ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸುನಿ ಹನಿ: ಅಮ್ಮಾ,ನಿನಗೆ ನಾಯಿ ಏಕೆ ಬೇಡ?

ನನ್ನ ನಿಸ್ಸಹಾಯಕ ಮೌನದಲ್ಲಿ ಅಮ್ಮ..

Lingaraj Badiger
Updated On : 19 Feb 2014, 12:50 pm

ನನ್ನ ನಿಸ್ಸಹಾಯಕ ಮೌನದಲ್ಲಿ ಅಮ್ಮ ಮಾಡದ ತಪ್ಪನ್ನು ಇನ್ನೊಮ್ಮೆ ಕ್ಷಮಿಸಿದೆ: ನಮ್ಮಮ್ಮ ಅರ್ಥವಾದಂತೆ ನಾನು ಅರ್ಥವಾಗಬಹುದು ಮುಂದೊಂದು ದಿನ...

ಚಿಕ್ಕವಳಿದ್ದಾಗ ನನಗೂ ಎಲ್ಲಾ ಮಕ್ಕಳಂತೆ ನಾಯಿ ಸಾಕಬೇಕು. ಅದು ನಾನು ಹೇಳಿದಂತೆ ಕೇಳಬೇಕು. ಅದಕ್ಕೆ ಬುದ್ಧಿ(?) ಕಲಿಸಬೇಕು. ಕಥೆಗಳಲ್ಲಿಯಂತೆ ಶತ್ರುಗಳನ್ನು ಅಟ್ಯಾಕ್ ಮಾಡುವಾಗ ಅದು ನನಗೆ ನೆರವಾಗಬೇಕು ಎಂಬ ಆಸೆಗಳಿದ್ದವು.

ನಮ್ಮ ತಂದೆ ಎಲ್ಲ ತಂದೆಯರಂತೆ ನಾಯಿ ತಂದುಕೊಡಲು ಉತ್ಸುಕರಾಗಿದ್ದರು. ನಮ್ಮ ತಾಯಿ ಬಹುತೇಕ ತಾಯಿಯರಂತೆ 'ನಿಮ್ಮನ್ನು ಸಾಕೋದಲ್ದೆ ನಾಯಿಯನ್ನೂ ಸಾಕಬೇಕಾ? ಅದು ಕಕ್ಕ ಮಾಡುತ್ತೆ (ಯಾಕೆ ಮಾಡಬಾರ್ದ?), ಅದರ ರೋಮಗಳು ಉದುರುತ್ತೆ (ಎಂಥ ರೋಮಾಂಚನ!), ಇಂಜೆಕ್ಷನ್ ಹಾಕಿಸಬೇಕು, ನೀವೆಲ್ಲ ಸ್ಕೂಲು, ಆಫೀಸು ಅಂತ ಹೋಗ್ತೀರ, ಅದನ್ನು ನನ್ನ ತಲೆಗೆ ಕಟ್ಟಿ... ನನ್ನ ಕೈಲಿ ಆಗೋದೇ ಇಲ್ಲ' ಅಂದುಬಿಟ್ರು.

ಅಂದಿನಿಂದ ನಮ್ಮಮ್ಮನೇ ನನ್ನ ನಾಯಿ ಕನಸುಗಳ ಪ್ರಥಮ ಶತ್ರುವಾಗಿಬಿಟ್ಟರು. ನಾನು ಕೊರಳಿಗೆ ಚೈನ್ ಕಟ್ಟಿ ವಾಕ್‌ಗೆ ಕರೆದುಕೊಂಡು ಹೋಗುತ್ತಾರಲ್ಲ ಎದುರುಮನೆ ಆಂಟಿ, ಆಗವರು ಎಷ್ಟು ಶ್ರೀಮಂತರಂತೆ ಕಾಣುತ್ತಾರೆ. ಅಂಥ ಭಾಗ್ಯವನ್ನು ನನ್ನಿಂದ ಕಸಿದುಕೊಂಡು ಬಿಟ್ರಲ್ಲ. ಎದುರು ಮನೆ ಕವಿತ ಕಂತ್ರಿನಾಯಿಗೆ ಅಂಗಡಿ ಪೊಟ್ಟಣದ ಹುರಿದಾರ ಕಟ್ಟಿಕೊಂಡು ಓಡಾಡಿದರೂ ಅವರಮ್ಮ ಏನೂ ಅನ್ನಲ್ಲ. ಲೆವೆಲ್ಲು ಹೇಗಿರುತ್ತಿತ್ತು ನೋಡಿ ನಮ್ಮ ಬೀದಿಯ ಮಕ್ಕಳ ನಡುವೆ.

'ಪ್ರಾಣಿಗಳ ಜೊತೆ ಒಡನಾಡಿ ಬೆಳೆದ ಮಕ್ಕಳು ಶಾರ್ಪ್ ಆಗ್ತಾರೆ, ಒಡೆಯನ ಶವವನ್ನು ಅವರ ಕಡೆಯವರು ಬರುವ ತನಕ ಕಾದ ನಾಯಿ...' ಇತ್ಯಾದಿ ಸುದ್ದಿ, ಕತೆಗಳನ್ನು ಕೇಳುವಾಗ ನಾಯಿ 'ಕೈಗೆಟುಕದ ಉತ್ತರ'ಗಳಿಗೆ ಪ್ರತಿಮೆಯಾಗಿ ನನ್ನಲ್ಲಿ ಬೆಳೆಯುತ್ತಿತ್ತು. ನಮ್ಮಮ್ಮ ನಾಯಿ ಸಾಕಲು ಬಿಡಲಿಲ್ಲ ಎಂಬುದು ಅಸಹನೆಯಾಗಿ ಕಾಡುತ್ತಿತ್ತು. ಸುಮಾರು ಇಪ್ಪತ್ತು ವರ್ಷ.
ಆಮೇಲೇನಾಯ್ತಪ್ಪ ಅಂದ್ರೆ......

ಕಥೆಯಲ್ಲಿ ಟ್ವಿಸ್ಟ್!
ನಂಗೆ ಮಗಳು ಹುಟ್ಟಿದಳು. ನನ್ನ ಮಗಳು ಒಂದು ಹೆಜ್ಜೆ ಮುಂದೆ ಹೋಗಿ ಮೊಲಬೇಕು ಅಂತ ಆಸೆ ಪಡತೊಡಗಿದಳು. ಇವಳ ಅಪ್ಪ ಎಲ್ಲ ತಂದೆಯರಂತೆ ತಂದು ಕೊಡ್ತೀನಿ ಅಂದರು. ನಮ್ಮ ತಾಯಿ ಬೇಡ ಅಂದಂತೆ ನಾನೂ ಇವಳ ಮೊಲದ ಕನಸು ಛಿದ್ರ ಮಾಡಬಾರದೆಂದು ನಮ್ಮಮ್ಮನಿಗೆ ವಿರುದ್ಧವಾಗಿ ವರ್ತಿಸಿ ಸೇಡು ತೀರಿಸಿಕೊಳ್ಳಲೆಂದು ಹೂಂ ತನ್ನಿ ಅಂದೆ.
ನಮ್ಮ ಮನೆಗೆ ಒಂದು ಮೊಲ ಬಂದಿತು. ಬಂದ ಮೊದಲ ದಿನವೇ ಕುಡಿಯಲೆಂದು ಕುದಿಸಿ ಆರಿಸಿಟ್ಟ ನೀರನ್ನು ಮೂಸಿಬಿಟ್ಟಿತು. ಶುರುವಾಯಿತು ನನಗೆ ಪ್ರಾಣ ಸಂಕಟ! ನೀರು ಚೆಲ್ಲಬೇಕಾ, ಬೇಡವಾ? ಹಂದಿಜ್ವರ, ಹಕ್ಕಿ ಜ್ವರ ಎಲ್ಲ ಪ್ರಾಣಿಗಳ ಹೆಸರಿನಲ್ಲೂ ಕಾಯಿಲೆಗಳು ಬಂದು ಹೋಗಿವೆ. ಈ ಮೊಲದಿಂದ ಏನಾದರೂ ಮೊಲಜ್ವರ,  ಮಲಜ್ವರ ಬಂದರೆ?
ನಾಯಿಯಂತೆ ಒಂದೆಡೆ ಕಟ್ಟಿ ಹಾಕೋಣ ಎಂದರೆ ಮಗಳು ಒಪ್ಪುವುದಿಲ್ಲ! ಮೊಲವಾದರೂ ಫಾರ್ಮಾಲಿಟಿಗೆ ಅಂತ ಒಂದು ಜಾಗದಲ್ಲಿ ಇರಬೇಕು ಎಂಬುದು ಹೊಳೆಯದೆ ಸೌಟು, ತಟ್ಟೆ, ಮಗಳ ಬಟ್ಟೆ ಎಲ್ಲ ಮೂಸುತ್ತಿತ್ತು. ಬದಲಿಗೆ ಮೊಲಕ್ಕೆ ಚೈನು ಕಟ್ಟಿಕೊಂಡು ಎಲ್ಲೆಡೆ ಓಡಾಡುತ್ತಿತ್ತು. ಮಗಳಿಗೆ ಕಚ್ಚಿ ಏನಾದರೂ ರೋಗ ಅಂಟಿದರೆ ಎಂಬ ಭಯ. ಅಲ್ಲದೆ ನಾಯಿಯಂತೆ ಮೊಲಕ್ಕೆ ಯಾವ ಲಸಿಕೆಗಳೂ ಇಲ್ಲಾ ಎಂದು ವೆಟರ್ನಿಟಿ ಡಾಕ್ಟರೊಬ್ಬರು ನನಗೆ ಹೇಳಿದರೂ ಆತಂಕ ಕಡಿಮೆಯಾಗಲಿಲ್ಲ. ಜೊತೆಗೆ ಎಲೆಕೋಸು, ಹುಲ್ಲು, ತರಕಾರಿ ಸಿಪ್ಪೆ ಹಾಕಿದರೆ ಡಯಟ್ ಮಾಡುತ್ತಿದ್ದ ಮೊಲ ಕ್ಯಾರೆಟ್ ತುರಿ ಹಾಕಿದರೆ ಕ್ಷಣದಲ್ಲಿ ತಿಂದು ಹಾಕುತ್ತಿತ್ತು. 'ನಾನು ಹಾಕಿದ್ದಕ್ಕೆ ತಿಂತಿದೆ. ಇನ್ನೂಂಚುರು ಕೊಡಮ್ಮಾ' ಅಂತ ಮಗಳು ಕ್ಯಾರೆಟ್ ತುರಿಸಿ ತುರಿಸಿ ಒಯ್ದು ಹಾಕುತ್ತಿದ್ದರೆ, ಮಗಳಿಗೆ ಒಮ್ಮೆಯೂ ಕ್ಯಾರೆಟ್ ಜ್ಯೂಸ್ ಕುಡಿಸಲಿಲ್ಲ ನಾನು ಅನ್ನೋ ಗಿಲ್ಟು ಮೊಲದ ಮೇಲಿನ ಕೋಪವಾಗಿ ಮಾರ್ಪಾಡಾಯಿತು. 'ಮೊಲಕ್ಕೆ ಸ್ನಾನ ಆಗಲ್ಲ. ಮಾಡಿಸಬೇಡಿ' ಎಂದು 'ತಿಳಿದ' ನಾಲ್ಕಾರು ಹೆಂಗಸರು ಹೇಳಿದರು. ನನ್ನ ಮಗಳಿಗೆ ಅದಕ್ಕೆ ನೀರು ಹಾಕಿ ಅಮ್ಮಆಗುವ ಆಸೆ, ಸ್ನಾನ ಮಾಡಿಸಿದರೂ, ಬಿಟ್ಟರೂ ನಿಧಾನವಾಗಿ ಹರಡುತ್ತಿದ್ದ ಅದರ ವಾಸನೆ, ದುಬಾರಿ ಕ್ಯಾರೆಟ್ ತುರಿ, ರೋಗಗಳ ಭಯ... ಅಂದು ನಮ್ಮಮ್ಮ ಯಾಕೆ ನಾಯಿಬೇಡ ಎಂದಿದ್ದರು ಎಂಬುದು ಸುಮಾರು ಇಪ್ಪತ್ತು ವರ್ಷಗಳ ನಂತರ ನನಗೆ ಅರ್ಥವಾಯಿತು.

ಮೊಲವನ್ನು ಅಲ್ಲಿ ಯಾರಿಗಾದ್ರೂ ಕೊಟ್ಬಿಡಿ ಎಂದೆ. ಇವರು ಹೂಂ ಎಂದರು. ಅದಾಗಲೇ ಒಂದು ಮೊಲ ಸಾಕಿದ್ದ ಹುಡುಗನೊಬ್ಬ ತನ್ನ ಮೊಲಕ್ಕೆ ಜೊತೆಯಾಗುತ್ತದೆ ಎಂದು ಬಂದು ಎತ್ತಿಕೊಂಡು ಹೋಗುತ್ತಿದ್ದರೆ....

ನನ್ನ ಕಾಲುಗಳಲ್ಲಿ ನಿಂತಿದ್ದ ಮಗಳು ಚೀರುತ್ತಿದ್ದಳು: 'ನಂದದು, ನಂದದು ಬಿಟ್ಬಿಡು...'
ನಾನು ನಮ್ಮಮ್ಮನಿಗಿಂತ ಡಿಫರೆಂಟು, ಮಗಳಿಗೆ ಎಲ್ಲವನ್ನೂ ಪೂರ್ಣ ಅರ್ಥ ಮಾಡಿಸಿಬಿಡ್ತೀನಿ. ನನಗೆ ನಾಯಿ ಕೊರಗು ಉಳಿದ ಹಾಗೆ ಮಗಳಿಗೆ ಮೊಲದ ಕೊರಗು ಉಳಿಯಬಾರದು ಹಾಗೆ ವಿವರಿಸಿ ಹೇಳ್ತೀನಿ ಎಂದು ಇಪ್ಪತ್ತು ವರ್ಷಗಳ ಹಿಂದಿನ ನನ್ನ ಕತೆ ಹೇಳಲು ಹೋದೆ. ನಿನ್ನ ಮುಖ ಪರಚಿಬಿಡ್ತೀನಿ ಎಂಬ ಕೋಪದಿಂದ ನನ್ನೆಡೆ ದುರುಗುಟುತ್ತಾ ನೋಡಿದಳು.
ನನ್ನ ನಿಸ್ಸಹಾಯಕ ಮೌನದಲ್ಲಿ ಅಮ್ಮ ಮಾಡದ ತಪ್ಪನ್ನು ಇನ್ನೊಮ್ಮೆ ಕ್ಷಮಿಸಿದೆ: ನಮ್ಮಮ್ಮ ಅರ್ಥವಾದಂತೆ ನಾನು ಅರ್ಥವಾಗಬಹುದು ಮುಂದೊಂದು ದಿನ...       
-ಸುನೀತ ಹೆಚ್.ಡಿ.
anish2620@gmail.com          

(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555
ಸಖಿ ಖರೀದಿಗಾಗಿ  http://www.magzter.com/ಗೆ ಭೇಟಿನೀಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement