ಐವರು ಸಹೋದ್ಯೋಗಿಯನ್ನು ಕೊಂದು ಯೋಧ ಆತ್ಮಹತ್ಯೆ
ಶ್ರೀನಗರ: ಭಾರತೀಯ ಸೇನೆಯ ಯೋಧನೊಬ್ಬ ತನ್ನ ಐವರು ಸಹೋದ್ಯೋಗಿಗಳನ್ನು ಕೊಂದು ತಾನು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುರುವಾರ ನಡೆದಿದೆ.
ಇಂದು ಬೆಳಗ್ಗೆ ಸುಮಾರು 2 ಗಂಟೆಯ ಸಮಯದಲ್ಲಿ ಗಾಢ ನಿದ್ರೆಯಲ್ಲಿದ್ದ ತನ್ನ ಐವರು ಸಹೋದ್ಯೋಗಿಗಳ ತಲೆಗೆ ಗುಂಡು ಹಾರಿಸಿ ಕೊಂದಿದ್ದಾನೆ ಎಂದು ತಿಳಿದುಬಂದಿದೆ.
ಜಮ್ಮು ಮತ್ತು ಕಾಶ್ಮೀರದ ಗಂಡೇರ್‌ಬಾಲ್ ಜಿಲ್ಲೆಯ ಸಫಪೊರದಲ್ಲಿರುವ ಸೇನಾನೆಲೆಯ 13 ರಾಷ್ಟ್ರೀಯ ರೈಫಲ್‌ನ ಶಿಬಿರದಲ್ಲಿ ಈ ದುರ್ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸೈನಿಕನೊಬ್ಬ ತನ್ನ ಐವರು ಯೋಧರನ್ನು ಕೊಂದು ಕೊನೆಗೆ ತಾನೂ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಶರಣಾಗಿದ್ದಾನೆ ಎಂದು ಸೇನೆಯ ವಕ್ತಾರರು ಸ್ಪಷ್ಟಪಡಿಸಿದ್ದು, ಈ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ.
ಸೇನಾನೆಲೆಯ 13ನೇ ರಾಷ್ಟ್ರೀಯ ರೈಫಲ್ ಶಿಬಿರದಲ್ಲಿ ಆರು ಸೈನಿಕರ ಮೇಲ್ವಿಚಾರಕನಾಗಿ ನಿಯೋಜಿತನಾಗಿದ್ದ ಯೋಧ ಈ ದಾಳಿ ನಡೆಸಿದ್ದು, ಈ ಘಟನೆಯಲ್ಲಿ ಐವರು ಸ್ಥಳದಲ್ಲೆ ಮೃತಪಟ್ಟಿದ್ದು, ಮತ್ತೋರ್ವ ಯೋಧ ಗಂಭೀರವಾಗಿ ಗಾಯಗೊಂಡಿದ್ದು, ಆತನಿಗೆ ಸೇನೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.