ರಾಹುಲ್ ಗಾಂಧಿ ಭೇಟಿ ಮಾಡಲು ಬಯಸಿದ್ದ ಮಹಿಳೆ ಹತ್ಯೆ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಬಯಸಿದ್ದ ಮಹಿಳೆಯನ್ನು ಆಕೆಯ ಪತಿಯೇ ಬೆಂಕಿ ಹಚ್ಚಿ ಹತ್ಯೆ ಮಾಡಿ,..
ಜೋರ್‌ಹತ್(ಅಸ್ಸಾಂ): ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಬಯಸಿದ್ದ ಮಹಿಳೆಯನ್ನು ಆಕೆಯ ಪತಿಯೇ ಬೆಂಕಿ ಹಚ್ಚಿ ಹತ್ಯೆ ಮಾಡಿ, ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶನಿವಾರ ಅಸ್ಸಾಂನ ಜೋರ್‌ಹತ್‌ನಲ್ಲಿ ನಡೆದಿದೆ.
ಕಳೆದ ಬುಧವಾರ ಅಸ್ಸಾಂನ ಗುವಾಹಟಿಯಲ್ಲಿ ನಡೆದ ಸಂವಾದದ ವೇಳೆ ಬೋಂಟಿ ಚುಟಿಯಾ ಎಂಬ ಮಹಿಳೆ ರಾಹುಲ್ ಗಾಂಧಿ ಭೇಟಿ ಮಾಡಲು ಯತ್ನಿಸಿದ್ದಳು. ಇದನ್ನು ಸಹಿಸಿಕೊಳ್ಳದ ಆಕೆಯ ಪಾಪಿ ಪತಿ ತನ್ನ ಪತ್ನಿಯನ್ನು ಬೆಂಕಿ ಹಚ್ಚಿ ಕೊಂದು ತಾನು ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಈ ಸಂಬಂಧ ಜೋರ್‌ಹತ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಬೋಂಟಿ ಸಾವು ಅಸಹಜ ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಮತ್ತು ಆಕೆಯ ಪತಿ ಸೋಮೇಶ್ವರ ಚುಟಿಯಾಗೂ ಶೇ.35ರಷ್ಚು ಸುಟ್ಟ ಗಾಯಗಳಾಗಿವೆ ಎಂದು ಜೋರ್‌ಹತ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಅಮನ್‌ಜೀತ್ ಕೌರ್ ಅವರು ತಿಳಿಸಿದ್ದಾರೆ. ಅಲ್ಲದೆ ಕೊಲೆಯಾದ ಮಹಿಳೆ ರಾಹುಲ್ ಗಾಂಧಿಗೆ ಮುತ್ತಿಟ್ಟ ಮಹಿಳೆ ಅಲ್ಲ ಎಂದು ಕೌರ್ ಸ್ಪಷ್ಟಪಡಿಸಿದ್ದಾರೆ.
ಈ ದಂಪತಿಗಳ ಮಧ್ಯೆ ಮೊದಲನಿಂದಲೂ ಕೌಟುಂಬಿಕ ಕಲಹವಿತ್ತೇ ಅಥವಾ ರಾಹುಲ್ ಗಾಂಧಿಗೆ ಭೇಟಿಗೆ ಯತ್ನಿಸಿದ್ದೇ ಮಹಿಳೆಯ ಹತ್ಯೆಗೆ ಕಾರಣವಾಯಿತೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.