'ಸಿಂಧೂರತ್ನ' ಸಬ್ಮೆರಿನ್ ದುರಂತ: 2 ಅಧಿಕಾರಿ ಮೃತದೇಹ ಪತ್ತೆ
ಭಾರತೀಯ ನೌಕಾಪಡೆಯ ಸಿಂಧೂರತ್ನ ಜಲಾಂತರ್ಗಾಮಿ ನೌಕೆ ದುರಂತದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಅಧಿಕಾರಿಗಳ ಮೃತದೇಹ ಗುರುವಾರ ಪತ್ತೆಯಾಗಿದೆ...
ಮುಂಬೈ: ಭಾರತೀಯ ನೌಕಾಪಡೆಯ ಸಿಂಧೂರತ್ನ ಜಲಾಂತರ್ಗಾಮಿ ನೌಕೆ ದುರಂತದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಅಧಿಕಾರಿಗಳ ಮೃತದೇಹ ಗುರುವಾರ ಪತ್ತೆಯಾಗಿವೆ.
ನಿನ್ನೆ ಸಿಂಧೂರತ್ನ ಜಲಾಂತರ್ಗಾಮಿ ನೌಕೆ ಅವಘಡಕ್ಕೀಡಾಗಿತ್ತು. ಇದರಲ್ಲಿ 7 ಮಂದಿ ನಾವಿಕರು ಗಾಯಗೊಂಡಿದ್ದು, ಇಬ್ಬರು ಅಧಿಕಾರಿಗಳು ನಾಪತ್ತೆಯಾಗಿದ್ದರು.
ದುರಂತದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಅಧಿಕಾರಿಗಳು ಸಾವಿಗೀಡಾಗಿರುವ ಶಂಕೆಯನ್ನು ನೌಕಪಡೆಯ ಅಧಿಕಾರಿಗಳು ನಿನ್ನೆ ವ್ಯಕ್ತಪಡಿಸಿದ್ದರು. ಅದರಂತ ಇಂದು ನಾಪತ್ತೆಯಾಗಿದ್ದ ಅಧಿಕಾರಿಗಳ ಮೃತದೇಹ ಸಬ್ಮೆರಿನಲ್ಲೇ ಪತ್ತೆಯಾಗಿದ್ದು, ಅವರನ್ನು ಲೆಫ್ಟಿನೆಂಟ್ ಕಮಾಂಡರ್ ಕಪೀಶ್ ಮುವಲ್, ಮನೋರಂಜನ್ ಕುಮಾರ್ ಎನ್ನಲಾಗಿದೆ.
ಇಂದು ಸಿಂಧೂರತ್ನ ಜಲಾಂತರ್ಗಾಮಿ ನೌಕೆಯನ್ನು ಪರೀಕ್ಷಿಸಿದ ಸಂದರ್ಭದಲ್ಲಿ ಅಧಿಕಾರಿಗಳ ಮೃತದೇಹ ಪತ್ತೆಯಾಗಿದೆ. ಅಲ್ಲದೆ ದುರಂತಕ್ಕೀಡಾಗಿದ್ದ ನೌಕೆಯಲ್ಲಿ ಹೆಚ್ಚಿನ ಹಾನಿ ಸಂಭವಿಸಿಲ್ಲ ಎಂದು ನೌಕಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪದೇ ಪದೇ ಜಲಾಂತರ್ಗಾಮಿ ನೌಕೆಗಳು ದುರಂತಕ್ಕೀಡಾಗುತ್ತಿರುವ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ನೌಕದಳದ ಮುಖ್ಯಸ್ಥ ಡಿ.ಕೆ. ಜೋಷಿ ಅವರು ತಮ್ಮ ಸ್ಥಾನಕ್ಕೆ ಬುಧವಾರ ರಾಜಿನಾಮೆ ನೀಡಿದ್ದರು.
ನಿನ್ನೆ ಮುಂಬೈನ ಕರಾವಳಿ ತೀರದಲ್ಲಿ ಸಿಂಧೂರತ್ನ ಸಬ್ಮೆರಿನ್ ನೌಕೆಯ ದಕ್ಷತಾ ಪರೀಕ್ಷೆ ವೇಳೆ ಈ ಅವಘಡ ಸಂಭವಿಸಿತ್ತು. ಬ್ಯಾಟರಿಗಳನ್ನು ಅಳವಡಿಸಿರುವ ಭಾಗದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡು. ಇದರಿಂದಾಗಿ ಏಳು ನೌಕಾ ಸಿಬ್ಬಂದಿ ಉಸಿರಾಟದ ತೊಂದರೆಗೆ ಒಳಗಾಗಿ ಪ್ರಜ್ಞೆ ಕಳೆದುಕೊಂಡು ಅಸ್ವಸ್ಥರಾಗಿದ್ದರು.