ತಪ್ಪುಗಳಿಂದ ಪಾಠ ಕಲಿಯುವ ಸಮಯ ಬಂದಿದೆ: ಪ್ರಧಾನಿ
ಹಲವು ಏರುಪೇರುಗಳ ನಡುವೆಯೂ ನಾವು ಕಳೆದ 9 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ. ಆದರೂ ಕೆಲವೊಂದು ತಪ್ಪುಗಳು ನಡೆದಿವೆ. ಆ ತಪ್ಪುಗಳಿಂದ ಪಾಠ..
ನವದೆಹಲಿ: ಹಲವು ಏರುಪೇರುಗಳ ನಡುವೆಯೂ ನಾವು ಕಳೆದ 9 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ. ಆದರೂ ಕೆಲವೊಂದು ತಪ್ಪುಗಳು ನಡೆದಿವೆ. ಆ ತಪ್ಪುಗಳಿಂದ ಪಾಠ ಕಲಿಯುವ ಸಮಯ ಈಗ ಬಂದಿದೆ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಶುಕ್ರವಾರ ಹೇಳಿದ್ದಾರೆ.
ಕಳೆದ 10 ವರ್ಷಗಳಲ್ಲಿ ಇಂದು ಮೂರನೇ ಬಾರಿಗೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಸಿಂಗ್. ಯುಪಿಎ ಸರ್ಕಾರದ ಮೊದಲ ಅವಧಿಯಲ್ಲಿ ನಾವು ಶೇ.9ರಷ್ಟು ಅಭಿವೃದ್ಧಿ ಸಾಧಿಸಿದ್ದೇವೆ. ಭಾರತದ ಆರ್ಥಿಕ ಸ್ಥಿತಿ ಏರಿಳಿತವಾಗುತ್ತಿದೆ. ಆದರೂ ದೇಶಕ್ಕೆ ಉತ್ತಮ ಭವಿಷ್ಯ ಇದೆ ಎಂದು ತಿಳಿಸಿದರು.
ಯುಪಿಎ ಸರ್ಕಾರದ ಸಾಧನೆಗಳನ್ನು ವಿವರಿಸಿದ ಪ್ರಧಾನಿ, ಗ್ರಾಮೀಣ ಅಭಿವೃದ್ಧಿಗಾಗಿ ನಾವು ಕೊಟ್ಟಿದ್ದ ಭರವಸೆಯನ್ನು ಈಡೇರಿಸಿದ್ದೇವೆ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಕೂಲಿ ದರ ಹೆಚ್ಚಳವಾಗಿದೆ. ಅಲ್ಲದೆ ಶೈಕ್ಷಣಿಕ ಕ್ಷೇತ್ರದಲ್ಲೂ ಸಾಕಷ್ಟು ಅಭಿವೃದ್ಧಿ ಮಾಡುವ ಮೂಲಕ ಜಾಗತಿಕ ಅಭಿವೃದ್ಧಿಗೆ ನಾವು ಅಡಿಪಾಯ ಹಾಕಿದ್ದೇವೆ ಎಂದರು.
ಯುಪಿಎ-3ಕ್ಕೆ ತಾವು ಪ್ರಧಾನಿ ಅಭ್ಯರ್ಥಿಯಾಗುವುದಿಲ್ಲ ಎಂದು ಘೋಷಿಸಿದ ಪ್ರಧಾನಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯುಪಿಎ ಸೂಕ್ತ ಪ್ರಧಾನಿ ಅಭ್ಯರ್ಥಿಯನ್ನು ಸೂಚಿಸಲಿದೆ ಎಂದರು. ಅಲ್ಲದೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ಹುದ್ದೆಗೆ ಸೂಕ್ತ ಅಭ್ಯರ್ಥಿಯಾಗಿದ್ದು, ಮುಂದಿನ ಲೋಕಸಭಾ ಚುನಾವಣೆಯ ನಂತರವೂ ಯುಪಿಎ ಅಭ್ಯರ್ಥಿಯೇ ಪ್ರಧಾನಿ ಆಗಲಿದ್ದಾರೆ ಎಂದು ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ, ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಸಿಂಗ್, ಮೋದಿ ಮುಂದಿನ ಪ್ರಧಾನಿಯಾದರೆ ದೇಶದ ದೊಡ್ಡ ದುರಂತ ಎಂದರು. ಅಮಾಯಕರನ್ನು ನರಮೇಧಗೈದ ವ್ಯಕ್ತಿ ಪ್ರಧಾನಿಯಾದರೆ ದೇಶಕ್ಕೆ ವಿನಾಶ ಕಾದಿದೆ. ಅಹಮದಾಬಾದ್‌ನ ಬೀದಿಗಳಲ್ಲಿ ಅಮಾಯಕರನ್ನು ಹತ್ಯೆ ಮಾಡಿದ್ದೇ ಮೋದಿಯ ಸಾಧನೆಯೇ ಎಂದು ಪ್ರಶ್ನಿಸಿದರು.
ಕೆಲವರು ನನ್ನನ್ನು ದುರ್ಬಲ ಪ್ರಧಾನಿ ಎಂದು ಟೀಕೆ ಮಾಡುತ್ತಿದ್ದಾರೆ. ಆದರೆ ನಾನು ದುರ್ಬಲ ಪ್ರಧಾನಿಯೇ ಎಂಬುದನ್ನು ಇತಿಹಾಸಕಾರರು ನಿರ್ಧರಿಸುತ್ತಾರೆ ಎಂದು ಸಿಂಗ್ ಹೇಳಿದರು.
ಇನ್ನು ಆಮ್ ಆದ್ಮಿ ಪಕ್ಷದ ವಿಷಯ ಪ್ರಸ್ತಾಪಿಸಿದ ಪ್ರಧಾನಿ, ಪ್ರಜಾಪ್ರಭುತ್ವ ಪ್ರಕ್ರಿಯೆ ಯಾವುದೇ ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ ಮತ್ತು ಒಂದು ಪಕ್ಷದಿಂದ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಆಮ್ ಆದ್ಮಿ ಪಕ್ಷಕ್ಕೆ ಇನ್ನಷ್ಟು ಕಾಲಾವಕಾಶ ಬೇಕು ಎಂದರು.