ಮೋದಿ ರ್ಯಾಲಿಗೆ ತೆರಿಗೆ ಕಟ್ಟಿ: ಬಿಜೆಪಿಗೆ ಅಬಕಾರಿ ಇಲಾಖೆ ನೋಟಿಸ್
ನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ರ್ಯಾಲಿಗಳಿಗೆ ತೆರಿಗೆ ವಿನಾಯಿತಿ ನೀಡುವುದಿಲ್ಲ ಎಂದಿರುವ ಕೇಂದ್ರೀಯ ಅಬಕಾರಿ ಗುಪ್ತಚರ ನಿರ್ದೇಶನಾಲಯ(ಡಿಜಿಸಿಇಐ), ಮೋದಿ ರ್ಯಾಲಿಗಳಲ್ಲಿ ಟಿಕೆಟ್ ಮೂಲಕ ಸಂಗ್ರಹಿಸುತ್ತಿರುವ ಹಣಕ್ಕೆ ತೆರಿಗೆ ಪಾವತಿಸುವಂತೆ ಮಂಗಳವಾರ ಬಿಜೆಪಿಗೆ ನೋಟಿಸ್ ನೀಡಿದೆ.
ದೇಶಾದಾದ್ಯಂತ ಬಿಜೆಪಿ ನರೇಂದ್ರ ಮೋದಿ ಅವರ ರ್ಯಾಲಿಗಳನ್ನು ನಡೆಸಿ, ರ್ಯಾಲಿಗಳಿಗೆ ಪ್ರವೇಶ ಶುಲ್ಕ ನಿಗದಿಪಡಿಸಿ ಲಕ್ಷಾಂತರ ರುಪಾಯಿ ಸಂಗ್ರಹಿಸಲಾಗುತ್ತಿದ್ದು, ಈ ಹಣಕ್ಕೆ ಸಂಬಂಧಿಸಿದಂತೆ ತೆರಿಗೆ ಪಾವತಿಸುವಂತೆ ಹಾಗೂ ರ್ಯಾಲಿಗಳಲ್ಲಿ ಸಂಗ್ರಹಿಸಿರುವ ಹಣದ ಮಾಹಿತಿ ನೀಡುವಂತೆ ಛತ್ತೀಸ್‌ಗಡದ ಬಿಜೆಪಿ ಘಟಕಕ್ಕೆ ನೋಟಿಸ್ ಜಾರಿ ಮಾಡಿದೆ.
ಬಿಜೆಪಿ ರಾಜಕೀಯ ಚಳುವಳಿಗಳು ತೆರಿಗೆ ರಿಯಾಯಿತಿ ಪಡೆಯಲು 'ಮನರಂಜನಾ' ಕಾರ್ಯಕ್ರಮವಲ್ಲ. ಹೀಗಾಗಿ ರ್ಯಾಲಿಗಳಲ್ಲಿ ಮಾರಾಟ ಮಾಡಲಾಗಿರುವ ಟಿಕೆಟ್‌ಗಳಿಗೆ ತೆರಿಗೆ ಪಾವತಿಸಬೇಕಿದೆ ಎಂದು ಡಿಜಿಸಿಇಐ ವಾದಿಸಿದೆ.
ಇತ್ತೀಚೆಗೆ ಭಾರತದ ವಿವಿಧ ಸ್ಥಳಗಳಲ್ಲಿ ಮೋದಿ ಅವರ ಸಾರ್ವಜನಿಕ ಸಭೆಗಳನ್ನು ನಡೆಸಲಾಗುತ್ತಿದ್ದು, ಆ ಮೂಲಕ ರ್ಯಾಲಿಗಳಿಗೆ ಪ್ರವೇಶ ಟಿಕೆಟ್‌ಗಳನ್ನು ಮಾರಾಟ ಮಾಡಿ ಅಪಾರ ಪ್ರಮಾಣದಲ್ಲಿ ಹಣ ಸಂಗ್ರಹಿಸುತ್ತಿರು ಹಿನ್ನೆಲೆಯಲ್ಲಿ ಡಿಜಿಸಿಇಐ ನೋಟಿಸ್ ನೀಡಿದೆ.