ಹೆಚ್ಚಿನ ಚಿಕಿತ್ಸೆಗಾಗಿ ನಟ ಅಂಬರೀಷ್ ಸಿಂಗಾಪುರಕ್ಕೆ ಶಿಫ್ಟ್
ನಟ ಹಾಗೂ ವಸತಿ ಸಚಿವ ಅಂಬರೀಷ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಶನಿವಾರ...
ಬೆಂಗಳೂರು: ನಟ ಹಾಗೂ ವಸತಿ ಸಚಿವ ಅಂಬರೀಷ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಶನಿವಾರ ಸ್ಥಳಾಂತರಿಸಲಾಗಿದೆ.
ಅಂಬರೀಷ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಸಿಂಗಾಪುರಕ್ಕೆ ಕರೆದೊಯ್ಯಲು ಖ್ಯಾತ ನಟ ರಜನಿಕಾಂತ್ ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಂಬರೀಷ್ ಅವರನ್ನು ಇಂದು ಬೆಳಗ್ಗೆ 6.45ರ ಸುಮಾರಿಗೆ ವಿಕ್ರಂ ಆಸ್ಪತ್ರೆಯಿಂದ ಸಿಂಗಾಪುರಕ್ಕೆ ಕರೆದೊಯ್ಯೂಲಾಗಿದೆ.
ಅಂಬರೀಷ್ ಅವರ ಜೊತೆಗೆ ಪತ್ನಿ ಸುಮಲತಾ, ಪುತ್ರ ಅಭಿಷೇಕ್ ಗೌಡ ಹಾಗೂ ವಿಕ್ರಂ ಆಸ್ಪತ್ರೆಯ ಇಬ್ಬರು ವೈದ್ಯರ ತಂಡ ಇಂದು ಬೆಳಗ್ಗೆ ವಿಶೇಷ ವಿಮಾನದಲ್ಲಿ ಸಿಂಗಪುರದ ಮೌಂಟ್ ಎಲಿಜಬತ್ ಆಸ್ಪತ್ರೆಗೆ ತೆರಳಿದ್ದು, ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಅಂಬಿ ಕ್ಷೇಮವಾಗಿ ಸಿಂಗಾಪುರ ತಲುಪಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನಟಿ ಸುಮಲತಾ ಅವರು, ಅಂಬರೀಷ್ ರ ಸಾವಿರಾರು ಅಭಿಮಾನಿಗಳ ಹಾರೈಕೆ ಮತ್ತು ಅವರು ಸಲ್ಲಿಸುತ್ತಿರುವ ಪೂಜೆಗಲ್ಲಿಂದಾಗಿ ಅವರು ಗುಣಮುಖರಾಗಿ ವಾಪಸ್ ಬರುತ್ತಾರೆ ಎಂಬ ನಂಬಿಕೆಯಿಂದ ತಾವು ಸಿಂಗಪುರಕ್ಕೆ ಅಂಬಿಯನ್ನು ಕರೆದೊಯ್ಯೂತ್ತಿರುವುದಾಗಿ ಹೇಳಿದರು. ಅಲ್ಲದೆ ಯಾವುದೇ ವದಂತಿಗಳಿಗೆ ಅಭಿಮಾನಿಗಳು ಕಿವಿಗೊಡಬೇಡಿ. ಅಭಿಮಾನಿಗಳು ಶಾಂತಿ ಕಾಪಾಡುವಂತೆ ಮನವಿ ಮಾಡಿದರು.
ಅಂಬರೀಷ್ ಅವರನ್ನು ಈಗ ರೋಗಿಯಾಗಿ ಕರೆದುಕೊಂಡು ಹೋಗುತ್ತಿದ್ದು, ಬರುವಾಗ ಅವರು ನಿಮ್ಮೆಲ್ಲರ ನೆಚ್ಚಿನ ರೆಬಲ್‌ಸ್ಟಾರ್ ಆಗಿ ವಾಪಸ್ ಬರುತ್ತಾರೆ ಎಂದು ಸುಮಲತಾ ವಿಶ್ವಾಸ ವ್ಯಕ್ತಪಡಿಸಿದರು.