ಹಿಂದಿನ ಚುನಾವಣೆ ಸಂಪ್ರದಾಯಕ್ಕೆ ಕೊನೆ: ಮೋದಿ
ನವದೆಹಲಿ: ಇಸ್ರೊ ಸಂಸ್ಧೆ ಜಿಎಸ್‌ಎಲ್‌ವಿ-ಡಿ5 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿರುವುದಕ್ಕೆ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಭಾನುವಾರ ಸಂತಸ ವ್ಯಕ್ತಪಡಿಸಿದ್ದಾರೆ.
ನವದೆಹಲಿಯಲ್ಲಿಂದು ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದಿನ ಚುನಾವಣೆ ಸಂಪ್ರದಾಯಗಳಿಗೆ ಬ್ರೇಕ್ ಬೀಳಲಿದ್ದು, 2014ರ ಲೋಕಸಭಾ ಚುನಾವಣೆ ಐತಿಹಾಸಿಕವಾಗಲಿದೆ ಎಂದು ಮೋದಿ ತಿಳಿಸಿದ್ದಾರೆ.
ದೇಶದ ಜನತೆ ಹಿಂದಿನ ಸಂಪ್ರದಾಯಿಕ ಕಂದಾಚಾರಗಳಿಂದ ಬೇಸತ್ತಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ಪಕ್ಷವನ್ನು ಜನ ಬೆಂಬಲಿಸಲಿದ್ದಾರೆ. ಈಗ ನಡೆಯುತ್ತಿರುವುದು ಚುನಾವಣೆಯಲ್ಲ, ಅದು ಭ್ರಷ್ಟಾಚಾರ ವಿರುದ್ಧದ ಚಳುವಳಿಯಾಗಿ ಪರಿಣಮಿಸಲಿದೆ ಎಂದರು.
ಮುಂದಿನ ಚುನಾವಣೆಯಲ್ಲಿ ಜಾತಿ ಕೇಂದ್ರಿತ ರಾಜಕಾರಣ ನಡೆಯುವುದಿಲ್ಲ. ಅಭಿವೃದ್ಧಿಗಷ್ಟೇ ಮತದಾರ ಮಣೆ ಹಾಕಲಿದ್ದಾರೆ. ಅಭಿವೃದ್ಧಿ ಮಾಡಿರುವುದಾಗಿ ಕಾಂಗ್ರೆಸ್ ಬಿಂಬಿಸಿಕೊಳ್ಳುತ್ತಿದೆ. ಅಭಿವೃದ್ಧಿ ಎಂದರೆ ಅದು ಚೀನಾ ನೋಡಿ ಕಲಿಯಬೇಕು ಎಂದರು. ದೇಶದ ಜನರಿಗೆ ಬಾಯಿ ಮಾತಿನ ಆಶ್ವಾಸನೆಗಳು ಸಾಕಾಗಿದೆ. ಮತದಾರರು ದೇಶದ ಅಭಿವೃದ್ಧಿ ಎದುರು ನೋಡುತ್ತಿದ್ದಾರೆ ಎಂದು ಮೋದಿ ತಿಳಿಸಿದ್ದಾರೆ.