ಪರೀಕ್ಷಾರ್ಥ ಉಡಾವಣೆಯಲ್ಲಿ ಪೃಥ್ವಿ-2 ಯಶಸ್ವಿ
ನವದೆಹಲಿ: ದೇಶಿಯವಾಗಿ ನಿರ್ಮಿತವಾಗಿರುವ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮಥ್ಯದ ಭಾರತದ ಮಹತ್ವಾಕಾಂಕ್ಷಿಯ ಪೃಥ್ವಿ-2 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಮಂಗಳವಾರ ಯಶಸ್ವಿಯಾಗಿ ನಡೆದಿದೆ.
ಈ ಕ್ಷಿಪಣಿ 1000 ಕೆ.ಜಿ ತೂಕದ ಸಿಡಿತಲೆಯನ್ನು ಹೊತ್ತು 350 ಕಿ.ಮೀ ದೂರದ ನಿರ್ಧಿಷ್ಟ ಗುರಿಯನ್ನು ನಾಶ ಮಾಡುವ ಸಾಮರ್ಥ್ಯ ಹೊಂದಿದೆ. ಭೂಸೇನೆಯ ಪ್ರಾಯೋಗಿಕ ಪರೀಕ್ಷೆಗಾಗಿ ಈ ಉಡಾವಣೆ ನಡೆಸಲಾಯಿತು.
ಬಾಲ್ಸೋರ್ನ ಚಾಂದಿಪುರದ ಸಮಗ್ರ ಪರೀಕ್ಷಾ ವಲಯದ ಸಂಚಾರಿ ಉಡ್ಡಯನ ಸಂಕೀರ್ಣ 3ರಿಂದ ಇಂದು ಬೆಳಿಗ್ಗೆ 9.48ಕ್ಕೆ ಪೃಥ್ವಿ-2 ಅನ್ನು ಉಡಾಯಿಸಲಾಯಿತು.
ನೆಲದಿಂದ ನೆಲಕ್ಕೆ ಚಿಮ್ಮುವ ಈ ಪೃಥ್ವಿ-2 ಕ್ಷಿಪಣಿಯ ಉಡಾವಣೆಯ ಸಂಪೂರ್ಣ ಉಸ್ತುವಾರಿಯನ್ನು ಎಸ್ಎಫ್ಸಿ ವಹಿಸಿಕೊಂಡಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಒ)ದ ವಿಜ್ಞಾನಿಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದೆ.