ಮಹಾರಾಷ್ಟ್ರದಲ್ಲಿ 7 ಮಾವೋವಾದಿ ಹತ್ಯೆ
ಗೊಂಡಿಯಾ: ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯಲ್ಲಿ ಮಂಗಳವಾರ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಗಳು ನಡೆಸಿದ ನಕ್ಸಲ್ ವಿರೋಧಿ ಕಾರ್ಯಾಚರಣೆ ವೇಳೆ 7 ಮಂದಿ ಮಾವೋವಾದಿಗಳು ಹತರಾಗಿದ್ದಾರೆ.
ಇಂದು ಬೆಳಗಿನ ಜಾವ ಬೇಟ್‌ಕಾಠಿ ಅರಣ್ಯ ಪ್ರದೇಶದಲ್ಲಿ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 7 ಜನ ನಕ್ಸಲರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೊಂಡಿಯಾ-ಗಡ್‌ಚಿರೋಲಿ ಗಡಿಯಲ್ಲಿ ನಕ್ಸಲರು ಮತ್ತು ಸಿ-50 ಕಮಾಂಡೋ ಪಡೆಗಳ ಮುಖಾಮುಖಿಯಾದಾಗ ಈ ಘಟನೆ ನಡೆದಿದೆ. ಬೇಟ್‌ಕಾಠಿ ಅರಣ್ಯ ಪ್ರದೇಶದಲ್ಲಿ ನಕ್ಸಲರು ಅಡಗಿಕೊಂಡಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಸೋಮವಾರ ರಾತ್ರಿಯೇ ಆ ಪ್ರದೇಶವನ್ನು ಸುತ್ತುವರಿದಿದ್ದವು. ಈ ವೇಳೆ ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ ಭದ್ರತಾ ಪಡೆ ಸಿಬ್ಬಂದಿಗಳಿಗೆ ಯಾವುದೇ ಅನಾಹುತವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮಾವೋವಾದಿಗಳ ಶವಗಳನ್ನು ಗಡ್‌ಚಿರೋಲಿಗೆ ತರಲಾಗಿದ್ದು, ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಗಡ್‌ಚಿರೋಲಿ ಪೊಲೀಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಧರ್ಮೇಂದ್ರ ಜೋಶಿ ತಿಳಿಸಿದರು.