ್ತದೆ. ಆಗ ಮಗುವನ್ನು ನೀವು ಎತ್ತಿಕೊಳ್ಳಬೇಕು ಮತ್ತು ತಿನ್ನಿಸಬೇಕು. ಏಕೆಂದರೆ ಅವರು ಹಾಕಿಕೊಂಡು ಬಂದ ಡ್ರೆಸ್ ದುಬಾರಿಯದು.
  31. ನಿಜಕ್ಕೂ ನೋಡಲು ಚೆನ್ನಾಗಿರುವವರು ಸಿನಿಮಾಕ್ಕೆ ಸೇರಿಕೊಳ್ಳುತ್ತಾರೆ. ಇನ್ನುಳಿದವರು ಧಾರಾವಾಹಿಯಲ್ಲಿ ನಟಿಸುತ್ತಾರೆ. ಆಮೇಲೂ ಉಳಿದವರು ಮದುವೆಯಾಗುವಂತಿರುವುದಿಲ್ಲ.
  32. ಅವಳು ಸೆಕ್ಸಿ. ಅವಳ ಕಣ್ಣುಗಳು ಮಾದಕವಾಗಿವೆ. ತುಟಿ ಸುಂದರವಾಗಿದೆ... ಹಾಗಂತ ಅವಳು ನಂಬಿದ್ದಾಳೆ. ನೀವೂ ಅದನ್ನೇ ನಂಬಬೇಕು ಮತ್ತು ಬಾಯಿಯಲ್ಲಿ ಹೇಳಬೇಕು.
  33. ಮಕ್ಕಳ ಹೋಮ್‌ವರ್ಕ್‌ನಲ್ಲಿ ಗಣಿತದ ಲೆಕ್ಕಗಳನ್ನು ನೀವೇ ಹೇಳಿಕೊಡಬೇಕು. ಅವರು ಸೈನ್ಸ್ ಗ್ರ್ಯಾಜುಯೇಟ್ ಆಗಿದ್ದರೂ, ಅದರಲ್ಲಿ ಗಣಿತದ ಮೂರು ಪೇಪರ್ ಇದ್ದಿದ್ದರೂ.
  34. ಅವರ ಜೊತೆ ಶಾಪಿಂಗ್ ಹೋಗುವುದೆಂದರೆ ನಿಮ್ಮ ಪಾತ್ರ ಅಲ್ಲಿ ಕ್ಯಾರಿ ಬ್ಯಾಗ್ ಹಿಡಿದುಕೊಳ್ಳುವುದು ಮಾತ್ರ. ಅವರು ನಿಮಗಾಗಿಯೇ ಶಾಪಿಂಗ್ ಮಾಡುತ್ತಿದ್ದರೂ.
  35. ನಿಮ್ಮ ಹುಟ್ಟುಹಬ್ಬಕ್ಕೆ ಅವಳು ಪ್ಯಾಂಟು-ಶರ್ಟ್ ಗಿಫ್ಟ್ ಕೊಟ್ಟರೆ ಅದರರ್ಥ ಅವಳ ಹುಟ್ಟುಹಬ್ಬಕ್ಕೆ ನೀವು ಗೋಲ್ಡ್‌ರಿಂಗ್ ಕೊಡಬೇಕೆಂದೂ, ಅವಳೇ ಗೋಲ್ಡ್‌ರಿಂಗ್ ಕೊಟ್ಟರೆ ನೀವು ಚಿನ್ನದ ನೆಕ್ಸೇಸ್ ಕೊಡಿಸಬೇಕೆಂದೂ ಅಲಿಖಿತ ನಿಯಮವಿದೆ.
  36. ಅತ್ತೆ ಮನೆ ಹತ್ತಿರದಲ್ಲೇ ಇರುವುದರಿಂದ ವಾರಕ್ಕೊಮ್ಮೆಯಾದರೂ ಪುಳಿಯೊಗರೆ, ವಾಂಗೀಭಾತ್, ಮೊಸರನ್ನ ಇತ್ಯಾದಿಗಳ ಪಾರ್ಸಲ್ ಬರುತ್ತದೆ. ಅದನ್ನು ತಿಂದು ನಿಮ್ಮ ಹೊಟ್ಟೆ ಊದಿಕೊಂಡರೆ ಅತ್ತೆಯೇ ಮಗಳ ಹತ್ತಿರ ದೂರು ಹೇಳುತ್ತಾರೆ.
  37. ನಿಮಗೆ ಪ್ರೀತಿಯನ್ನು ವ್ಯಕ್ತಪಡಿಸುವುದು ಹೇಗೆಂದು ಗೊತ್ತಿಲ್ಲ. ಅವರಿಗೆ ಗೊತ್ತಿದೆ. ಅವರ ಕೊಂಕಿನಿಂದ ಆಗಾಗ ಅದು ನಿಮಗೆ ತಿಳಿಯುತ್ತದೆ. ಆದರೆ, ಅವರಿಗೆ ಗೊತ್ತಿರುವುದನ್ನು ಗಂಡನಿಗೆ ಖರ್ಚು ಮಾಡಿ ವೇಸ್ಟ್ ಮಾಡುವಷ್ಟು ದಡ್ಡಿಯರಲ್ಲ ಅವರು.
  38. ಅವರೂ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವುದರಿಂದ ನಿಮಗಿಂತ ಮೊದಲೇ ಫಾರಿನ್ನಿಗೆ ಹೋಗುವ ಚಾನ್ಸ್ ಅವರಿಗೆ ಸಿಗುತ್ತದೆ. ಆಗ ನೀವು ಕೆಲಸ ಬಿಟ್ಟು ಅವರ ಜೊತೆ ಹೋಗಬೇಕಾಗಿ ಬರುವ ಅಪಾಯವಿದೆ.
  39. ಅವರಿಗೆ ಸಿಟ್ಟು ಜಾಸ್ತಿ. ಆದರದನ್ನು ನೀವು ಹೇಳುವಂತಿಲ್ಲ. ಹೇಳಿದರೆ ಇನ್ನೂ ಸಿಟ್ಟು ಬರುತ್ತದೆ. ಹೇಳದಿದ್ದರೆ, ಹೇಗೂ ಬರುತ್ತಿರುತ್ತದೆ.
  40. ಮನೆಗೆ ಎರಡು ಟೀವಿ ಬೇಕಾಗುತ್ತದೆ. ಒಂದು ಸೀರಿಯಲ್‌ಗೆ. ಇನ್ನೊಂದು ನಿಮಗೆ ಅಪರೂಪಕ್ಕೆ ಕ್ರಿಕೆಟ್ ಮ್ಯಾಚ್ ನೋಡಲು.
  41. ಪಾರ್ಟಿಗಳಿಗೆ ಹೋಗಬೇಕೆಂದರೆ ಅವರನ್ನು ಕರೆದುಕೊಂಡು ಹೋಗುವುದು ಕಡ್ಡಾಯ. ಪಾರ್ಟಿಗೆ ಹೋಗಿ ಮೊಸರನ್ನ ತಿಂದುಕೊಂಡು ಬರುವಷ್ಟು ಮುಗ್ಧರು ನೀವಲ್ಲದ ಕಾರಣ, ಹೆಂಡತಿ ಜೊತೆಗಿದ್ದರೆ ಅದನ್ನಲ್ಲದೇ ಬೇರೇನನ್ನೂ ಮುಟ್ಟಲು ಸಾಧ್ಯವಿಲ್ಲದ ಕಾರಣ, ಹೋಗೋದೇ ಬೇಡ ಎಂಬ ನಿರ್ಧಾರಕ್ಕೇ ಬರಬೇಕಾಗುತ್ತದೆ.
  42. ಅವರ ಪ್ರಕಾರ, ನಿಮಗೆ ಅವರು ಸಿಕ್ಕಿದ್ದು ಅದೃಷ್ಟ. ಕಟು ಸತ್ಯ ಹೇಳಿ ಜಯಿಸಿಕೊಳ್ಳುವ ತಾಕತ್ತು ನಿಮಗಿದ್ದರೆ ಇದನ್ನು ಅಲ್ಲಗಳೆಯಬಹುದು. ನೆನಪಿಡಿ, ಹೆಂಡತಿಯನ್ನು ಎದುರು ಹಾಕಿಕೊಂಡು ಬದುಕಿದವರು ಬಹಳ ವಿರಳ.
  43. ನೀವು ಮನೆಗೆಲಸದಲ್ಲಿ ಹೆಲ್ಪ್ ಮಾಡದಿದ್ದರೆ ಬೇರೆಯವರ ಬಳಿ ಅದನ್ನೇ ಹೇಳುತ್ತಾರೆ. ಹೆಲ್ಪ್ ಮಾಡಿದರೆ 'ನಮ್ಮನೆಯವ್ರು ಇಡೀ ದಿನ ಅಡಿಗೆ ಮನೆಯಲ್ಲೇ ಇರ್ತಾರೆ' ಅಂತ ಹೇಳಿ ಮರ್ಯಾದೆ ತೆಗೆಯುತ್ತಾರೆ.
  44. ಬೆಂಗಳೂರು ಹುಡುಗಿಯರು ಬೆಂಗಳೂರಿನಲ್ಲಿ ಇರುವವರನ್ನೇ ಮದುವೆಯಾಗುತ್ತಾರೆ. ಹಾಗಾಗಿ ತವರು ಮನೆಗೆ ಹೋಗಿ 15 ದಿನ ಉಳಿದುಕೊಳ್ಳುವ ಸೀನೇ ಇಲ್ಲ. ಬೆಳಿಗ್ಗೆ ಹೋದರೆ ಸಂಜೆ ವಾಪಸ್. ಅಂದರೆ ಜೀವನಪೂರ್ತಿ ನಿಮಗೆ ಸ್ವಾತಂತ್ರ್ಯವಿಲ್ಲ.
  45. ಹದಿನೈದು ದಿನಕ್ಕೊಮ್ಮೆಯಾದರೂ ಬ್ರಿಗೇಡ್ ರೋಡು, ಕಮರ್ಷಿಯಲ್ ಸ್ಟ್ರೀಟ್‌ಗೆ ಕರೆದುಕೊಂಡು ಹೋಗಬೇಕು. ಆದರೆ ನೀವು ಅಲ್ಲಿ ಹುಡುಗಿಯರನ್ನು ನೋಡುವಂತಿಲ್ಲ. ಇದ್ಯಾವ ಕರ್ಮ ಕಿಸೆಗೂ ಚಕ್ರ, ಖುಷಿಗೂ ಚಕ್ರ.
  46. ನಿಮ್ಮ ಸ್ನೇಹಿತರನ್ನು ಮನೆಗೆ ಕರೆದುಕೊಂಡು ಬಂದರೆ, ಅವರು ಹೋದಮೇಲೆ 'ಅವರೆಷ್ಟು ಚೆನ್ನಾಗಿ ಮಾತಾಡ್ತಾರೆ, ನೀವೂ ಇದೀರಾ' ಎಂಬ ದೂಷಣೆ ಗ್ಯಾರಂಟಿ. ಅವರ ಗೆಳತಿಯರು ಮನೆಗೆ ಬಂದು ಹೋದ ಮೇಲೆ ನೀವೇನಾದರೂ ಹಾಗೇ ಹೇಳಿದಿರೋ ಕತೆ ಮುಗಿಯಿತು.
  47. ಸೋಮವಾರ ತಡವಾಗಿ ಮನೆಗೆ ಬರುವಂತಿಲ್ಲ.
  48. ಮಂಗಳವಾರ ತಡವಾಗಿ ಮನೆಗೆ ಬರುವಂತಿಲ್ಲ.
  49. ಬುಧವಾರ ತಡವಾಗಿ ಮನೆಗೆ ಬರುವಂತಿಲ್ಲ.
  50. ಗುರುವಾರ ತಡವಾಗಿ ಮನೆಗೆ ಬರುವಂತಿಲ್ಲ.
(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement