ಪೀಣ್ಯ-ಸಂಪಿಗೆ ರಸ್ತೆ ಮೆಟ್ರೋ ರೈಲು ಇದೇ 28ಕ್ಕೆ ಉದ್ಘಾಟನೆ
ಪೀಣ್ಯದಿಂದ ಸಂಪಿಗೆ ರಸ್ತೆವರೆಗಿನ 10 ಕಿ.ಮೀ ಉದ್ದದ ಮೆಟ್ರೋ ರೈಲು ಮಾರ್ಗಕ್ಕೆ ಇದೇ ಫೆ.28 ರಂದು ವಿದ್ಯುಕ್ತ ಚಾಲನೆ ಸಿಗಲಿದೆ.
ಬೆಂಗಳೂರು: ಪೀಣ್ಯದಿಂದ ಸಂಪಿಗೆ ರಸ್ತೆವರೆಗಿನ 10 ಕಿ.ಮೀ ಉದ್ದದ ಮೆಟ್ರೋ ರೈಲು ಮಾರ್ಗಕ್ಕೆ ಇದೇ ಫೆ.28 ರಂದು ವಿದ್ಯುಕ್ತ ಚಾಲನೆ ಸಿಗಲಿದೆ.
ಮಲ್ಲೇಶ್ವರಂನ ಸಂಪಿಗೆ ರಸ್ತೆಯಿಂದ ಪೀಣ್ಯದವರೆಗಿನ ಮೆಟ್ರೋ ರೈಲು ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯವಾಗಿದ್ದು, ಇದೇ ಫೆ.28ಕ್ಕೆ ಚಾಲನೆ ನೀಡಲಾಗುವುದು. ಅಲ್ಲದೆ ಮಾರ್ಚ್ 1ರಿಂದ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಾಜಿನಗರದ ಮೆಟ್ರೋ ರೈಲು ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಟ್ರೋ ರೈಲಿನ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದರು. ಸುಮಾರು 10 ಕಿ.ಮೀ ಉದ್ದದ ಈ ಮಾರ್ಗದಲ್ಲಿ ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೂ ಸಂಚಾರ ನಿರ್ವಹಿಸಲಿದೆ. ಒಂದು ವೇಳೆ ಜನರಿಂದ ಬೇಡಿಕೆ ಬಂದರೆ ಸಂಚಾರ ಅವದಿಯನ್ನು ಹೆಚ್ಚಿಸಲಾಗುವುದು ಎಂದರು.
ಪೀಣ್ಯ-ಸಂಪಿಗೆ ರಸ್ತೆಯ ಮೆಟ್ರೋ ರೈಲು ಮಾರ್ಗಕ್ಕೆ ಕೇಂದ್ರ ರೈಲ್ವೇ ಸುರಕ್ಷಿತ ಮಂಡಳಿ ಕಳೆದ ವಾರವಷ್ಟೇ ಸಂಚಾರಕ್ಕೆ ಯೋಗ್ಯವಾಗಿದೆ ಎಂದು ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಪೀಣ್ಯ-ಸಂಪಿಗೆ ಮೆಟ್ರೋ ಮಾರ್ಗವನ್ನು ಲೋಕಾರ್ಪಣೆಗೊಳಿಸಲು ಬಿಎಂಆರ್ಸಿಎಲ್ ಮುಂದಾಗಿದೆ.
ಸುಮಾರು 10 ಕಿ.ಮೀ ದೂರದ ಈ ಮಾರ್ಗದಲ್ಲಿ ಮೆಟ್ರೋ ರೈಲು ಸುಮಾರು 80 ರಿಂದ 90 ಕಿ.ಮೀ ವೇಗದಲ್ಲಿ ಚಲಿಸಲಿದ್ದು, ನಿಗದಿತ ದೂರವನ್ನು 18 ರಿಂದ 19 ನಿಮಿಷದಲ್ಲಿ ಕ್ರಮಿಸಬಲ್ಲ ಸಾಮರ್ಥ್ಯ ಹೊಂದಿದೆ. ಪೀಣ್ಯದಿಂದ ಸಂಪಿಗೆ ರಸ್ತೆವರೆಗಿನ ಪ್ರಯಾಣ ದರವನ್ನು 23 ರುಪಾಯಿಗೆ ನಿಗದಿಪಡಿಸಲಾಗಿದ್ದು, ಸ್ಮಾರ್ಟ್ಕಾರ್ಡ್ ಹೊಂದಿರುವರಿಗೆ ಟಿಕೆಟ್ ದರದಲ್ಲಿ ಶೇ. 15.ರಷ್ಟು ರಿಯಾಯ್ತಿ ಸಿಗಲಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.