ಗೋವಾದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ: 8 ಸಾವು
ಗೋವಾದಲ್ಲಿ ನಿರ್ಮಾಣ ಹಂತದಲ್ಲಿದ್ದ 6 ಅಂತಸ್ತಿನ ಕಟ್ಟಡವೊಂದು ಶನಿವಾರ ಕುಸಿದು ಬಿದ್ದ ಪರಿಣಾಮ 8 ಮಂದಿ ಧಾರುಣವಾಗಿ...
ಕೆನಕೋನಾ(ಗೋವಾ): ಗೋವಾದಲ್ಲಿ ನಿರ್ಮಾಣ ಹಂತದಲ್ಲಿದ್ದ 6 ಅಂತಸ್ತಿನ ಕಟ್ಟಡವೊಂದು ಶನಿವಾರ ಕುಸಿದು ಬಿದ್ದ ಪರಿಣಾಮ 8 ಮಂದಿ ಧಾರುಣವಾಗಿ ಸಾವನ್ನಪ್ಪಿದ್ದಾರೆ.
ಪಣಜಿಯಿಂದ 80 ಕಿ.ಮೀ ದೂರದ ದಕ್ಷಿಣ ಗೋವಾದ ಕೆನಕೋನಾದಲ್ಲಿ ಇಂದು ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಈ ದುರಂತ ಸಂಭವಿಸಿದ್ದು, ಘಟನೆಯಲ್ಲಿ 8 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಅಲ್ಲದೆ ಘಟನೆಯಲ್ಲಿ ಹಲವರು ನಾಪತ್ತೆಯಾಗಿದ್ದು, ಕಟ್ಟಡದ ಅವಶೇಷಗಳಡಿಯಲ್ಲಿ ಸುಮಾರು 30 ರಿಂದ 40 ಮಂದಿ ಸಿಲುಕಿರುವ ಸಾಧ್ಯತೆಗಳಿವೆ ಎಂದು ಪೊಲೀಸ್ ಅಧೀಕ್ಷಕ ಅಧಿಕಾರಿ ಶಿಖರ್ ಪ್ರಭು ದೇಸಾಯಿ ಅವರು ತಿಳಿಸಿದ್ದಾರೆ.
ಬಹುಮಹಡಿ ಕಟ್ಟಡದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿತ್ತು. ಇಂದು ಸುಮಾರು 60 ಮಂದಿ ಕೂಲಿ ಕೆಲಸಗಾರರು ವಿವಿಧ ಮಹಡಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಹೀಗಾಗಿ ಅಧಿಕ ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ.
ಸುದ್ದಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಮತ್ತು ತುರ್ತುಸೇವಾ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.