ಲೋಕಸಭೆಯಲ್ಲಿ ತೆಲಂಗಾಣ ವಿಧೇಯಕ ಅಂಗೀಕಾರ
ತೀವ್ರ ವಿರೋಧದ ನಡುವೆಯೂ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ವಿಧೇಯಕವನ್ನು ಮಂಗಳವಾರ ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ.
ನವದೆಹಲಿ: ತೀವ್ರ ವಿರೋಧದ ನಡುವೆಯೂ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ವಿಧೇಯಕವನ್ನು ಮಂಗಳವಾರ ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ.
ಸೀಮಾಂಧ್ರ ಸಂಸದರ ಗದ್ದಲದ ನಡುವೆಯೂ ಇಂದು ಮಧ್ಯಾಹ್ನ ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ತೆಲಂಗಾಣ ಮಸೂದೆಯನ್ನು ಮಂಡಿಸಿದರು. ಮಸೂದೆ ಮಂಡನೆಯಾದ 23 ನಿಮಿಷಗಳಲ್ಲೇ ವಿಧೇಯಕವನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.
ಸರ್ಕಾರದ ಈ ಆತುರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರು, ನಾವು ಸಹ ತೆಲಂಗಾಣ ವಿಧೇಯಕದ ಪರವಾಗಿದ್ದೇವೆ. ಮಸೂದೆಯ ಬಗ್ಗೆ ಚರ್ಚಿಸಲು ನಮಗೆ ಅವಕಾಶ ಕೊಡಿ ಎಂದು ಒತ್ತಾಯಿಸಿದರು.
ಇನ್ನು ಸ್ಪೀಕರ್ ಮೀರಾ ಕುಮಾರ್ ಅವರ ಆದೇಶದ ಮೇರೆಗೆ ವಿಧೇಯಕದ ಬಗ್ಗೆ ಚರ್ಚೆ ವೇಳೆ ಲೋಕಸಭಾ ಟಿವಿಯ ನೇರ ಪ್ರಸಾರವನ್ನು ಸ್ಥಗಿತಗೊಳಿಸಲಾಗಿತ್ತು. ಅಲ್ಲದೆ ಲೋಕಸಭೆಯ ಎಲ್ಲ ಬಾಗಿಲನ್ನೂ ಮುಚ್ಚಲಾಗಿತ್ತು.
ತೆಲಂಗಾಣ ವಿಧೇಯಕಕ್ಕೆ ಅಂಗೀಕಾರ ದೊರೆಯುತ್ತಿದ್ದಂತೆ ಆ ಭಾಗದ ಜನತೆ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ.