ಇಂದು ನಿಧನರಾದ ಹಿರಿಯ ನಟ, ನಿರ್ದೇಶಕ, ರಂಗಕರ್ಮಿ ಸಿ.ಆರ್. ಸಿಂಹ ಅವರಿಗೆ ರಂಗಕರ್ಮಿಗಳು ತಮ್ಮ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಸಿಂಹ ಎಂದರೆ ಸಿಂಹ!
ಸಿಂಹರ ಜೊತೆಗೆ ಆತ್ಮೀಯ ಒಡನಾಟವಿದ್ದ ರಂಗ ಸಂಪದ ತಂಡದ ಜೆ. ಲೋಕೇಶ್
ಅವನು ಆಕ್ಟಿವ್ ಆಗಿರೋವರೆಗೆ ನಾವೂ ಆಕ್ಟಿವ್ ಆಗಿದ್ವಿ! ೧೯೭೧-೭೨ ರಲ್ಲಿ "ರಂಗ ಸಂಪದ' (ಸಿಂಹರ ತಂಡ), "ನಟರಂಗ' ದಲ್ಲಿ ನಾವೆಲ್ಲಾ ಶತ್ರುಗಳು!
ಸಿಂಹ ಒಬ್ಬ ಅತ್ಯುತ್ತಮ ಓದುಗ. ಒಳ್ಳೆ ನಟ , ಕನ್ನಡ ರಂಗಭೂಮಿ ಕಂಡ ಮೇರು ನಟ. ಗುಬ್ಬಿ ವೀರಣ್ಣ ನವರ ನಂತರ ಬಂದ ಅತ್ಯುತ್ತಮ ಸಮಕಾಲೀನ ನಟರಲ್ಲಿ ಅತಿ ಮುಖ್ಯರಾದವರು ಲೋಕೇಶ್ ಮತ್ತು ಸಿಂಹ. ಲೋಕೇಶ್ ಅತ್ಯಂತ ಸಹಜ ನಟರಾದರೆ, ಸಿಂಹ ಅತ್ಯಂತ stylized ನಟ.
ನೀವು ಸಿಂಹ ಅಭಿನಯಿಸಿದ ತುಘಲಕ್ ನೋಡಬೇಕಿತ್ತು! ಸಿಂಹ ಅದಕ್ಕೆ ಒಂದು ಆಳವನ್ನು ಕೊಟ್ಟ. ಸಿಂಹ ಅಂದರೆ ಸಿಂಹ ಎನ್ನುವ ಮಾತನ್ನು ಸೃಷ್ಟಿಸಿಬಿಟ್ಟ. ಹೇಗೆ ಸಂಗ್ಯ ಬಾಳ್ಯದಿಂದ ವೈಜಯಂತಿ, ಒಡಲಾಳದಿಂದ ಉಮಾಶ್ರೀ ಅವರನ್ನು ಗುರುತಿಸುತ್ತೇವೋ ಹಾಗೆ ತುಘಲಕ್ ಅಂದರೆ ಸಿಂಹ!
ಅವನನ್ನು ಬಿಟ್ಟು ತುಘಲಕ್ ನನ್ನು ನೆನೆನೆಸಿಕೊಳ್ಳಲು ಸಾಧ್ಯವಿಲ್ಲ!
ಅದೇ ರೀತಿಯಲ್ಲಿ ಸಂಕ್ರಾಂತಿ, ಕಾಕನ ಕೋಟೆ - ಅವನ ಅತ್ಯುತ್ತಮ ಕೊಡುಗೆಗಳು!
ಆದರೆ ಅವನ ಅಭಿನಯ ಪ್ರತಿಭೆ ಅವನ ಇನ್ನುಳಿದ ಪ್ರತಿಭೆಗಳನ್ನು ನುಂಗಿ ಹಾಕಿಬಿಟ್ಟಿತು. ಅವನು ಮಹಾ ವಾಚಾಳಿ. ಆದರೆ ಅವನು ಮಾತಾಡಿದರೆ ಯಾರಿಗೂ ಬೇಸರ ಆಗೋಲ್ಲ. ಉಪ್ಪಿಟ್ಟು ಹೇಗ್ ಮಾಡ್ತಾರೆ ಗೊತ್ತಾ? ಎಂಬ ಪುಟ್ಟ ವಿಷಯವನ್ನೇ ಅತ್ಯಂತ ಆಸಕ್ತಿಕರವಾಗಿ ಮಾತಾಡುತ್ತಿದ್ದ. ಅವನು ಭಾವನಾತ್ಮಕ ವ್ಯಕ್ತಿ.
ಅವನ ಅಭಿರುಚಿಯೂ ಅಷ್ಟೇ. ಅವನ ಮನೆ 'ಗುಹೆ' ನೋಡಿ... ಅದು ಸಿಂಹನ ಕಲ್ಪನೆಗೆ ಮಾತ್ರ ಸಿಗುವಂತ ಗುಹೆ. ಜಾಯಿಕಾಯಿಗಳಿಂದ ಮಾಡಿದ ಪೆಟ್ಟಿಗೆ, ಬಾಗಿಲು, ಕಿಟಕಿ! ಇದೇ ಮನೆಗೆ ಏಕೈಕ ಛಾವಣಿ, ಅಲ್ಲಿ ಚಾರ್ಲಿ ಚಾಪ್ಲಿನ್ ನ ಶಿಲ್ಪ!!! ಅದನ್ನು ಕಲಾವಿದ ಜಾನ್ ದೇವರಾಜ್ ಸೃಷ್ಟಿಸಿದ್ದ ಅದ್ಭುತವಾಗಿ !
ಅವನ ನಾಟಕ, 'ಟಿಪಿಕಲ್ ಟಿಪಿ ಕೈಲಾಸಂ' ನ ದಿವಾನ್ ಆಗಿರಬಹುದು, ಅವೆಲ್ಲವೂ ಮನೆಯಲ್ಲಿ ಕಲೆ ಯಾಗಿ, ಚರಿತ್ರೆಯಾಗಿ, ಸ್ವಂತಿಕೆಯ ಸಾಕ್ಷಿಯಾಗಿ, ನಮ್ಮ ಜೋತೆಗಿರುವಂತವು.
'ಬರ' 'ಚಿತೆಗೂ ಚಿಂತೆ' ಅಥ್ವಾ ಯಾವುದೇ ಕಮರ್ಷಿಯಲ್ ಆದರೂ ಸೈ, ಎರಡೂ ಬಗೆಯ ವ್ಯಾಕರಣವನ್ನು ಬಲ್ಲ ಕಲಾವಿದ ಸಿಂಹ ಆಗಿದ್ದ. ತುಘಲಕ್ ನ gestures ನಿಂದಲೇ ನಾಟಕವನ್ನು ಉತ್ತುಂಗಕ್ಕೆ ಕರೆದೊಯ್ದ ಸಿಂಹ!
ಸಿಂಹನ ಜೀವನದ ಅತ್ಯುನ್ನತ ಶೃಂಗ ಎನ್ನಬಹುದಾದರೆ, ಅದು- 'ಟಿಪಿಕಲ್ ಟಿಪಿ ಕೈಲಾಸಂ'. ಅಲ್ಲಿ ಸಿಂಹ ಕೈಲಾಸಂ ರ ಒಳನೋಟವನ್ನು, ವಿಷಾದವನ್ನು ಬಿಚ್ಚಿಟ್ಟ ಬಗೆ ಇದೆಯಲ್ಲ - ಅಲ್ಲಿರುವ ವೈವಿಧ್ಯ, ವೈಚಿತ್ರ್ಯ ಗಳನ್ನೆಲ್ಲ ಜನರ ಮುಂದೆ ತೆರೆದಿಟ್ಟ - ಸಿಂಹ! ಅದಕ್ಕೆ ಹೇಳಿದ್ದು ಸಿಂಹ ಎಂದರೆ ಸಿಂಹ!
ತುಘಲಕ್ ನಿರ್ದೇಶಿಸಿದ ಬಿ ಚಂದ್ರಶೇಖರ್, ಮೇಕ್ಅಪ್ ನಾಣಿ, ನರಸಿಂಹನ್ - ಅವನನ್ನು ರೂಪಿಸಿದ ಅತಿ ಪ್ರಮುಖರು. ಅವನ ಜೀವಸತ್ವವನ್ನು ಯಶಸ್ವಿಯಾಗಿ ಹೊರ ತೆಗೆದರು, ರೂಪಿಸಿದರು.
ನನ್ನ ಪ್ರಕಾರ ಕಾರಂತರಿಗಿಂತ ಮೊದಲಿನ ಕಾರಂತರು ಸಿಂಹ!
ಟಿಪಿಕಲ್ "ಸಿಂಹ"-ಕಿರಣ್ ವಟಿ (ವಟಿ ಕುಟೀರ)ರಂಗಭೂಮಿಗೆ ಹತ್ತಿರವಾದ ಜನಗಳಿಗೆ ಸಿಂಹ ತುಂಬಾ ಆತ್ಮೀಯರು. ಅವರನ್ನ ಸಿನೆಮಾ ನಟ ಅಥವಾ ರಂಗಭೂಮಿಯ ನಟ ಎಂದು ವಿಂಗಡಣೆ ಮಾಡುವವರಿಗೆ, ಮಾಧ್ಯಮ ಯಾವುದಾದರೇನು ನಾನು ಒಬ್ಬ ನಟ ಎಂದು ಉತ್ತರಿಸುವಂತೆ ನಟಿಸಿದ್ದರು.
ಡಾ|| ಎಚ್ಚೆನ್ ರವರ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಕಾಲದಿಂದಲೇ ರಂಗಭೂಮಿಯ ನಟರಾಗಿದ್ದರು ಸಿಂಹ. ಅವರ ಕಾಕನ ಕೋಟೆ, ತುಘಲಕ್, ಟಿಪಿಕಲ್ ಟಿಪಿಕೆ, ರಸಋಷಿ ನಾಟಕಗಳು ಎಂದೆಂದಿಗೂ ರಂಗಭೂಮಿಯ ಪ್ರಿಯರಿಗೆ ನೆನಪಿನಲ್ಲಿ ಉಳಿಯುವ ನಾಟಕಗಳು.
ತುಘಲಕ್ ನಾಟಕದಲ್ಲಿನ ಅವರ ಅಭಿನಯ ಬಹುಶಃ ತುಘಲಕ್ ಹಾಗೇ ಇದ್ದ, ಎನ್ನುವಂತೆ ಕಾಣಿಸುತ್ತಿತ್ತು. ತುಘಲಕ್ ನಾಟಕವನ್ನು ನೋಡಿದವರಿಗೆ ಸಿಂಹರವರ ಹಾವ-ಭಾವ ಇಂದಿಗೂ ನೆನಪಿನಲ್ಲಿ ಉಳಿಯುವಂತೆ ಇದೆ. ಚಿಕ್ಕಂದಿನಿಂದ ಸಿಂಹ ಅವರನ್ನು ಸಿನೆಮಾಗಳಲ್ಲಿ ಕಂಡಿದ್ದ ನನಗೆ ತುಘಲಕ್ ನೋಡಿದಾಗ ಅಬ್ಬಾ!! ಒಬ್ಬ ಮನುಷ್ಯ ಇಷ್ಟು ಗಾಂಭೀರ್ಯದಿಂದ ಇರಲು ಸಾಧ್ಯವೇ ಎನ್ನಿಸುವಂತೆ ಇತ್ತು.
ಸುಮಾರು ವರುಷಗಳ ಹಿಂದೆ ಯಾರೋ "ಟಿಪಿಕಲ್ ಟಿಪಿಕೆ" ನಾಟಕ ಕೊನೆಯ ಪ್ರದರ್ಶನ ಇದೆಯಂತೆ, ಇದಾದ ಮೇಲೆ ಸಿಂಹ ರವರು ಮತ್ತೆ ಟಿಪಿಕಲ್ ಆಗುವುದಿಲ್ಲವಂತೆ ಎಂದು ಹೇಳಿದರು. ಹೆಚ್. ಎನ್. ಕಲಾಕ್ಷೇತ್ರದಲ್ಲಿ ಅದರ ಪ್ರದರ್ಶನಕ್ಕೆ ಓಡಿ ಬಂದು ಕೂತಿದ್ದೆ. ಅದಾದ ಮೇಲೆ ಸುಮಾರು 14 ಪ್ರದರ್ಶನಗಳನ್ನು ಒಂದರ ಹಿಂದೆ ಒಂದರಂತೆ ನೋಡಿದೆ. ಅಂದು ಕಲಾಕ್ಷೇತ್ರದಲ್ಲಿ ನನಗೆ ಟಿಪಿಕಲ್ ಕೊನೆಯ ಪ್ರದರ್ಶನ ಎಂದು ಹೇಳಿದ ವ್ಯಕ್ತಿಗೆ ಧನ್ಯವಾದ ಹೇಳುತ್ತಿರುತ್ತೇನೆ. ಆದರೆ, ಇನ್ನು "ಟಿಪಿಕಲ್ ಕೈಲಾಸಂ" ರಂಗದ ಮೇಲೆ ಕಾಣಲಾರೆವು ಎನ್ನುವ ಕಟು ಸತ್ಯ ಯಾಕೋ ಮನಸ್ಸಿಗೆ ತುಂಬಾ ನೋವನ್ನುಂಟು ಮಾಡುತ್ತದೆ.
ಖುಷಿಯಿಂದ ಬೆನ್ನು ತಟ್ಟಿದ್ದರುವೆಂಕಟೇಶ್ ಪ್ರಸಾದ್, ರಂಗಕರ್ಮಿ ಕೇವಲ 5 ತಿಂಗಳ ಹಿಂದೆ ಸಿಂಹರವರನ್ನು ಅವರ ಮನೆಯಲ್ಲಿ ಭೇಟಿಯಾದಾಗ... .ಕನ್ನಡ ರಂಗಭೂಮಿಯ ಶ್ರೇಷ್ಟ ನಟ...ಬೇಗ ಹುಷಾರಾಗಿ ನಮ್ಮ 'ತುಘಲಕ್' ನಾಟಕ ನೋಡಲು ಬರುತ್ತೇನೆ ಎಂದಿದ್ದರು...ನಾನು 'ತುಘಲಕ್' ಪಾತ್ರ ಮಾಡುತ್ತಿದ್ದೇನೆ ಎಂದಾಗ ಖುಷಿಯಿಂದ ತುಂಬು ಪ್ರೀತಿಯಿಂದ ಬೆನ್ನು ತಟ್ಟಿದ್ದರು....ಇಷ್ಟು ಬೇಗ ನಮ್ಮನ್ನೆಲ್ಲಾ ಬಿಟ್ಟು ಹೋಗುತ್ತಾರೆಂದು ಗೊತ್ತಾಗಲಿಲ್ಲ...ಒಬ್ಬ ಅದ್ಭುತ ನಟನನ್ನು , ಅದ್ಭುತ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ.
'ಸಿಂಹ ಗುಹೆಯಿಂದ ಹೊರಬರುತ್ತೆ ನೋಡ್ತಿರಿ'
ವಿ ಆರ್ ಕಾರ್ಪೆಂಟರ್ ('ನವಿಲು' ಪತ್ರಿಕೆಯ ಸಂಪಾದಕ)
ಸರಿಯಾಗಿ ಎರಡು ಅಥವಾ ಎರಡೂವರೆ ವರ್ಷಗಳ ಹಿಂದೆ ಹಾಸನದ ಮಲ್ಲೇಶ್ ಗೌಡರ 'ತುಘಲಕ್ ದರ್ಬಾರಿನಲ್ಲ' (ಕಾರ್ನಾಡ್ ನಾಟಕಗಳ ಕುರಿತ ಪುಸ್ತಕ) ಬಿಡುಗಡೆ ಸಮಾರಂಭಕ್ಕೆ ಹೋಗಬೇಕಿತ್ತು. ವಿ ಎಂ ಮಂಜುನಾಥ್, ವೆಂಕಟರಾಜು (ನಟ) ಮತ್ತು ನಾನು ಬೆಳಗ್ಗೆ ಆರಕ್ಕೆ ಟಾಟಾ ಸುಮೋದಲ್ಲಿ ಸಿಆರ್ ಸಿಂಹ ಅವರ ಗುಹೆ (ಮನೆಯ ಹೆಸರು: ಹೆಸರಿಗೆ ತಕ್ಕಂತೆ ಕಡಿಮೆ ವೆಚ್ಚ ಮತ್ತು ಅಷ್ಟೇನೂ ಆಧುನಿಕವಲ್ಲದ ರೀತಿಯ, ಬುದ್ಧಿವಂತಿಕೆಯನ್ನು ಬಳಸಿ ಕಟ್ಟಿದ್ದ ಅರ್ಥಪೂರ್ಣ ಮನೆ)ಯ ಮುಂದೆ ನಿಂತುಕೊಂಡೆವು... ವೆಂಕಟರಾಜು 'ಸಿಂಹ ಗುಹೆಯಿಂದ ಹೊರಬರುತ್ತೆ ನೋಡ್ತಿರಿ' ಎಂದು ತಮಾಷೆ ಮಾಡಿದರು. ಆ ಮಾತು ಅವರಿಗೆ ಕೇಳಿಸಿತೇನೋ ಎಂಬಂತೆ ದೊಡ್ಡ ಆತ್ಮೀಯ ನಗುವಿನ ಘರ್ಜನೆಯೊಂದಿಗೆ ನಮ್ಮ ಕೈ ಕುಲುಕಿ ಸುಮೋ ಹತ್ತಿಕೊಂಡರು.
ಅಲ್ಲಿಂದ ಶುರುವಾದ ಮಾತು... ಅವರ ನಾಟಕ, ಸಿನೆಮಾ, ಲಂಕೇಶ್ ಮೇಷ್ಟ್ರ ಜತೆಗಿನ ಒಡನಾಟ, ಅವರಿವರ ಪೋಲಿ ಜೋಕುಗಳು, ಪದ್ಯ ಓದಬೇಕಾದ ಶೈಲಿ, ಗ್ರಹಿಸಿಕೊಳ್ಳಬೇಕಾದ ಎಲ್ಲವನ್ನೂ ಬಿಡಿಸಿಕೊಂಡು ಯಾವುದೇ ದುಂದುಗಾರಿಕೆಯ, ತನ್ನನ್ನು ಅತಿರೇಕಿಸಿಕೊಳ್ಳದ ಮಾತುಗಳು ಮುಗಿದದ್ದು ರಾತ್ರಿ 11ಕ್ಕೆ, ಅದೇ ದೊಡ್ಡ ನಗುವಿನ ಘರ್ಜನೆಯೊಂದಿಗೆ ತನ್ನ ಗುಹೆ ಸೇರುವವರೆಗೆ. ಇಡೀ ದಿನ ಅವರೊಂದಿಗೆ ಕಳೆದು, ಸಂಜೆ ಬೆಂಗಳೂರಿನ ಕೊಡಿಗೇಹಳ್ಳಿಯ ಕ್ಲಬ್ಬಿನಲ್ಲಿ ಪಾರ್ಟಿ ಮಾಡಿದ್ದ ದೃಶ್ಯ ಕಣ್ಣ ಮುಂದ ಸುಳಿದಾಡುತ್ತಿದೆ.
ಇಡೀ ದಿನ ಸಿಂಹರ ಮಾತು ಗ್ರಹಿಸಿದ ಸುಮೋ ಓನರ್+ಡ್ರೈವರ್+ ನನ್ನ ಶಾಲಾ ಸಹಪಾಠಿ ಎಲ್ಲವೂ ಆಗಿರುವ ರಹಮತ್ ವುಲ್ಲಾ 'ಲೇ ಮೂರ್ತಿ ನಾನೂ ಪದ್ಯ ಬರೀತಿ ಇರೋ' ಎಂದಿದ್ದ ಗಳಿಗೆಯನ್ನು ಮರೆಯಲಾಗುತ್ತಿಲ್ಲ.
ಅಪಾರ ನೆನಪಿನ ಶಕ್ತಿಯನ್ನು ಹೊಂದಿದ್ದ ಸಿಂಹ ಅವರು ಅದನ್ನೇ ಬರಹಕ್ಕಿಳಿಸಿ ಪುಸ್ತಕ ತಂದಿದ್ದರೆ, ಸುಳ್ಳು ಆತ್ಮಕಥೆ ಬರೆಯುವವರ ಎಷ್ಟೋ ಪುಸ್ತಕಗಳು ಖಂಡಿತವಾಗಿಯೂ ಇತಿಹಾಸಕ್ಕೆ ಕಂಬೀ ಕೀಳುತ್ತಿದ್ದವು. ಹಾಗಾಲಿಲ್ಲವೆನ್ನುವುದೇ ನನ್ನನ್ನು ಈಗ ಅವರ ಸಾವಿನ ಸುದ್ದಿಯನ್ನು ಕೇಳಿದ ನಂತರ ಆವರಿಸಿಕೊಂಡ ದುಃಖ... ಬರೆಯಬೇಕಿತ್ತು. ಅವರು ಬರಹದ ಮೂಲಕವೂ ಬದುಕಬೇಕಿತ್ತು... (ಬರೆಯಿರಿ ಎಂದು ಅವತ್ತೇ ಕೇಳಿಕೊಂಡಿದ್ದೆವು; ಆಯ್ತು ಎಂದಿದ್ದರು ಕೂಡ)
ನುಡಿ ನಮನ°°°°°°°°°°°°°°
ಸಿಂಹ ಗುಹೆಯ
ಚನ್ನಪಟ್ಟಣದ
ರಾಮಸ್ವಾಮಿ 'ಸಿಂಹ'
ಅಗಲಿ ಹೋಗಿದೆ
ಅಭಿಮಾನಿಗಳಾದ
ನಮ್ಮಾ....ನಿಮ್ಮಾ...
ಭುವಿಗೆ ಬಂದವರು
ಹೋಗಲೇಬೇಕೆಂಬುದು
ವಿಧಿ ಲಿಖಿತ ನಿಯಮ
ಭಕ್ತಿ ಪೂರ್ವಕವಾಗಿ
ಅವರಾತ್ಮಕ್ಕೆ ಚಿರಶಾಂತಿ
ಕೋರುವುದು ಧರ್ಮ
~ಹೊರಾಪ