'ಕಮಲ' ಬಿಟ್ಟು 'ಕೈ' ಹಿಡಿದ ಕರುಣಾ ಶುಕ್ಲಾ
ನವದೆಹಲಿ: ಮಾಜಿ ಪ್ರಧಾನಿ ಹಾಗೂ ಬಿಜೆಪಿಯ ಹಿರಿಯ ಮಾಜಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಸೋದರ ಸಂಬಂಧಿ ಕರುಣಾ ಶುಕ್ಲಾ ಅವರು ಗುರುವಾರ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.
ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ತನ್ನ ಮೂಲ ಸಿದ್ಧಾಂತಗಳಿಂದ ಬಹಳ ದೂರ ಸರಿದಿದ್ದು, ಈಗ ಅದರ ಸಿದ್ಧಾಂತಗಳು ನಾಶವಾಗಿವೆ ಎಂದು ಹೇಳಿದರು.
ಬಿಜೆಪಿಯ ಪ್ರಧಾನಿ ಹುದ್ದೆ ಅಭ್ಯರ್ಥಿ ನರೇಂದ್ರ ಮೋದಿ ಅವರು ದೇಶದ ಜನರ ಹೃದಯವನ್ನು ಯಾವತ್ತೂ ಗೆಲ್ಲಲಾರರು ಎಂದು ಶುಕ್ಲಾ ಭವಿಷ್ಯ ನುಡಿದಿದ್ದಾರೆ.
ಕಾಂಗ್ರೆಸ್ ಪಕ್ಷವು ಪ್ರಜಾಸತ್ತಾತ್ಮಕವಾಗಿದ್ದು ಅದು ಜನರೊಂದಿಗೆ ಕೆಲಸ ಮಾಡುತ್ತಿದೆ. ನಾನಿದನ್ನು ಪ್ರಶಂಸಿಸುತ್ತೇನೆ ಮತ್ತು ಅದಕ್ಕಾಗಿಯೇ ಕಾಂಗ್ರೆಸ್ ಸೇರಿದ್ದೇನೆ ಎಂದು ಶುಕ್ಲಾ ಹೇಳಿದ್ದಾರೆ.
ಕರುಣಾ ಶುಕ್ಲಾ ಅವರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಭಾರತೀಯ ಜನತಾ ಪಕ್ಷವನ್ನು ತೊರೆದಿದ್ದರು. ಲೋಕಸಭೆಯ ಮಾಜಿ ಸಂಸದರಾಗಿರುವ ಶುಕ್ಲಾ, ಬಿಜೆಪಿಯ ಹಿರಿಯ ನಾಯಕರು ತನ್ನನ್ನು ನಿರಂತರವಾಗಿ ಕಡೆಗಣಿಸಿದ್ದಾರೆ ಎಂದು ದೂರಿದ್ದರು.