ರಾಜೀವ ಹಂತಕರ ಬಿಡುಗಡೆ ಪ್ರಶ್ನಿಸಿ ಕೇಂದ್ರ ಸುಪ್ರೀಂ ಮೊರೆ
ಹಂತಕರ ಬಿಡುಗಡೆಗೆ ಪ್ರಧಾನಿ ವಿರೋಧ
ನವದೆಹಲಿ: ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಹಂತಕರ ಬಿಡುಗಡೆ ಮಾಡಲು ಮುಂದಾಗಿರುವ ತಮಿಳುನಾಡು ಸರ್ಕಾರದ ನಿರ್ಧಾರದ ಬಗ್ಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ತೀವ್ರ ಬೇಸರ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಈ ಸಂಬಂಧ ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ರಾಜೀವ್ ಗಾಂಧಿ ಹಂತಕರನ್ನು ಮೂರು ದಿನಗಳೊಳಗೆ ಬಿಡುಗಡೆ ಮಾಡುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ನಿರ್ಧಾರದ ವಿರುದ್ಧ ಹಾಗೂ ಹಂತಕರ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿದ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರ ಇಂದು ಮೇಲ್ಮನವಿ ಸಲ್ಲಿಸಿದ್ದು, ಅರ್ಜಿ ಮಧ್ಯಾಹ್ನ ವಿಚಾರಣೆಗೆ ಬರಲಿದೆ.
ಈ ಮಧ್ಯೆ, ಯಾವುದೇ ಕಾರಣಕ್ಕೂ ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡುವುದು ಬೇಡ ಎಂದು ಪ್ರಧಾನಮಂತ್ರಿ ಮನಮನೋಹನ್ ಸಿಂಗ್ ಅವರು ಹೇಳಿದ್ದಾರೆ.
ರಾಜೀವ್ ಗಾಂಧಿ ಹಂತಕರಿಗೆ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದ ಬೆನ್ನಲ್ಲೇ ತಮಿಳುನಾಡು ಸರ್ಕಾರ ಬುಧವಾರ ಏಳೂ ಮಂದಿ ಹಂತಕರನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಅಚ್ಚರಿಯೆಂಬಂತೆ ಸರ್ಕಾರದ ಈ ನಿರ್ಧಾರಕ್ಕೆ ಜಯಲಲಿತಾ ಕಡು ವಿರೋಧಿಯೂ ಆಗಿರುವ ಡಿಎಂಕೆ ಸೇರಿದಂತೆ ಬಹುತೇಕ ಎಲ್ಲ ಪಕ್ಷಗಳಿಂದ ಬೆಂಬಲ ವ್ಯಕ್ತವಾಗಿದೆ. ಸರ್ಕಾರದ ಈ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ಮಾತ್ರ ಇದು ಚುನಾವಣಾ ತಂತ್ರ ಎಂದು ಆರೋಪಿಸಿದೆ.