ಮೋದಿ ಆಯ್ತು ಈಗ ರಾಹುಲ್ ಗಾಂಧಿಗೆ ಕೇಜ್ರಿವಾಲ್ ಪತ್ರ
ಕೆಲ ದಿನಗಳ ಹಿಂದೆ ನೀವು ಪ್ರಧಾನಿಯಾದರೆ ಗ್ಯಾಸ್ನ ದರ ಕಡಿಮೆ ಮಾಡುತ್ತೀರಾ ಎಂದು ಪ್ರಶ್ನಿಸಿ ಗುಜರಾತ್ ಮುಖ್ಯಮಂತ್ರಿ ..
ನವದೆಹಲಿ: ಕೆಲ ದಿನಗಳ ಹಿಂದೆ ನೀವು ಪ್ರಧಾನಿಯಾದರೆ ಗ್ಯಾಸ್ನ ದರ ಕಡಿಮೆ ಮಾಡುತ್ತೀರಾ ಎಂದು ಪ್ರಶ್ನಿಸಿ ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಇದೀಗ ಅದೇ ವಿಷಯ ಸಂಬಂಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.
ಗ್ಯಾಸ್ ದರ ಕಡಿಮೆ ಮಾಡುವುದು ಸೇರಿದಂತೆ ನಾಲ್ಕು ಪ್ರಶ್ನೆಗಳ್ನು ಕೇಜ್ರಿವಾಲ್ ಅವರು ರಾಹುಲ್ ಗಾಂಧಿಗೆ ಬರೆದ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ಅಲ್ಲದೆ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಜತೆಗೆ ಕಾಂಗ್ರೆಸ್ ಪಕ್ಷದ ಸಂಬಂಧವೇನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಎಎಪಿ ನಾಯಕ ಆಗ್ರಹಿಸಿದ್ದಾರೆ.
ಗ್ಯಾಸ್ ದರ ಕಡಿಮೆ ಮಾಡುವ ಬಗ್ಗೆ ನಿಮ್ಮ ನಿಲುವೇನು ಎಂದು ಪ್ರಶ್ನಿಸಿರುವ ಕೇಜ್ರಿವಾಲ್, ನಿಮ್ಮ ಪಕ್ಷಕ್ಕೆ ಹಣ ಎಲ್ಲಿಂದ ಬರುತ್ತಿದೆ ಎಂದು ಕೇಳಿದ್ದಾರೆ.
ಇದೇ ವೇಳೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಕಳಂಕಿತ ಸಚಿವರಿಗೆ ಮತ್ತೆ ಟಿಕೆಟ್ ನೀಡುತ್ತೀರಾ ಎಂದು ಸಹ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಮುಕೇಶ್ ಅಂಬಾನಿ ಅವರ ಒಂದು ಕಿಸೆಯಲ್ಲಿ ಮೋದಿ ಮತ್ತು ಇನ್ನೊಂದು ಕಿಸೆಯಲ್ಲಿ ರಾಹುಲ್ ಗಾಂಧಿ ಇದ್ದಾರೆ ಎಂದು ಕಳೆದ ವಾರ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದರು.