ಕಪ್ಪುಹಣ ವಾಪಸ್ ತಂದ್ರೆ ಮಾತ್ರ ಮೋದಿಗೆ ಬೆಂಬಲ: ರಾಮ್ದೇವ್
ಯೋಗ ಗುರು ಬಾಬಾ ರಾಮ್ದೇವ್ ಅವರು ಶನಿವಾರ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ..
ನವದೆಹಲಿ: ಯೋಗ ಗುರು ಬಾಬಾ ರಾಮ್ದೇವ್ ಅವರು ಶನಿವಾರ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಬೆಂಬಲ ಘೋಷಿಸಿದ್ದಾರೆ. ಆದರೆ ಗುಜರಾತ್ ಮುಖ್ಯಮಂತ್ರಿಗೆ ಕೆಲವು ಷರತ್ತುಗಳನ್ನು ಹಾಕಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ರಾಮ್ದೇವ್, ನಾನು ಕೆಲವು ವಿಷಯಗಳಲ್ಲಿ ಮಾತ್ರ ಮೋದಿಗೆ ಬೆಂಬಲ ನೀಡಿದ್ದೇನೆ. ಒಂದು ವೇಳೆ ಮೋದಿ ಅವರು ವಿದೇಶದಲ್ಲಿರುವ ಕಪ್ಪುಹಣವನ್ನು ಭಾರತಕ್ಕೆ ತಂದು, ಅದನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸುವುದಾಗಿ ಭರವಸೆ ನೀಡಿದರೆ ಮಾತ್ರ ತಾವು ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು. ಅಲ್ಲದೆ ಈ ಸಂಬಂಧ ಜನವರಿ 5ರಂದು ಬಿಜೆಪಿ ನಾಯಕರೊಂದಿಗೆ ಚರ್ಚಿಸುವುದಾಗಿ ಯೋಗ ಗುರು ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ರಾಮ್ದೇವ್, ವೃದ್ಧರ ಪಕ್ಷ ದೇಶವನ್ನು ಹಾಳು ಮಾಡಿದೆ. ಅಪರೂಪಕ್ಕೊಮ್ಮೆ ನಿನ್ನೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಆ ಗೋಷ್ಠಿಯಲ್ಲಿ ಮೋದಿ ಬಗ್ಗೆ ಮಾತನಾಡಿದ್ದು ವಿಶೇಷವಾಗಿತ್ತು ಎಂದು ವ್ಯಂಗ್ಯವಾಡಿದರು.
ದೇಶದಲ್ಲಿ ಹಣದುಬ್ಬರ ಹೆಚ್ಚಳಕ್ಕೆ ಕಾಂಗ್ರೆಸ್ನ ತಪ್ಪು ಆರ್ಥಿಕ ನೀತಿಗಳೆ ಕಾರಣ ಎಂದು ರಾಮ್ದೇವ್ ಆರೋಪಿಸಿದರು.