ಅತಿಥಿ ಉಪನ್ಯಾಸಕ ಹುದ್ದೆಗೆ ನ್ಯಾ. ಗಂಗೂಲಿ ರಾಜಿನಾಮೆ
ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎ.ಕೆ ಗಂಗೂಲಿ ಶುಕ್ರವಾರ ...
ನವದೆಹಲಿ: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎ.ಕೆ ಗಂಗೂಲಿ ಶುಕ್ರವಾರ ಅತಿಥಿ ಉಪನ್ಯಾಸಕ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ.
ಬಂಗಾಳದ ಪ್ರತಿಷ್ಠಿತ ಕಾನೂನು ವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಗಂಗೂಲಿ ರಾಷ್ಟ್ರೀಯ ನ್ಯಾಯಶಾಸ್ತ್ರ ವಿಶ್ವ ವಿದ್ಯಾಲಯ (ಎನ್ಯುಜೆಎಸ್)ಕ್ಕೆ ರಾಜಿನಾಮೆ ಪತ್ರ ಸಲ್ಲಿಸಿದ್ದಾರೆ.
ನಾನು ಪ್ರಸ್ತುತ ಸಂಸ್ಥೆಯಲ್ಲಿ ಮುಂದುವರಿಯುವ ಮೂಲಕ ಸಂಸ್ಥೆಗೆ ಹೊರೆಯಾಗಲು ಬಯಸುವುದಿಲ್ಲ ಎಂದು ನ್ಯಾ. ಗಂಗೂಲಿ ತನ್ನ ರಾಜಿನಾಮೆ ಪತ್ರದಲ್ಲಿ ಬರೆದಿದ್ದಾರೆ.
ಆದಾಗ್ಯೂ, ಪಶ್ಚಿಮ ಬಂಗಾಳ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ರಾಜಿನಾಮೆ ನೀಡಿಲ್ಲ. ಅವರನ್ನು ಪ್ರಸ್ತುತ ಸ್ಥಾನದಿಂದ ಗಂಗೂಲಿ ಅವರನ್ನು ವಜಾಗೈಯ್ಯುವಂತೆ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಷ್ಟ್ರಪತಿಯವರಿಗೆ ಪತ್ರವನ್ನೂ ಬರೆದಿದ್ದಾರೆ.
ಡಿಸೆಂಬರ್ 2012ರಲ್ಲಿ ಎನ್ಯುಜೆಎಸ್ನಲ್ಲಿ ವ್ಯಾಸಂಗ ಮಾಡಿದ ಮಹಿಳೆಯೊಬ್ಬಳು ಗಂಗೂಲಿ ತನಗೆ ಪಂಚತಾರಾ ಹೋಟೆಲೊಂದರಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಳು. ಕಳೆದ ತಿಂಗಳು ಈ ಬಗ್ಗೆ ತನಿಖೆ ನಡೆಸಿದ ಸುಪ್ರೀಂ ಕೋರ್ಟ್ನ ಮೂವರ ನ್ಯಾಯಾಧೀಶರ ಸಮಿತಿ ಗಂಗೂಲಿ ತಪ್ಪಿತಸ್ಥ ಎಂದು ಸಾಬೀತು ಪಡಿಸಿತ್ತು.