ಭದ್ರತಾ ವ್ಯವಸ್ಥೆ ಬಳಸಿಕೊಳ್ಳುವಂತೆ ಕೇಜ್ರಿವಾಲ್‌ಗೆ ಜನರ ಮನವಿ
ದೆಹಲಿ ಪೊಲೀಸರು ನೀಡುವ ಭದ್ರತಾ ವ್ಯವಸ್ಥೆಯನ್ನು ಬಳಸಿಕೊಳ್ಳಿ ಎಂದು ದೆಹಲಿ ನಾಗರಿಕರು ತಮ್ಮ ಮುಖ್ಯಮಂತ್ರಿಯವರಲ್ಲಿ ಒತ್ತಾಯಿಸಿದ್ದಾರೆ...
ಗಾಜಿಯಾಬಾದ್: ದೆಹಲಿ ಪೊಲೀಸರು ನೀಡುವ ಭದ್ರತಾ ವ್ಯವಸ್ಥೆಯನ್ನು ಬಳಸಿಕೊಳ್ಳಿ ಎಂದು ದೆಹಲಿ ನಾಗರಿಕರು ತಮ್ಮ ಮುಖ್ಯಮಂತ್ರಿಯವರಲ್ಲಿ ಒತ್ತಾಯಿಸಿದ್ದಾರೆ. ಶುಕ್ರವಾರ ಕೇಜ್ರಿವಾಲ್ ನಿವಾಸಕ್ಕೆ ತೆರಳಿದ ನಾಗರಿಕರು 'ಜನ್ ಜನ್ ಸೇ ಆವಾಜ್ ಆಯಿಹೇ, ಸುರಕ್ಷಾ ಲೇ ಲೋ ಅರವಿಂದ್ ಭಾಯಿ' (ಭದ್ರತೆ ಬಳಸಿಕೊಳ್ಳಿ ಎಂದು ಜನರು ಒತ್ತಾಯಿಸುತ್ತಿದ್ದಾರೆ) ಎಂದು ಘೋಷಣೆ ಕೂಗಿದ್ದಾರೆ. ಕೇಜ್ರಿವಾಲ್ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವುದರಿಂದ ಅವರಿಗೆ ಹೆಚ್ಚಿನ ಭದ್ರತೆ ಬೇಕೆ ಬೇಕು ಎಂಬುದು ನಾಗರಿಕರ ಅಭಿಮತ.
ಭದ್ರತಾ ವ್ಯವಸ್ಥೆ ಬಳಸಿಕೊಳ್ಳಿ ಎಂದು ಒತ್ತಾಯಿಸುವುದಕ್ಕಾಗಿ ನಾವಿಲ್ಲಿಗೆ ಬಂದಿದ್ದೇವೆ. ಅವರು ಈ ವ್ಯವಸ್ಥೆಯನ್ನು ಬಳಸಿಕೊಳ್ಳಬೇಕೆಂದು ಒತ್ತಾಯಿಸಿ ಹಲವಾರು ನಾಗರಿಕರು ಸಹಿ ಹಾಕಿದ ಪತ್ರವನ್ನೂ ನಾವು ತಂದಿದ್ದೇವೆ ಎಂದು ಸುಲ್ತಾನ್‌ಪುರಿ ಪ್ರದೇಶ ನಿವಾಸಿ ಮುಖೇಶ್ ಕುಮಾರ್ ಹೇಳಿದ್ದಾರೆ.
ಕೇಜ್ರಿವಾಲ್ ಭ್ರಷ್ಟರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿರುವುದಿಂದ ಅವರಿಗೆ ಶತ್ರುಗಳ ಸಂಖ್ಯೆಯೂ ಜಾಸ್ತಿ ಇರುತ್ತದೆ. ಆದ್ದರಿಂದ ಅವರು ಭದ್ರತಾ ವ್ಯವಸ್ಥೆಯನ್ನು ಬಳಸಿಕೊಳ್ಳಲೇ ಬೇಕು ಎಂದು ಕುಮಾರ್ ಹೇಳಿದ್ದಾರೆ.
ಕೇಜ್ರಿವಾಲ್ ದೆಹಲಿ ಮತ್ತು ಗಾಜಿಯಾಬಾದ್ ಪೊಲೀಸರು ನೀಡುವ ಭದ್ರತಾ ವ್ಯವಸ್ಥೆಯನ್ನು ನಿರಾಕರಿಸಿದ್ದರು.