ತೆಲಂಗಾಣ ಗದ್ದಲ: ಕಲಾಪ ಮುಂದೂಡಿಕೆ
ಹೈದರಾಬಾದ್: ಆಂಧ್ರಪ್ರದೇಶ ವಿಧಾನಸಭೆ ಅಧಿವೇಶನದ ಎರಡನೇ ದಿನವಾದ ಶನಿವಾರವೂ ಆಂಧ್ರ ವಿಭಜನೆ ಕುರಿತಾಗಿ ತೆಲಂಗಾಣ ಮತ್ತು ಸೀಮಾಂಧ್ರದ ಸದಸ್ಯರು ಕೋಲಾಹಲ ಎಬ್ಬಿಸಿದರು. ಹೀಗಾಗಿ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.
ತೆಲಂಗಾಣ ಮತ್ತು ಸೀಮಾಂಧ್ರದ ಸದಸ್ಯರು ರಾಜ್ಯ ವಿಭಜನೆ ವಿಷಯವಾಗಿ ಇಂದು ಸದನದ ಬಾವಿಗೆ ಇಳಿದು ಗದ್ದಲ ನಡೆಸಿದರು. ಹೀಗಾಗಿ ಇಂದು ಸಹ ವಿಧಾನಸಭೆ ಅಧಿವೇಶನದಲ್ಲಿ ಯಾವುದೇ ಕಾರ್ಯಗಳಿಲ್ಲದೇ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ತೆಲಂಗಾಣ ಮರುವಿಂಗಡಣೆ ಮಸೂದೆ(2013)ಯ ಕರಡನ್ನು ಹಿಂಪಡೆಯುವಂತೆ ಆಗ್ರಹಿಸಿ ಸೀಮಾಂಧ್ರ ಭಾಗದ ತೆಲಗು ದೇಶಂ ಹಾಗೂ ವೈಎಸ್‌ಆರ್ ಕಾಂಗ್ರೆಸ್ ಪಕ್ಷಗಳ ಸದಸ್ಯರು ಸಭಾಧ್ಯಕ್ಷರ ವೇದಿಕೆಗೆ ನುಗ್ಗಿ ಗದ್ದಲ ನಡೆಸಿದರು. ಇದಕ್ಕೆ ಪ್ರತಿಯಾಗಿ ಮಸೂದೆಯನ್ನು ಬೆಂಬಲಿಸಿ ಸದನದ ಬಾವಿಗಿಳಿದ ತೆಲಂಗಾಣ ರಾಷ್ಟ್ರೀಯ ಸಮಿತಿಯ ಶಾಸಕರು ಕರಡಿನ ಮೇಲೆ ಚರ್ಚೆ ಆರಂಭಿಸುವಂತೆ ಆಗ್ರಹಿಸಿದರು.
ಎರಡು ಕಡೆಯ ಶಾಸಕರು ಸದನದ ಬಾವಿಗೆ ಇಳಿದು ಗದ್ದಲ ಎಬ್ಬಿಸಿದರಿಂದ ಉಪ ಸಭಾಧ್ಯಕ್ಷ ಮಲ್ಲು ಭಟ್ಟಿ ವಿಕ್ರಮಾರ್ಕ್ ಅವರು, ಎರಡು ಬಾರಿ ಸದನದ ಕಲಾಪವನ್ನು ಮುಂದೂಡಿದರು. ಆ ನಂತರವು ಪರಿಸ್ಥಿತಿ ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.