ಪ.ಬಂಗಾಳ ಮಾನವ ಹಕ್ಕು ಆಯೋಗ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ರಾಜಿನಾಮೆ?
ಪಶ್ಚಿಮ ಬಂಗಾಳದ ಮಾನವ ಹಕ್ಕುಗಳ ಆಯೋಗದ ಸ್ಥಾನಕ್ಕೆ ಮಾಜಿ ನ್ಯಾ. ಎ.ಕೆ ಗಂಗೂಲಿ ಸೋಮವಾರ ರಾಜಿನಾಮೆ ನೀಡಿದ್ದಾರೆ ಎಂದು ಬಲ್ಲಮೂಲಗಳು...
ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮಾನವ ಹಕ್ಕುಗಳ ಆಯೋಗದ ಸ್ಥಾನಕ್ಕೆ ಮಾಜಿ ನ್ಯಾ. ಎ.ಕೆ ಗಂಗೂಲಿ ಸೋಮವಾರ ರಾಜಿನಾಮೆ ನೀಡಿದ್ದಾರೆ ಎಂದು ಬಲ್ಲಮೂಲಗಳು ವರದಿ ಮಾಡಿವೆ. ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಪ್ರಸ್ತುತ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ತೀವ್ರ ಒತ್ತಾಯ ಕೇಳಿ ಬಂದ ಕಾರಣ ಮಾಜಿ ಸುಪ್ರೀಂಕೋರ್ಟ್ ನ್ಯಾ. ಗಂಗೂಲಿ ಗವರ್ನರ್ ಎಂ.ಕೆ ನಾರಾಯಣ್ ಅವರನ್ನು ಇಂದು ಭೇಟಿ ಮಾಡಿದ್ದರು.
ಗವರ್ನರ್ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮದವರ ಜತೆ ಮಾತನಾಡಲು ಗಂಗೂಲಿ ನಿರಾಕರಿಸಿದ್ದಾರೆ.
ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಗಂಗೂಲಿ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಬಾರೀ ಒತ್ತಡ ಹೇರಲಾಗಿತ್ತು.
ಆದಾಗ್ಯೂ, ಗಂಗೂಲಿ ಅವರ ವಜಾಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ನ್ನು ಸೋಮವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.