ಆಂಧ್ರ ಸಿಎಂ ಕಿರಣ್ ಕುಮಾರ್ ರೆಡ್ಡಿ ರಾಜಿನಾಮೆ
ಆಂಧ್ರಪ್ರದೇಶ ವಿಭಜನೆ ವಿರೋಧಿಸಿ ಆಂಧ್ರಪ್ರದೇಶ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರು ಬುಧವಾರ ರಾಜಿನಾಮೆ ನೀಡಿದ್ದಾರೆ.
ಹೈದರಾಬಾದ್: ಆಂಧ್ರಪ್ರದೇಶ ವಿಭಜನೆ ವಿರೋಧಿಸಿ ಆಂಧ್ರಪ್ರದೇಶ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರು ಬುಧವಾರ ರಾಜಿನಾಮೆ ನೀಡಿದ್ದಾರೆ.
ಈ ಸಂಬಂಧ ಇಂದು ಹೈದರಾಬಾದ್‌ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಿರಣ್ ಕುಮಾರ್ ರೆಡ್ಡಿ ಅವರು, ಆಂಧ್ರ ವಿಭಜನೆಯನ್ನು ಖಂಡಿಸಿ, ತೆಲುಗು ಜನರ ಐಕ್ಯತೆಗಾಗಿ ತಾವು ಸಿಎಂ ಸ್ಥಾನಕ್ಕೆ, ಶಾಸಕ ಸ್ಥಾನಕ್ಕೆ ಹಾಗೂ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೂ ರಾಜಿನಾಮೆ ನೀಡುತ್ತಿರುವುದಾಗಿ ತಿಳಿಸಿದರು. ಆದರೆ ಕಾಂಗ್ರೆಸ್ ಪಕ್ಷಕ್ಕೂ ಗುಡ್‌ಬೈ ಹೇಳಿರುವ ಕಿರಣ್ ಕುಮಾರ್ ರೆಡ್ಡಿ ಅವರು, ತಮ್ಮ ಮುಂದಿನ ರಾಜಕೀಯ ನಡೆಯೇನು ಎಂಬುದರ ಬಗ್ಗೆ ಸ್ಪಷ್ಟ ಉತ್ತರ ನೀಡಿಲ್ಲ.
ಇದೇ ವೇಳೆ ಕೇಂದ್ರ ಸರ್ಕಾರ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಸೀಮಾಂಧ್ರ ಸಂಸದರನ್ನು ಹೊರಗಿಟ್ಟು ಲೋಕಸಭೆಯಲ್ಲಿ ಕಳ್ಳರ ರೀತಿ ತೆಲಂಗಾಣ ಮಸೂದೆಯನ್ನು ಅಂಗೀಕರಿಸಲಾಗಿದೆ ಎಂದರು.
ಆಂಧ್ರಪ್ರದೇಶ ವಿಧಾನಸಭೆಯ ನಿರ್ಣಯದ ವಿರುದ್ಧ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಆದರೆ ರಾಜ್ಯ ವಿಭಜನೆಯಿಂದ ಎಲ್ಲ ವರ್ಗಗಳಿಗೂ ಅನ್ಯಾಯವಾಗಿದೆ ಎಂದು ರೆಡ್ಡಿ ಹೇಳಿದರು.
ಕಿರಣ್ ಕುಮಾರ್ ರೆಡ್ಡಿ ಅವರು ಸುದ್ದಿಗೋಷ್ಠಿಯ ಬಳಿಕ ತಮ್ಮ ಬೆಂಬಲಿಗ ಶಾಸಕರೊಂದಿಗೆ ನೆರವಾಗಿ ರಾಜಭವನಕ್ಕೆ ತೆರಳಿ ರಾಜ್ಯಪಾಲ ಇ.ಎಸ್.ಎಲ್. ನರಸಿಂಹನ್‌ರಿಗೆ ರಾಜಿನಾಮೆ ಪತ್ರ ಸಲ್ಲಿಸಿದರು. ಅಲ್ಲದೆ ತಾವು ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಶೀಘ್ರವೇ ತಮ್ಮ ರಾಜಿನಾಮೆಯನ್ನು ಅಂಗೀಕರಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿದರು. 8 ಸಚಿವರು, 13 ಶಾಸಕರು ಹಾಗೂ ಐವರು ವಿಧಾನ ಪರಿಷತ್ ಸದಸ್ಯರು ಕಿರಣ್ ಕುಮಾರ್ ರೆಡ್ಡಿಗೆ ಸಾಥ್ ನೀಡಿದರು.