ರಾಜೀವ್ ಹಂತಕರ ಬಿಡುಗಡೆಗೆ ಸುಪ್ರೀಂ ತಡೆ
ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಹಂತಕರ ಬಿಡುಗಡೆ ಮಾಡುವುದಕ್ಕೆ ಗುರುವಾರ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
ನವದೆಹಲಿ: ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಹಂತಕರ ಬಿಡುಗಡೆ ಮಾಡುವುದಕ್ಕೆ ಗುರುವಾರ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
ರಾಜೀವ್ ಗಾಂಧಿ ಹಂತಕರನ್ನು ಮೂರು ದಿನಗಳೊಳಗೆ ಬಿಡುಗಡೆ ಮಾಡುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ನಿರ್ಧಾರದ ವಿರುದ್ಧ ಕೇಂದ್ರ ಸರ್ಕಾರ ಇಂದು ಮೇಲ್ಮನವಿ ಸಲ್ಲಿಸಿತ್ತು. ಮಧ್ಯಾಹ್ನ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಸದಾಶಿವಂ ಅವರು, ಮುಂದಿನ ಆದೇಶದವರೆಗೆ ಹಂತಕರ ಬಿಡುಗಡೆಗೆ ತಡೆ ನೀಡಿ, ವಿಚಾರಣೆಯನ್ನು ಮಾರ್ಚ್ 6ಕ್ಕೆ ಮುಂದೂಡಿದ್ದಾರೆ. ಅಲ್ಲದೆ ಈ ಸಂಬಂಧ ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.
ರಾಜೀವ್ ಗಾಂಧಿ ಹಂತಕರಿಗೆ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದ ಬೆನ್ನಲ್ಲೇ ತಮಿಳುನಾಡು ಸರ್ಕಾರ ಬುಧವಾರ ಏಳೂ ಮಂದಿ ಹಂತಕರನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಅಚ್ಚರಿಯೆಂಬಂತೆ ಸರ್ಕಾರದ ಈ ನಿರ್ಧಾರಕ್ಕೆ ಜಯಲಲಿತಾ ಕಡು ವಿರೋಧಿಯೂ ಆಗಿರುವ ಡಿಎಂಕೆ ಸೇರಿದಂತೆ ಬಹುತೇಕ ಎಲ್ಲ ಪಕ್ಷಗಳಿಂದ ಬೆಂಬಲ ವ್ಯಕ್ತವಾಗಿತ್ತು. ಸರ್ಕಾರದ ಈ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ಮಾತ್ರ ಇದು ಚುನಾವಣಾ ತಂತ್ರ ಎಂದು ಆರೋಪಿಸಿದೆ.