ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸಮ್ಮೇಳನಾಧ್ಯಕ್ಷ ನಾ.ಡಿಸೋಜ ಅವರ ಭಾಷಣ

ಕನ್ನಡ ಸಾಹಿತ್ಯ ಪರಿಷತ್ತಿನ 80ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನಾ. ಡಿಸೋಜ ಅವರ ಭಾಷಣದ ಪೂರ್ಣಪಾಠ...

Rashmi Kasaragodu
Updated On : 7 Jan 2014, 4:26 am

ಕನ್ನಡ ಸಾಹಿತ್ಯ ಪರಿಷತ್ತಿನ 80ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನಾ. ಡಿಸೋಜ ಅವರ ಭಾಷಣದ ಪೂರ್ಣಪಾಠ...

ಎಲ್ಲ ಅಭಿಮಾನಿ ಕನ್ನಡಿಗರೇ,

ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ

ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ

ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ

ಎಲ್ಲಿ ನೆಲವನು ತಣಿಸಿ, ಜನಮನ ಹೊಲದ ಕಳೆ ಕಳೆ ಕಳೆವೊಳೋ

ಅಲ್ಲಿ ಆಕಡೆ ನೋಡಲಾ ಅಲ್ಲಿ ಕೊಡವರ ನಾಡಲಾ ಅಲ್ಲಿ ಕೊಡವರ ಬೀಡಲಾ.

ಸವಿದು ಮೆದ್ದರೋ ಯಾರು ಪೂರ್ವದಿ ಹುಲಿಯ ಹಾಲಿನ ಮೇವನು

ಕವಣೆತಿರಿಕಲ್ಲಾಟ ಹಗ್ಗಕೆ ಸೆಳೆದರೋ ಹೆಬ್ಬಾವನು

ಸವರಿ ಆನೆಯ ಸೊಂಡಿಲಲಿ ರಣಕೊಂಬನಾರ್ ಭೋರ್ಗರೆವರೋ

ಸವೆದು ಸವೆಯದ ಸಾಹಸತ್ವದ ಕ್ಷಾತ್ರ ಬೇಟೆಯ ಮೆರೆದರೋ

ಅವರು ಸೋಲ್ಸಾವರಿಯರು ಅವರು ಕಡುಗಲಿಗಲಿವರು ಅವರು ಕೊಡಗಿನ ಹಿರಿಯರು

ತಮ್ಮ ನಾಡಿನ ಕೊರಳು ದಾಸ್ಯದ ನೊಗದ ಭಾರಕೆ ಬಗ್ಗದೋಲ್

ಹೆಮ್ಮೆ ಹಗೆಗಳ ಹೊಡೆದು ಹಿರಿಯರು ಹಸಿದು ಹಾರುವ ಬಗ್ಗದೋಲ್

ಬೊಮ್ಮ ಗಿರಿಯಿಂ ಪುಷ್ಪಗಿರಿ ಪರ್ಯಂತ ಬೆಳೆದೀ ದೇಶವು

ಧರ್ಮ ದಾನದ ಕಟ್ಟು ಕಟ್ಟಳೆ ರೀತಿ ನೀತಿಯ ಕೋಶವು

ನಮ್ಮ ಕೊಡಗಿದು ಜಮ್ಮದು ಜಮ್ಮ ಕೊಡಗಿದು ನಮ್ಮದು ನಮ್ಮೊಡಲ್ ಬಿಡಲಮ್ಮದು.

ಇದು ಅಗಸ್ತ್ಯನ ತಪದ ಮಣೆ ಕಾವೇರಿ ತಾಯ ತವರ್ಮನೆ

ಕನಸಸಿರಿಗುಯ್ಯಾಲೆ ತೂಗಿನಿಲ್ಲಿ ಚಂದಿರವರ್ಮನೆ

ಇದಕೋ ಚಂಗಾಳ್ವರಸರಾಡಂಬರವು ಕುಣಿದ ಶ್ರೀರಂಗವು

ಇದೋ ಇದೋ ಇಲ್ಲುರುಳ್ದ ಹಾಲೇರಿಯರ ಬಲಗಿರಿ ಶೃಂಗವು

ವಿಧಿಯ ಮಾಟದ ಕೊಡಗಿದು ಮೊದಲೆ ನಮ್ಮದು, ಕಡೆಗಿದು ಕದಲದೆಮ್ಮನು ಬೆಡಗಿದು

ಒಮ್ಮತವು ಒಗ್ಗಟ್ಟು ಒಂದೇ ಮನವು ಎಲ್ಲಿದೆ ಹೇಳಿರಿ

ಸುಮ್ಮನಿತ್ತರೋ ದಟ್ಟಿ ಕುಪ್ಪಸ ? ಹಾಡು ಹುತ್ತರಿಗೇಳಿರಿ

ಚಿಮ್ಮಿ ಪಾತುರೆ ಕೋಲ ಹೊಯ್ಲಿಗೆ ಕುಣಿವ ಪದ ಹೊರ ಹೊಮ್ಮಲಿ

ಅಮ್ಮೆ ಹರಸಿದ ಸೀಮೆ ನಮಗಿದು ಇರಲಿ ನಮ್ಮದೆ ನಮ್ಮಲಿ

ನೆಮ್ಮದಿಯನಿದು ತಾಳಲಿ ಅಮ್ಮೆಯಾ ಬಲ ತೋಳಲಿ ನಮ್ಮ ಕೊಡಗಿದು ಬಾಳಲಿ

ಪಂಜೆ ಮಂಗೇಶ ರಾವ್ (1874-1937)

ಪಂಜೆ ಮಂಗೇಶ ರಾಯರ ಈ ಕವಿತೆ ಚಿಕ್ಕಂದಿನಲ್ಲಿಯೇ ನನ್ನನ್ನ ಆಕರ್ಷಿಸಿತ್ತು. ಪಂಜೆಯವರು ಕೊಡಗಿನ ಈ ಶ್ರೀಮಂತಿಕೆಯನ್ನ, ಪರಿಸರದ ವೈಭವವನ್ನ, ಕೊಡಗರ ಧೀರತನವನ್ನ ಸೆರೆ ಹಿಡಿದದ್ದು ಕೇವಲ ಭಾಷೆಯ ಮೂಲಕ. ಇಂತಹಾ ಒಂದು ಘನತೆ ನಮ್ಮ ಭಾಷೆಗೆ ಇದೆ ಅನ್ನುವುದೇ ಒಂದು ವಿಶೇಷತೆ.

ಓರ್ವ ಮಹಾನ್ ಕಲಾವಿದ ಕೈಲಿದ್ದ ಕಲಾ ಕುಂಚವನ್ನ ವಿವಿಧ ಬಣ್ಣಗಳಲ್ಲಿ ಅದ್ದಿ ವಿಸ್ತಾರವಾದ ಕ್ಯಾನವಾಸಿನ ಮೇಲೆ ಒಂದು ಭವ್ಯವಾದ ಚಿತ್ರವನ್ನ ರಚಿಸಿದ ಹಾಗೆ ಪಂಜೆಯವರು ಈ ಪದ್ಯದಲ್ಲಿ ಕೊಡಗನ್ನ ಬಣ್ಣಿಸಿದ್ದಾರೆ. ಇದು ನನ್ನ ಆಕರ್ಷಣೆಗೆ ಕಾರಣ. ಆದರೆ ಈ ಸುಂದರ ಭವ್ಯ ಪ್ರದೇಶವನ್ನ ನೋಡ ಬೇಕು ಅನ್ನುವ ನನ್ನ ಕನಸು ನನಸಾದದ್ದು ತುಸು ತಡವಾಗಿ. ನನ್ನ ಮಗಳ ಮದುವೆಯ ನಂತರ ನನ್ನ ಮಗಳು ಅಳಿಯನ ಜೊತೆಯಲ್ಲಿ ನಾನು ಕೊಡಗಿಗೆ ಬಂದೆ. ಇಲ್ಲೆಲ್ಲ ಸುತ್ತಾಡಿದೆ. ಸಾಲಲಿಲ್ಲ. ಮತ್ತೊಮ್ಮೆ ನನ್ನ ಹೆಂಡತಿ ಜೊತೆಗೆ ಕೊಡಗಿಗೆ ಬಂದೆ. ತಲಕಾವೇರಿ, ಭಾಗಮಂಡಲದಿಂದ ರಾಜಾ ಸೀಟಿನವರೆಗೆ ಕೊಡಗನ್ನ ಕಂಡೆ.

ನಾನು ಮಲೆನಾಡಿನವ. ನಮ್ಮಲ್ಲಿ ಗುಡ್ಡಗಳು ವಿಸ್ತಾರ, ಕಣಿವೆಗಳು ಆಳ. ಆದರೆ ಕೊಡಗಿನ ಬೆಟ್ಟಗಳು ಹತ್ತಿರ ಹತ್ತಿರ ಒಂದನ್ನೊಂದು ಒತ್ತಿ ನಿಂತು ಕೊಂಡವು. ನಮ್ಮ ಮಲೆನಾಡಿನ ಪರಿಸರಕ್ಕಿಂತ ಭಿನ್ನವಾದ ಪರಿಸರವನ್ನ ನಾನಿಲ್ಲಿ ಕಂಡೆ. ಇದಕ್ಕೆ ಕಾರಣ ಪಶ್ಚಿಮ ಘಟ್ಟದ ಮುಖ್ಯ ಶ್ರೇಣಿ ಪ್ರಾರಂಭವಾಗುವುದೇ ಕೊಡಗಿನಿಂದ. ಕೊಡಗನ್ನ ಕರ್ನಾಟಕದ ಸ್ವಿಜರಲ್ಯಾಂಡ ಎಂದು ಕರೆಯುತ್ತಾರೆ. ನಾನು ನನ್ನ ನಾಡನ್ನ ಹೊಗಳಲಿಕ್ಕೆ ಬೇರೊಂದು ದೇಶವನ್ನ ಎರವಲು ಪಡೆಯಲು ಹೋಗುವುದಿಲ್ಲ. ಕೊಡಗು ಕೊಡಗೆ. ಸಮುದ್ರಕ್ಕೆ ಸುಮುದ್ರವೇ ಉಪಮೆಯಂತೆ. ಹಾಗೆಯೇ ಕೊಡಗಿಗೆ ಕೊಡಗೇ ಉಪಮೆ. ಇಲ್ಲಿಯ ಜನಜೀವನ, ಬದುಕಿನ ಕ್ರಮ, ಶ್ರೀಮಂತಿಕೆ, ಭಾಷೆ, ವೀರಯೋಧರನ್ನ ಸದಾ ದೇಶಕ್ಕೆ ಮೀಸಲಿಡುವ ಪರಂಪರೆ, ಕ್ರೀಡಾ ಪಟುಗಳ ಜನ್ಮ ಭೂಮಿ ಇದು. ಇದೆಲ್ಲವೂ ನಾವು ಕನ್ನಡಿಗರು ಹೆಮ್ಮೆ ಪಡುವಂತಹದು. ಇದೀಗ ಮೂರನೇ ಬಾರಿ ನಾನು ಕೊಡಗಿಗೆ ಬಂದಿದ್ದೇನೆ. ಬಂದಿದ್ದೇನೆ ಅನ್ನುವುದಕ್ಕಿಂತ ಕನ್ನಡ ಜನ ನನ್ನನ್ನ ಇಲ್ಲಿಗೆ ಬರಮಾಡಿ ಕೊಂಡಿದ್ದಾರೆ, ಪ್ರೀತಿಯಿಂದ, ಮಮತೆಯಿಂದ, ವಿಶ್ವಾಸದಿಂದ, ಆದರದಿಂದ, ಆತ್ಮೀಯತೆಯಿಂದ. ಕಳೆದ 50 ವರ್ಷಗಳ ನನ್ನ ಕನ್ನಡ ಸೇವೆಯನ್ನ ಗುರುತಿಸಿ ನನಗೆ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನ ದಯಪಾಲಿಸಿ ನನ್ನನ್ನ ಇಲ್ಲಿಗೆ ಬರಮಾಡಿಕೊಂಡಿದ್ದಾರೆ.

ಕೊಡಗು ಐತಿಹಾಸಿಕವಾಗಿ, ಜಾನಪದೀಯವಾಗಿ, ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ನೈಸರ್ಗಿಕ ವಾಗಿ ಶ್ರೀಮಂತವಾದ ಪ್ರದೇಶ. ದೇಶದ ರಕ್ಷಣೆಯ ವಿಷಯಕ್ಕೆ ಬಂದಾಗ ಸದಾ ಮುಂಚೂಣಿಯಲ್ಲಿ ಇರುವ ಪ್ರದೇಶ ಇದು. ನಮ್ಮ ಸೇನಾ ಹಿನ್ನೆಲೆಯಲ್ಲಿ ಪ್ರಭಾವಶಾಲಿಯಾಗಿ ನಿಂತ ಓರ್ವ ಯೋಧ ಜನರಲ್ ಕಾರಿಯಪ್ಪ ಕುರಿತು ಮಕ್ಕಳಿಗಾಗಿ ನಾನು ಒಂದು ಪುಸ್ತಕವನ್ನ ಬರೆದಿದ್ದೇನೆ ಕೂಡ. ಕನ್ನಡ, ಮಲೆಯಾಳಿ, ತಮಿಳಿನಿಂದ ಪ್ರಭಾವಿತವಾದ ಕೊಡಗು ಭಾಷೆ ಮೂಲದಲ್ಲಿ ಅವಲಂಬಿಸಿ ಕೊಂಡಿರುವುದು ಕನ್ನಡ ಶಬ್ದಗಳನ್ನೇ ಎಂದು ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ. ಕೊಡಗಿನ ಪ್ರಖ್ಯಾತ ಕವಿಗಳೆಂದರೆ ಅಪ್ಪನೆರವಂಡಪ್ಪುಚ್ಚ ಕವಿ, ನಡಕೇರಿಯಿಂಡ ಚಿಣ್ಣಪ್ಪ ಕವಿ. ಕನ್ನಡ ಸಾಹಿತ್ಯಕ್ಕೆ ಅಪರೂಪದ ಸಣ್ಣ ಕತೆ ನೀಡಿದ ಕೊಡಗಿನ ಗೌರಮ್ಮನವರನ್ನ ಎಂದೂ ಮರೆಯಲಾಗದು. ಅಂತೆಯೇ ಕೊಡಗಿನ ಪ್ರಖ್ಯಾತ ಲೇಖಕರಾದ ಐ. ಮಾ. ಮುತ್ತಣ್ಣ, ಬಿ. ಗಣಪತಿ, ಎಸ್. ಚಿನ್ನಪ್ಪ ಮೊದಲಾದವರನ್ನು ಸಹ. ಕ್ರಿಸ್ತಶಕ ಎರಡನೇ ಶತಮಾನದಿಂದ ಪ್ರಾರಂಭವಾಗುವ ಕೊಡಗಿನ ಇತಿಹಾಸ ರೋಮಾಂಚನವನ್ನ ಉಂಟು ಮಾಡುವಂತಹದು.

ಕರ್ನಾಟಕದ ಪ್ರಥಮ ದೊರೆಯೆಂದೇ ಪ್ರಖ್ಯಾತನಾದ ಕದಂಬ ಮಯೂರ ವರ್ಮನ ವಂಶದವನಾದ ಚಂದ್ರ ವರ್ಮ ಕೊಡಗಿನ ಮೂಲ ಪುರುಷ. ಗಂಗ, ಕದಂಬ, ಚೋಳ, ಕೊಂಗಾಳ್ವರು, ಚೆಂಗಾಳ್ವರು, ಹೊಯ್ಸಳ, ವಿಜಯನಗರದ ಅರಸರು, ಇಲ್ಲಿ ರಾಜ್ಯವನ್ನ ಆಳಿದ್ದಾರೆ. ದೂರದ ನಮ್ಮ ಇಕ್ಕೇರಿಯ ಅರಸರು ಕೊಡಗರ ಹೆಣ್ಣನ್ನ ಮಲೆನಾಡಿಗೆ ಕೊಂಡೊಯ್ದದ್ದು ನಮಗೆ ಮಲೆನಾಡಿಗರಿಗೆ ಹೆಮ್ಮೆಯ ವಿಷಯ. ಇದೆಲ್ಲದರ ಕುರುಹಾಗಿ ಹಿಂದಿನ ಅವಶೇಷಗಳು, ದೇವಾಲಯಗಳು ಇಲ್ಲಿವೆ. ಈ ದೊರೆಗಳ ಕಾಲದ ಶಾಸನಗಳು ದೊರೆತಿವೆ. ಇಂತಹಾ ಒಂದು ಮಣ್ಣಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಅರ್ಥಪೂರ್ಣ ಎಂದು ನಾನು ಬಗೆಯುತ್ತೇನೆ.

ನನ್ನ ಬಗ್ಗೆ ಎರಡು ಮಾತು

ನನ್ನ ಮನೆ ಮಾತು ಕೊಂಕಣಿ. ಗೋವೆಯಲ್ಲಿ ಧಾರ್ಮಿಕ ವಿಚಾರಣೆ ಅನ್ನುವಂತಹ ತುಸು ಕ್ರೂರವಾದ ಒಂದು ಪ್ರಕ್ರಿಯೆ ನಡೆದಾಗ ಅದನ್ನ ಎದುರಿಸಲಾರದೆ ಕೊಂಕಣಿ ಜನ ಕರ್ನಾಟಕಕ್ಕೆ ಓಡಿ ಬಂದಾಗ ಇಲ್ಲಿಯ ಇಕ್ಕೇರಿ ದೊರೆಗಳು ನಮಗೆ ಆಶ್ರಯ ನೀಡಿದರು. ಅಲ್ಲಿಂದ ವಿವಿಧ ವೃತ್ತಿ ಧರ್ಮಗಳನ್ನ ನಂಬಿದ ಕೊಂಕಣಿ ಜನ ಇಲ್ಲಿ ಇಲ್ಲಿಯವರೇ ಆಗಿ ಬದುಕಿದ್ದಾರೆ. ಅವರ ಭಾಷೆ, ಸಂಸ್ಕೃತಿ, ಜೀವನ ವಿಧಾನ ತುಸು ಬೇರೆ. ಆದರೂ ಕನ್ನಡ ನಾಡಿನವರೇ ಆಗಿ ಇಂದು ಉಳಿದಿದ್ದಾರೆ. ಉದ್ಯಮಿಗಳು, ಬ್ಯಾಂಕರುಗಳು, ಲೇಖಕರು, ಕಲಾವಿದರು ಕೊಂಕಣಿಯನ್ನ ಮಾತನಾಡುತ್ತಲೇ ಕನ್ನಡದ ಸೇವೆ ಮಾಡಿದ್ದಾರೆ. ಕನ್ನಡದ ಪ್ರಖ್ಯಾತ ಚುಟುಕು ಕವಿ ದಿನಕರ ದೇಸಾಯಿ ಹೇಳಿದ್ದಾರೆ-

ಕನ್ನಡದ ಜೊತೆಗೆ ಕೊಂಕಣಿ ಮಾತನಾಡಿ

ಒಂದುಗೂಡಿದವು ಎರಡು ಜೀವನಾಡಿ

ಎರಡು ಪಕಳೆಯ ಹೂವು ಹಣ್ಣಾಗಿ ಕಾಯಿ

ಕಾಯಿ ಹಣ್ಣಾದೊಡನೆ ಜೀವನ ಮಿಠಾಯಿ.

ಹೀಗೆ ಕೊಂಕಣಿಯ ಜೊತೆಗೆ ಕನ್ನಡ ಮಾತನಾಡಿ ತಮ್ಮ ಜೀವನವನ್ನ ಮಿಠಾಯಿ ಮಾಡಿ ಕೊಂಡವರು ಬಹಳ ಜನ ಇದ್ದಾರೆ. ಗೋವಿಂದ ಪೈಗಳು, ಗೌರೀಶ ಕಾಯ್ಕಿಣಿ, ಗೋಪಾಲ ಕೃಷ್ಣ ಪೈ, ಸಂತೋಷ ಕುಮಾರ ಗುಲ್ವಾಡಿ, ಯಶವಂತ ಚಿತ್ತಾಲ, ಜಯಂತ ಕಾಯ್ಕಿಣಿ, ಇನ್ನೂ ಹಲವರು ಕೊಂಕಣಿ ಮನೋಭಾವದ ಕನ್ನಡಿಗರು. ಕನ್ನಡದ ಸೇವೆ ಮಾಡಿದವರು. ಕೊಂಕಣಿ ಬಹಳ ಪುರಾತನವಾದ ಭಾಷೆ, ಬಹಳ ಅಪರೂಪದ ಜಾನಪದ ಹಿನ್ನೆಲೆಯನ್ನ ಉಳ್ಳಂತಹದು, ಇದರ ಪ್ರಯೋಜನವನ್ನ ಈ ಕೊಂಕಣಿ ಜನ ಕನ್ನಡಕ್ಕೆ ಧಾರೆ ಎರೆದು ಕನ್ನಡವನ್ನ ಶ್ರೀಮಂತ ಗೊಳಿಸಿದ್ದಾರೆ. ನಾನು ಕೂಡ ನನ್ನ ಅಮ್ಮ ನನಗೆ ಹೇಳುತ್ತಿದ್ದ ಕೊಂಕಣಿಯ ಅದ್ಭುತ ಕತೆಗಳನ್ನ ಕೇಳಿ ಬೆಳೆದವನು. ಕೊಂಕಣಿ ಹಾಡು, ಗಾದೆ, ಒಗಟು ನನಗೆ ಪ್ರಿಯವಾಗಿತ್ತು. ಜೊತೆ ಜೊತೆಗೆ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದ ನನ್ನ ತಂದೆ ನನಗೆ ಕನ್ನಡದ ಕಡೆಗೆ ಕರೆದು ಕೊಂಡು ಹೋದರು. ಮಕ್ಕಳಿಗೆ ಕಲಿಸಲೆಂದೇ ಅವರು ಬರೆದು ಇರಿಸಿ ಕೊಂಡ ಪುಸ್ತಕದ ಒಂದು ಕವಿತೆ ನನ್ನನ್ನ ಹೊಸದೊಂದು ಪ್ರಪಂಚಕ್ಕೆ ಕರೆದೊಯ್ದಿತು.

ತೆಂಗಿನ ಮರಗಳು ಕುಳ್ಳಾಗಿದ್ದು

ಕಾಯ್ಗಳು ಕೈಗೆ ಸಿಗುವಂತಿದ್ದು

ಕೊಬ್ಬರಿ ಎಲ್ಲ ಮೇಲ್ಗಡೆ ಇರಲು

ಎಳನೀರಿನ ಮುಚ್ಚಳ ತೆಗೆದಿರಲು

ಎಷ್ಟೋ ಚೆನ್ನಾಗಿರುತ್ತಿತ್ತು ಇನ್ನೂ ಚೆನ್ನಾಗಿರುತ್ತಿತ್ತು

ಅನ್ನುವ ಈ ಕವಿತೆ ಕನ್ನಡದ ಎಳನೀರಿನ ಪರಿಚಯ ನನಗೆ ಮಾಡಿ ಕೊಟ್ಟಿತು. ನಾನು 5ನೇ ವಯಸ್ಸಿನಲ್ಲಿ ಕನ್ನಡದ ಮೋಹಕ್ಕೆ ಒಳಗಾದೆ. ಅಂದು ನಾನು ಬೆಳೆಸಿ ಕೊಂಡ ಈ ಮೋಹ ಇಂದು ನನ್ನನ್ನ ಇಲ್ಲಿಗೆ ಕರೆತಂದು ನಿಲ್ಲಿಸಿದೆ. ಆದರೆ ಇದು ನಾನು ಒಂಟಿಯಾಗಿ ಮಾಡಿದ ಪಯಣವಲ್ಲ. ನನ್ನ ಬರವಣಿಗೆಗೆ ನನ್ನ ಮಿತ್ರರು, ಪತ್ರಿಕಾ ಸ್ನೇಹಿತರು ಸಾಥ್ ನೀಡಿದ್ದಾರೆ. ನನ್ನನ್ನ ಹುರಿದುಂಬಿಸಿದ್ದಾರೆ, ನಾನು ಬರೆದುದನ್ನ ಮೆಚ್ಚಿ ಕೊಂಡಿದ್ದಾರೆ. ನನ್ನ ನೋವಿಗೆ ಮಿಡಿದಿದ್ದಾರೆ. ಅವರೆಲ್ಲರನ್ನ ಸ್ಮರಿಸುವುದು ನನ್ನ ಕರ್ತವ್ಯ. ಇಂತಹಾ ಒಂದು ಸ್ಥಾನವನ್ನ ನನಗೆ ದೊರಕಿಸಿ ಕೊಡಲು ಕಾರಣರಾದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಮತ್ತು ಎಲ್ಲ ಪದಾಧಿಕಾರಿಗಳಿಗೆ, ಜಿಲ್ಲಾ ಅಧ್ಯಕ್ಷರುಗಳಿಗೆ, ಈ ಕಾರ್ಯಕ್ಕೆ ಕೈಜೋಡಿಸಿದ ಎಲ್ಲರಿಗೆ, ನನಗೆ ಈ ಸ್ಥಾನ ಲಭ್ಯವಾಗಿದೆ ಅನ್ನುವುದನ್ನ ಕೇಳಿ ಸಂಭ್ರಮಿಸಿದ ಸಮಸ್ತ ಕನ್ನಡ ಕುಲ ಬಾಂಧವರಿಗೆ ನಾನು ನನ್ನ ಕೃತಜ್ಞತೆಯನ್ನ ಹೇಳುತ್ತಿದ್ದೇನೆ. ನೀವು ತೋರಿದ ಈ ಪ್ರೀತಿ ಕನ್ನಡ ಭಾಷೆಯ ಬಗ್ಗೆ ನೀವು ವ್ಯಕ್ತ ಪಡಿಸಿದ ಪ್ರೀತಿ ಎಂದು ತಿಳಿಯುತ್ತೇನೆ.

ಸಾಹಿತ್ಯ ಮತ್ತು ಕಲೆ


ನಮ್ಮ ಜನ ಯಾವತ್ತೂ ಸಾಹಿತ್ಯಕ್ಕೆ ಹೆಚ್ಚಿನ ಸ್ಥಾನಮಾನವನ್ನ ಕೊಡುತ್ತ ಬಂದಿದ್ದಾರೆ. ಸಾಹಿತ್ಯ ಸಮ್ಮೇಳನ ಅಂದರೆ ಇಡೀ ನಾಡಿನ ಉದ್ದಕ್ಕೂ ಒಂದು ಸಂಚಲನ ಕಾಣಿಸುತ್ತದೆ. ಸಾಹಿತ್ಯ ಸಮ್ಮೇಳನಗಳನ್ನ ಸಂತೆ ಜಾತ್ರೆ ಎಂದು ಕೆಲವರು ಕರೆದರೂ ಅದಕ್ಕೆ ಬರುವ ಜನ ಕಡಿಮೆ ಆಗಿಲ್ಲ. ಸಮ್ಮೇಳನದ ಗೋಷ್ಠಿಗಳಲ್ಲಿ ಜನ ಭಾಗವಹಿಸುತ್ತಾರೆ, ಕವಿ ಗೋಷ್ಠಿಯನ್ನ ಕೇಳುತ್ತಾರೆ. ಪುಸ್ತಕ ಪ್ರದರ್ಶನದ ಪ್ರಯೋಜನ ಪಡೆದು ಕೊಳ್ಳುತ್ತಾರೆ.ಸಮ್ಮೇಳನ ದಿನದಿಂದ ದಿನಕ್ಕೆ ತನ್ನ ಜನಪ್ರಿಯತೆಯನ್ನ ಹೆಚ್ಚು ಮಾಡಿ ಕೊಳ್ಳುತ್ತದೆ. ಈ ಸಮ್ಮೇಳನವನ್ನ ಬೇರೊಂದು ರೀತಿಯಲ್ಲಿ ನಡೆಸಬೇಕು ಅನ್ನುವ ಮಾತು ಇದೆಯಾದರೂ ಅದಕ್ಕೊಂದು ಪರ್ಯಾಯ ರೂಪ ಕೊಡಲು ಯಾರಿಂದಲೂ ಆಗಿಲ್ಲ. ಇದಕ್ಕೆ ಕಾರಣ, ಮೊದಲನೆಯದು ಸಾಹಿತ್ಯ ಬದುಕನ್ನ ಪ್ರತಿ ಬಿಂಬಿಸುತ್ತದೆ ಅನ್ನುವುದು; ಎರಡನೆಯದು ಅದೊಂದು ಭಾಷೆಯನ್ನ ಅವಲಂಬಿಸಿ ಕೊಂಡಿದೆ ಅನ್ನುವುದು. ಈ ಬದುಕು ನಮಗೆ ಬಹಳ ಪ್ರಿಯವಾದದ್ದು. ನಮ್ಮ ಸುಖ, ನೋವು, ಕಷ್ಟ, ತಾಪತ್ರಯಗಳು ಅದೆಷ್ಟೇ ಇರಲಿ ಬದುಕಿಗೆ ವಿಮುಖವಾಗಿ ಹೋಗಲಿಕ್ಕೆ ನಾವು ಬಯಸುವುದಿಲ್ಲ. ನಮ್ಮಲ್ಲಿ ಬದುಕನ್ನ ಧಿಕ್ಕರಿಸಿ ಸನ್ಯಾಸಿಗಳಾಗುವವರು ಕೆಲವರೇ ಆದರೆ ಉಳಿದವರೆಲ್ಲ ಪರಿಸ್ಥಿತಿ ಏನೇ ಬರಲಿ ಬದುಕ ಬೇಕು ಅನ್ನುವವರು. ಆತ್ಮಹತ್ಯಗೆ ನಮ್ಮಲ್ಲಿ ಗೌರವ ಇಲ್ಲ. ಇರಬೇಕು ಇದ್ದು ಜಯಿಸ ಬೇಕು ಅನ್ನುವುದು ನಮ್ಮ ಧ್ಯೇಯ. ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಿ ಕೊಳ್ಳಬೇಡಿ ಹುಚ್ಚಪ್ಪಗಳಿರಾ ಎಂದು ನಮ್ಮ ದಾಸರು ಹೇಳಿದ್ದಾರೆ. ಇಂತಹಾ ಬದುಕಿನ ಬಗ್ಗೆ ನಮಗೆ ನೇರವಾಗಿ ತಿಳಿಸಿ ಕೊಡುವುದು ಸಾಹಿತ್ಯ.

ನಮ್ಮಲ್ಲಿ ಸದಾ ಮತ್ತೊಬ್ಬರು ಬದುಕನ್ನ ಹೇಗೆ ಎದುರಿಸಿದರು ಅನ್ನುವುದರ ಬಗ್ಗೆ ಕುತೂಹಲ ಇರುತ್ತದೆ. ಈ ಕುತೂಹಲವನ್ನ ತಣಿಸೋದು ಸಾಹಿತ್ಯ. ಈ ಕೆಲಸವನ್ನ ಬೇರೆ ಕಲಾ ಮಾಧ್ಯಮಗಳು ಮಾಡಿದರೂ ಕೂಡ ಒಂದು ಕ್ರಮದಲ್ಲಿ ಒಂದು ಮಾದರಿಯಲ್ಲಿ ಸರಳವಾಗಿ ಈ ಕೆಲಸ ಮಾಡುವುದು ಸಾಹಿತ್ಯ. ಇದಕ್ಕಾಗಿ ಸಾಹಿತ್ಯದ ಬಗ್ಗೆ ನಮಗೆ ಗೌರವ. ಇದು ಸಾಹಿತ್ಯವನ್ನ ನಾವು ಗೌರವಿಸಲಿಕ್ಕೆ ಒಂದು ಕಾರಣ ಅಂತ ನಾನು ತಿಳಿದಿದ್ದೇನೆ. ಅದು ಕತೆ ಕಾದಂಬರಿ ಕಾವ್ಯ ನಾಟಕ ಬೇರೆ ಯಾವುದೇ ಸಾಹಿತ್ಯ ಪ್ರಕಾರವೇ ಇರಲಿ ಅದು ಬದುಕನ್ನ ಕುರಿತೇ ಇರುತ್ತದೆ. ನಾವು ಬದುಕುವ ಧಾವಂತದಲ್ಲಿ ಬದುಕುತ್ತ ಹೋಗಿ ಬಿಡುತ್ತೇವೆ. ನಾವೇನು ತಪ್ಪು ಮಾಡಿದ್ದೇವೆ ಅನ್ನುವುದು ನಮಗೆ ತಿಳಿಯದೇ ಹೋಗಿ ಬಿಡುತ್ತದೆ. ಅಧಿಕಾರವನ್ನ ಹಣವನ್ನ ಹೆಣ್ಣನ್ನ ಭೋಗಿಸುವಾಗ ನಮ್ಮ ವರ್ತನೆ ಏನಾಗಿತ್ತು ಅನ್ನುವುದು ನಮಗೆ ತಿಳಿಯುವುದಿಲ್ಲ. ಇಂತಹಾ ಸಂದರ್ಭದಲ್ಲಿ ನಮ್ಮ ಬದುಕಿನ ಪುನರಾವಲೋಕನ ಮಾಡಲು ಸಾಹಿತ್ಯ ನಮಗೆ ನೆರವು ನೀಡುತ್ತದೆ. ಮತ್ತೊಬ್ಬರ ಕತೆಯನ್ನ, ಬದುಕನ್ನ ನಮ್ಮ ಮುಂದೆ ತೆರೆದು ಇಡುವುದರ ಮೂಲಕ ಸಾಹಿತ್ಯ ನಮ್ಮ ಬದುಕನ್ನ ನಾವೇ ಪರಿಶೀಲಿಸಿ ಕೊಳ್ಳುವ ಅವಕಾಶವನ್ನ ಕಲ್ಪಸಿ ಕೊಡುತ್ತದೆ. ಸಾಹಿತ್ಯವನ್ನ ನಾವು ಮೆಚ್ಚಿ ಕೊಳ್ಳಲು ಕೂಡ ಇದೇ ಕಾರಣ. ಬದುಕಿನ ಪುನರಾವಲೋಕನಕ್ಕೆ ಅವಕಾಶ ಮಾಡಿ ಕೊಡುವುದೇ ಸಾಹಿತ್ಯದ ವಿಶೇಷತೆ. ಇದನ್ನ ನಾವೆಲ್ಲ ಗೌರವಿಸುವುದು ಇದೇ ಕಾರಣಕ್ಕೆ.

ಇನ್ನು ಎರಡನೆಯದಾಗಿ ಸಾಹಿತ್ಯ ತನ್ನ ಕೆಲಸಕ್ಕೆ ಭಾಷೆಯನ್ನ ಅವಲಂಬಿಸಿ ಕೊಂಡಿರುತ್ತದೆ. ಕಲಾವಿದ ಬಣ್ಣವನ್ನ, ಸಂಗೀತಗಾರ ರಾಗ ಆಲಾಪನೆಯನ್ನ, ನಟ ಅಭಿನಯವನ್ನ, ನರ್ತಕ ಮುದ್ರೆಗಳನ್ನ ಬಳಸಿದರೆ ಸಾಹಿತಿ ಕೇವಲ ಭಾಷೆಯನ್ನ. ಹೌದು ಕೇವಲ ಭಾಷೆಯನ್ನ ಬಳಸಿ ಕೊಳ್ಳುತ್ತಾನೆ. ಈ ಭಾಷೆ ಕೆಲ ಶಬ್ದಗಳ ಜಂಜಡ ಅಲ್ಲ. ಗೊಂದಲ ಅಲ್ಲ. ಭಾಷೆಗೆ ಒಂದು ಜಾನಪದ ಶ್ರೀಮಂತಿಕೆ, ಭವ್ಯ ಇತಿಹಾಸ, ಒಂದು ಪರಂಪರೆ ಒಂದು ಜೀವನ ವಿಧಾನ ಇರುತ್ತೆ. ಇಂತಹಾ ಭಾಷೆಯನ್ನ ಲೇಖಕ ತನ್ನ ಸಂವಹನಕ್ಕೆ ಬಳಸಿ ಕೊಳ್ಳುತ್ತಾನೆ. ಭಾಷೆಯ ಮೂಲಕವೇ ಲೇಖಕ ಎಲ್ಲವನ್ನ ತಂದು ಓದುಗನಿಗೆ ತಲುಪಿಸುತ್ತಾನೆ. ಒಂದು ಪುಸ್ತಕವನ್ನ ಓದುತ್ತ ಓದುಗ ಬೆರಗಾಗುತ್ತಾನೆ, ಕಂಬನಿ ಮಿಡಿಯುತ್ತಾನೆ, ಸಂತೋಷ ಪಡುತ್ತಾನೆ. ಇದು ಪುಸ್ತಕ ಮಾಡುವ ಪರಿಣಾಮ ಎಂದು ನಾನು ತಿಳಿಯುತ್ತೇನೆ. ಅಲೆಕ್ಷಾಂಡರನ ಆಸ್ಥಾನಕ್ಕೆ ಬಂದ ಓರ್ವ ಕಲಾವಿದ ಕಲಾತ್ಮಕವಾಗಿ ಕೆತ್ತಿದ ಒಂದು ಕರಂಡಕವನ್ನ ದೊರೆಗೆ ಕಾಣಿಕೆಯಾಗಿ ನೀಡಿದ. ಅದರಲ್ಲಿ ಏನನ್ನ ಇಡುವುದು ಅನ್ನುವ ಪ್ರಶ್ನೆ ಬಂದಿತು. ಜನ ಒಂದೊಂದು ಸಲಹೆ ನೀಡಿದರು. ದೊರೆಯ ಪಟ್ಟದ ಕತ್ತಿ, ಉಂಗುರ, ಕಿರೀಟ ಇಡಿ ಎಂದರು ಜನ. ಆದರೆ ಕೊನೆಗೆ ಅಲೆಕ್ಸಾಂಡರ್ ನುಡಿದ ಈ ಕಲಾತ್ಮಕವಾದ ಕರಂಡಕದಲ್ಲಿ ಏನನ್ನಾದರೂ ಇಡಬೇಕು ಅಂದರೆ ಅದು ಗ್ರೀಕ್ ಭಾಷೆಯ ಶ್ರೇಷ್ಠ ಕೃತಿಗಳಾದ ಒಡೆಸ್ಸಿ ಹಾಗೂ ಎಲಿಯಡ್ಡನ್ನ ಇಡಬೇಕು ಎಂದ ಆತ. ಜನ ಆಗ ಅದನ್ನ ಒಪ್ಪಿಕೊಂಡರು. ಅಂದರೆ ಪುಸ್ತಕ ಅನ್ನುವ ವಸ್ತು ಶ್ರೇಷ್ಠವಾದದ್ದು. ಇಂತಹ ಪುಸ್ತಕದ ಮೂಲಕ ಭಾಷೆ ಮಾಡುವ ಮ್ಯಾಜಿಕ್ ಬಹಳ ದೊಡ್ಡದು ಎಂದು ನಾನು ನಂಬುತ್ತೇನೆ.

ಲೇಖಕ ಇಂತಹ ಭಾಷೆ ಉಳಿಯ ಬೇಕು ಎಂದು ಬಯಸುವುದು ಇದಕ್ಕಾಗಿ. ಆತ ಹೋರಾಟ ಮಾಡುವುದು, ಭಾಷೆಯ ಶಕ್ತಿ ಅವನಿಗೆ ಗೊತ್ತಿದೆ ಅನ್ನುವ ಕಾರಣಕ್ಕೆ. ಸರಸ್ವತಿಯನ್ನ ಅಕ್ಷರ ಮಾಲಾ ಪುಸ್ತಕ ಧಾರಿಣಿ ಎಂದು ಒಪ್ಪಿಕೊಂಡವರು ನಾವು. ಶೃಂಗೇರಿಯ ಶಾರದೆಯ ಕೈಯಲ್ಲಿ ಪುಸ್ತಕವಿದೆ. ಒಂದು ಕಾಲದಲ್ಲಿ ಜ್ಞಾನ ಅನ್ನುವುದು ಪುಸ್ತಕದ ಮೂಲಕವೇ ನಮಗೆ ಲಭ್ಯವಾಗುತ್ತಿತ್ತು. ಪುಸ್ತಕ ಭಂಡಾರಗಳ ಅಭಿವೃಧ್ದಿಯ ಮೂಲಕವೇ ಹೊಸ ಸಾಧನೆಗಳನ್ನ ಮಾಡಿದ ದೇಶಗಳೂ ಇವೆ. ಆದರೆ ಇಂದು ಪುಸ್ತಕದ ಜಾಗದಲ್ಲಿ ಕಂಪ್ಯೂಟರ್, ಲ್ಯಾಪಟಾಪ್, ಮೊಬೈಲ, ಟ್ಯಾಬ್ ಇಂಟರ್ ನೆಟ್ ಬಂದಿದೆ. ಒಂದು ಕಾಲದಲ್ಲಿ ಪುಸ್ತಕಗಳನ್ನ ಓದಿ ಅಲ್ಲಿಯ ಆಗುಹೋಗುಗಳ ಕುರಿತು ಮಾತನಾಡುತ್ತಿದ್ದ ನಮ್ಮ ಓದುಗ ವರ್ಗ ಇಂದು ಈ ವಿದ್ಯುನ್ಮಾನ ಮಾಧ್ಯಮಗಳ ಕೈಯಲ್ಲಿ ಸಿಕ್ಕಿ ಬಿದ್ದಿದೆ. ಈ ಯಂತ್ರದ ಹಿಂದೆ ಈ ಆಧುನಿಕ ಯಂತ್ರವನ್ನ ಎಲ್ಲೆಲ್ಲೂ ಜನಪ್ರಿಯಗೊಳಿಸಿ ಅದರ ಮೂಲಕ ಇಡೀ ವಿಶ್ವವನ್ನ ಆಳಬೇಕು ಅನ್ನುವ ಅಭಿಲಾಷೆ ಇರುವ ಒಂದು ಕುತಂತ್ರ ಮನಸ್ಸು ಇದೆಯೇನೋ ಎಂದು ಕೂಡ ನನಗೆ ಅನಿಸುತ್ತಿದೆ. ಈ ಯಂತ್ರಗಳು ಮಾನವೀಯ ಗುಣಗಳನ್ನ ಕೊಲ್ಲುತ್ತ, ಮಾನವೀಯತೆಯಿಂದ ನಮ್ಮನ್ನ ದೂರ ಸೆಳೆದೊಯ್ಯುತ್ತ ಯಂತ್ರದ ಗುಲಾಮರನ್ನಾಗಿ ನಮ್ಮನ್ನ ಪರಿವತರ್ಿಸಿ ಇಡೀ ವಿಶ್ವ ಒಂದೇ ಮಾದರಿಯ, ಒಂದೇ ರೀತಿಯಲ್ಲಿ ಯೋಚಿಸುವ, ಒಂದೇ ಆಹಾರವನ್ನ ಸೇವಿಸುವ ವಿಚಿತ್ರ ಜೀವಿಗಳನ್ನ ಸೃಷ್ಟಿ ಮಾಡುವ ಹುನ್ನಾರ ನಡೆದಿರಬಹುದೆ ಅನ್ನುವ ಅನುಮಾನ ನನ್ನನ್ನ ಕಾಡುತ್ತಿದೆ.

ಜ್ಞಾನ ಮತ್ತು ವಿವೇಕ

ಪುಸ್ತಕಗಳ ವಿಶೇಷತೆ ಅಂದರೆ ಒಂದು ಪುಸ್ತಕ ಓರ್ವ ಓದುಗನನ್ನ ಆಯ್ಕೆ ಮಾಡಿ ಕೊಂಡು ಅವನ ವಿಶ್ವಾಸವನ್ನ ಗಳಿಸಿ ಏಕಾಂತದಲ್ಲಿ ಅವನಿಗೆ ಕೆಲ ವಿಷಯಗಳನ್ನ ತಿಳಿಸಿ ಕೊಡುತ್ತ ಅವನನ್ನ ಎಲ್ಲ ವಿಷಯಗಳಲ್ಲೂ ಕನ್ವಿನ್ಸ್ ಮಾಡುತ್ತ ಹೋಗುತ್ತದೆ. ಇದರಿಂದಾಗಿ ಓದುಗನ ವ್ಯಕ್ತಿತ್ವದಲ್ಲಿ ಬದಲಾವಣೆ ಆಗುತ್ತದೆ, ಆವನ ಅನುಭವ, ಕಲ್ಪನೆ, ಜೀವನ ದೃಷ್ಟಿ ಪಕ್ವವಾಗುತ್ತ ಹೋಗುತ್ತದೆ. ಈ ಕೆಲಸವನ್ನ ಇಂದಿನ ವಿದ್ಯುನ್ಮಾನ ಯಂತ್ರಗಳು ಮಾಡುವುದಿಲ್ಲ. ಹೊಸದು, ಆಧುನಿಕ ಆವಿಷ್ಕಾರ, ಒಂದು ಅದ್ಭುತ ಎಂಬಂತಹಾ ಭ್ರಮೆಯನ್ನ ಸೃಷ್ಟಿ ಮಾಡುತ್ತ ಬಂದ ಒಂದು ಯಂತ್ರ, ಮೊದಲು ಮನುಷ್ಯನ ವಿವೇಕವನ್ನ ನಾಶ ಮಾಡಿದರೆ ನಂತರ ಅದು ಹೃದಯ ಮನಸ್ಸುಗಳ ಮೇಲೆ ದಾಳಿ ಮಾಡುತ್ತದೆ. ಈ ಕಾರಣಕ್ಕಾಗಿಯೇ ಗಾಂಧೀಜಿ ಯಂತ್ರವನ್ನ ರಕ್ಕಸ ಎಂದು ಕರೆದದ್ದು. ಈ ಯಂತ್ರ ತನಗೆ ಬೇಕಾದ ಕಮಾಡಟಿಯನ್ನ ಉತ್ಪಾದಿಸುವಲ್ಲಿ, ಬಿಕರಿಮಾಡುವಲ್ಲಿ ಸದಾ ನಿರತ. ಸದಾ ಸಾಮಾಜಿಕ ಬದ್ಧತೆಯೊಡನೆ ಯೋಚನೆ ಮಾಡುವ ಬರೆಯುವ ಲೇಖಕ ಇಂದು ಈ ಯಂತ್ರದ ಎದಿರು ಸೋಲುತ್ತಿದ್ದಾನೆ. ಹಾಗೆಂದು ನಾವು ಯಂತ್ರಗಳನ್ನ ನಿರಾಕರಿಸಬೇಕು ಎಂದು ನಾನು ಹೇಳುತ್ತಿಲ್ಲ, ಯಂತ್ರ ಮನುಷ್ಯನ ಕೈಲಿರ ಬೇಕು, ಮಾನವ ಯಂತ್ರದ ಗುಲಾಮನಾಗ ಬಾರದು. ಮಾಹಿತಿ ತಂತ್ರ ಜ್ಞಾನದ ಇಂದಿನ ದಿನಗಳಲ್ಲಿ ನಾವೆಲ್ಲ ಜ್ಞಾನವಂತರಾಗುತ್ತಿದ್ದೇವೆ. ಆದರೆ ನಾವು ಯಾರೂ ಕೂಡ ವಿವೇಕ ಶಾಲಿಗಳಾಗಿ ಪರಿವರ್ತನೆ ಹೊಂದುತ್ತಿಲ್ಲ. ಒಂದು ನದಿ ಎಲ್ಲಿ ಹುಟ್ಟುತ್ತೆ, ಅದರಲ್ಲಿ ಎಷ್ಟು ನೀರು ಹರಿಯುತ್ತೆ, ಅದು ಎಲ್ಲಿ ಕಡಲನ್ನ ಸೇರುತ್ತದೆ ಅನ್ನುವುದು ನಮಗೆ ಗೊತ್ತಿದೆ. ಆದರೆ ಅದೇ ನದಿ ಒಂದು ಸಂಸ್ಕೃತಿಯನ್ನ ಹುಟ್ಟು ಹಾಕುವುದು, ಲಕ್ಷಲಕ್ಷ ಜನರ ದಾಹವನ್ನ ನೀಗಿಸುವುದು, ವಿವಿಧ ರೀತಿಯಲ್ಲಿ ಜನರನ್ನ ಸಲಹುವುದು ನಮಗೆ ಗೊತ್ತಿಲ್ಲ. ನದಿಯೊಂದರ ಕುರಿತ ಅಂಕಿ ಅಂಶ ಅರಿತ ನಾವು ಅದರ ಮಾನವೀಯ ಸಂಬಂಧಗಳ ಕುರಿತು ಕುರುಡರಾಗುತ್ತೇವೆ. ಹೀಗಾಗಿ ನದಿಯೊಂದರಿಂದ ಕಲಿಯ ಬೇಕಾದ ಪಾಠವನ್ನ ನಾವು ಕಲಿಯುವುದೇ ಇಲ್ಲ. ನಮಗೆ ಇಂದು ಜ್ಞಾನದ ಜೊತೆಗೆ ವಿವೇಕ ಬೇಕಾಗಿದೆ. ಆದರೆ ಅದರ ಕೊರತೆ ಇದೆ.

ಇನ್ನು ಈ ಯಂತ್ರದ ದಾಳಿಗೆ ಒಳಗಾಗಿ ನಮ್ಮ ಭಾಷೆ ಕೂಡ ನಶಿಸಿ ಹೋಗುತ್ತಿದೆಯೆ? ನಾವು ಈ ವಿಚಾರ ಮಾಡಬೇಕು. ಎಫ್.ಎಂ. ರೇಡಿಯೋ ಬಂದ ಮೇಲೆ ನಮ್ಮ ಭಾಷೆಗೆ ಬಂದೊದಗಿದ ದುರವಸ್ಥೆಯ ಕುರಿತು ಈಗಾಗಲೇ ಸಾಕಷ್ಟು ನಾವು ಕೇಳಿದ್ದೇವೆ. ಮಗಾ, ಮಚ್ಚಾ ಅನ್ನುವ ಶಬ್ದಗಳನ್ನ ಉಪಯೋಗಿಸ ಬಾರದು ಎಂದು ಒಂದು ವಿದ್ಯಾ ಸಂಸ್ಥೆ ತನ್ನ ವಿದ್ಯಾರ್ಥಿಗಳಿಗೆ ಆದೇಶ ಹೊರಡಿಸಿದೆ. ಮೊಬೈಲ್ ಬಂದ ನಂತರ ಕನ್ನಡದ ಅಂಕಿಗಳು ನಮಗೆ ಮರೆತೇ ಹೋಗಿವೆ. ಯಂತ್ರದ ಅವಸರಕ್ಕೆ ಹೊಂದಿ ಕೊಳ್ಳುವ ಭರದಲ್ಲಿ ಭಾಷೆಯನ್ನ ಮೊಟಕು ಗೊಳಿಸುವ, ಹೃಶ್ಯ ಗೊಳಿಸುವ ಯತ್ನ ನಡೆದಿದೆ. ಅನ್ನದ ಪ್ರಶ್ನೆಯೇ ಮುಖ್ಯವಾಗಿ ಕನ್ನಡ ಹಿಂದೆ ಸರಿದು ಇಂಗ್ಲೀಷ್ ವಿಜೃಂಬಿಸುತ್ತಿದೆ.

ಕವಿರಾಜ ಮಾರ್ಗದ ಕವಿ ತನ್ನ ಕಾಲದಲ್ಲಿ ಇದ್ದ ಕನ್ನಡವನ್ನ ಕುರಿತು ಬರೆಯುತ್ತ ಕನ್ನಡಂಗಳ್ ಅನ್ನುವ ಶಬ್ದವನ್ನ ಬಳಸುತ್ತಾನೆ. ಈ ಮಾತು ಇಂದಿಗೂ ನಿಜ. ಗಂಡು ಮೆಟ್ಟಿನ ಭಾಷೆಯಾದ ಬೇಂದ್ರೆಯವರ ಧಾರವಾಡದ ಕನ್ನಡ, ಅನಕೃ ಅವರ ಮಧುರವಾದ ಮೈಸೂರು ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯ ಕಾರಂತರ ಕನ್ನಡ, ಗೋಕಾಕದ ಕೃಷ್ಣ ಮೂರ್ತಿ ಪುರಾಣಿಕರ ಕನ್ನಡ, ಗ್ರಾಮಾಯಣ ಕಾದಂಬರಿಯ ಬಹದ್ದೂರರ ಕನ್ನಡ, ಕುವೆಂಪು ಅವರ ಮಲೆನಾಡಿನ ಕನ್ನಡ, ಕುಂವಿ ಅವರ ಬಳ್ಳಾರಿಯ ಕನ್ನಡ, ದೇವನೂರರ ಚಾಮರಾಜ ನಗರದ ಕನ್ನಡ, ಇತ್ಯಾದಿಗಳು ಕನ್ನಡದಲ್ಲಿ ಇರುವುದನ್ನ ನಾವು ಗಮನಿಸ ಬೇಕಿದೆ. ಇಂತಹ ವೈವಿಧ್ಯತೆ ನಾಳೆ ಉಳಿದೀತೆ ಅನ್ನುವ ಪ್ರಶ್ನೆ ಕೂಡ ಇದೆ. ಇಂತಹ ವೈವಿಧ್ಯಮಯ ಕನ್ನಡವನ್ನ ಇರಿಸಿ ಕೊಂಡು ನಾವು ಏನೂ ಮಾಡಬಹುದು. ಆದರೆ ನಮ್ಮ ಜನ ಕನ್ನಡದಲ್ಲಿ ಶಬ್ದಗಳಿಲ್ಲ, ವಿಜ್ಞಾನ, ವೈದ್ಯಕೀಯ ಇತ್ಯಾದಿ ವಿಷಯಗಳನ್ನ ಕನ್ನಡದಲ್ಲಿ ಹೇಳಲಿಕ್ಕೆ ಸಾಧ್ಯವಿಲ್ಲ ಅನ್ನುವ ನೆಪಗಳನ್ನ ಹೇಳುತ್ತಿರುವುದು ನಾಚಿಕೆಗೇಡು. ನಮ್ಮ ನಾಡಿನ ಕೃಷಿಕರು, ಕುಶಲ ಕರ್ಮಿಗಳು, ವಿವಿಧ ಕೆಲಸ ಕಾರ್ಯಗಳನ್ನ ಮಾಡುವವರು ತಾವು ದಿನ ನಿತ್ಯ ಬಳಸುವ ವಸ್ತುಗಳಿಗೆ ಸುಂದರ ಹೆಸರುಗಳನ್ನ ಇರಿಸಿದ್ದಾರೆ, ತಮ್ಮ ಸುತ್ತ ಇರುವ ಗಿಡ ಮರ ಬಳ್ಳಿ ಹಕ್ಕಿ ಮೀನುಗಳಿಗೆ ಹೆಸರನ್ನ ಇರಿಸಿದ್ದಾರೆ. ಆದರೆ ಒಂದು ಮೋರಿ ಕಟ್ಟಲು ನಮ್ಮ ಇಂಜಿನಿಯರುಗಳಿಗೆ ವರ್ಡ್ಸ ಇಲ್ಲ ಅಂದರೆ ಅದು ಭಾಷೆಯ ಅಸಾಮರ್ಥ್ಯ ಅಲ್ಲ. ಇದು ಅವರ ಅಸಾಮರ್ಥ್ಯ.

ಕನ್ನಡದ ವಿಷಯ ಬಂದಾಗಲೆಲ್ಲ ನಾವು ಸರಕಾರವನ್ನ ಅಪರಾಧೀ ಸ್ಥಾನದಲ್ಲಿ ನಿಲ್ಲಿಸುತ್ತೇವೆ. ಸರಕಾರ ಕನ್ನಡಕ್ಕಾಗಿ ಏನೂ ಮಾಡುತ್ತಿಲ್ಲ ಅನ್ನುವುದು ನಮ್ಮ ಜನರ ಪುಕಾರು. ಸರಕಾರ ಆಕಡೆ ಇರಲಿ, ನಾವು ಏನು ಮಾಡಿದ್ದೇವೆ? ನಮ್ಮ ಮಕ್ಕಳು ನಾಯಿಯನ್ನ ಡಾಗಿ ಅಂದಾಗ, ಬೆಕ್ಕನ್ನ ಕ್ಯಾಟಿ ಅಂದಾಗ, ಚಂದ್ರನನ್ನ ಮೂನ್ ಅಂಕಲ್ ಎಂದಾಗ ತೆಂಗಿನ ಮರ ಹತ್ತಿ ಕೂರುವ ನಮ್ಮ ನಮ್ಮ ಪೋಷಕರು ಕನ್ನಡದ ಇಂದಿನ ಸ್ಥಿತಿಗೆ ಮೂಲ ಕಾರಣ. ಆಂಗ್ಲ ಮಾಧ್ಯಮ ಶಾಲೆಗಳು ನಮ್ಮ ಜನರಿಗೆ ರೋಮಾಂಚನವನ್ನ ಉಂಟುಮಾಡುತ್ತವೆ. ಈ ಶಾಲೆಗಳ ಶಿಕ್ಷಣದ ಬಗ್ಗೆ ನನ್ನ ತಕರಾರಿದೆ. ಹತ್ತು ಕೆಜಿ ಹೆಗಲ ಚೀಲ, ಕೈಯಲ್ಲಿ ನೀರಿನ ಬಾಟಲಿ, ಊಟದ ಡಬ್ಬಿ, ಕೊಡೆ, ಇತ್ಯಾದಿ ಹೊತ್ತು ಶಾಲೆಗೆ ಹೋಗುವ ಮಕ್ಕಳಿಗೂ ಗಡಿಯಲ್ಲಿ ಗಡಿಕಾಯುವ ನಮ್ಮ ಸೈನಿಕರಿಗೂ ನನಗೆ ವ್ಯತ್ಯಾಸ ಕಾಣುವುದಿಲ್ಲ. ಅಲ್ಲಿಯ ಹೋಂ ವಕರ್್ ಅನ್ನುವ ಶಿಕ್ಷೆ, ಶಿಸ್ತಿನ ಹೆಸರಿನ ಬಿಗಿ ಶಿಕ್ಷಣ ಇದು ಮಕ್ಕಳನ್ನ ಏನು ಮಾಡ ಬಹುದು ನಾವು ವಿಚಾರ ಮಾಡ ಬೇಕು. ಮಕ್ಕಳು ಒಂದು ವೇಳೆ ಗದ್ದಲ ಮಾಡಿದರೆ ಅವರ ಮೊದಲ ಕಲ್ಲು ಬೀಳುವುದು ಅವರೇ ಕಲಿತ ಶಾಲೆಯ ಮೇಲೆ ಎಂಬ ಮಾತಿದೆ. ನಮ್ಮ ಶಾಲೆಗಳಲ್ಲಿ ಕನ್ನಡದ ವಾತಾವರಣ ಇಲ್ಲ ಅಂದರೆ ಅದಕ್ಕೆ ಕಾರಣ ನಮ್ಮ ಅಪ್ಪ ಅಮ್ಮ. ಎರಡನೆಯ ಕಾರಣ ನಮ್ಮ ಸರಕಾರ. ಎಲ್ಲ ರಾಜ್ಯಗಳ ಸರಕಾರಗಳೂ ತಮ್ಮ ರಾಜ್ಯದ ಭಾಷೆಯ ಹಿತವನ್ನ ಕಾಪಾಡುತ್ತ ಬಂದಿವೆ. ಆದರೆ ಕರ್ನಾಟಕದ ಸರಕಾರ ಕನ್ನಡ ಸರಕಾರವಾಗಿದೆಯೇ?

ಕೆಲ ವರ್ಷಗಳ ಹಿಂದೆ ತಮಿಳು ನಾಡಿನ ಮುಖ್ಯಮಂತ್ರಿ ಬೆಂಗಳೂರಿನ ವಿಧಾನ ಸೌಧಕ್ಕೆ ಬಂದ. ಆತ ಅಲ್ಲಿ ಕುಳಿತು ತಮಿಳಿನಲ್ಲಿ ಮಾತನಾಡಿದ. ನಮ್ಮ ಮುಖ್ಯಮಂತ್ರಿ ಆತನಿಗೆ ಇಂಗ್ಲೀಷಿನಲ್ಲಿ ಉತ್ತರಿಸಿದರು. ಇದು ಕನ್ನಡ ಸರಕಾರದ ಲಕ್ಷಣ ಖಂಡಿತ ಅಲ್ಲ. ನರಕಕ್ಕೆ ಇಳಿಸಿ ನಾಲಿಗೆ ಸೀಳ್ಸಿ ಬಾಯಿ ಹೊಲಸಾಕಿದ್ರು ಮೂಗನಲ್ಲಿ ಕನ್ನಡವನ್ನ ಆಡುತ್ತೇನೆ ಅನ್ನುವ ನಮ್ಮ ಕವಿಗಳ ಶಪಥಕ್ಕೆ ನಮ್ಮ ಮಂತ್ರಿಗಳು ಎಂತಹ ಅವಮಾನ ಮಾಡುತ್ತಾರಲ್ಲ ಎಂದು ಮೈ ಉರಿಯುತ್ತದೆ. ಇನ್ನು ಕನ್ನಡದ ಏಳಿಗೆಗೆ ಕಾವಲು ಸಮಿತಿ, ಅಭಿವೃಧ್ದಿ ಪ್ರಾಧಿಕಾರ ಇತ್ಯಾದಿಗಳು. ಕನ್ನಡವನ್ನ ದಿನ ನಿತ್ಯದ ವ್ಯವಹಾರದಲ್ಲಿ ಬಳಸಿ ಅನ್ನುವ ಸರಕಾರಿ ಆದೇಶಗಳು, ಬೋಡರ್ುಗಳನ್ನ ಕನ್ನಡದಲ್ಲಿ ಹಾಕಿ ಅನ್ನುವ ಸಾಲು ಸಾಲು ಸರಕಾರೀ ಆಜ್ಞೆಗಳು ಯಾರಿಗೂ ಮಯರ್ಾದೆ ತರುವ ವಿಷಯವಲ್ಲ. ಎಷ್ಟೋ ಸಂದರ್ಭಗಳಲ್ಲಿ ಸರಕಾರ ಜನರ ತಾಳಕ್ಕೆ ತಕ್ಕಂತೆ ಕುಣಿಯುತ್ತದೆ. ತಮಿಳು ನಾಡಿನಲ್ಲಿ ತಾಂತ್ರಿಕ ಹಾಗು ವೈದ್ಯಕೀಯ ಶಿಕ್ಷಣವನ್ನ ತಮಿಳಿನಲ್ಲಿ ನೀಡುವಾಗ ನಾವು ಪ್ರಾಥಮಿಕ ಮೊದಲ ತರಗತಿಯಲ್ಲಿ ಇಂಗ್ಲೀಷ್ ಶಿಕ್ಷಣ ನೀಡಲಿಕ್ಕೆ ಮುಂದಾಗಿದ್ದೇವೆ.

ಕನ್ನಡವನ್ನ ಅನುಷ್ಠಾನಕ್ಕೆ ತರುವಲ್ಲಿ ನಮ್ಮ ಮಂತ್ರಿಗಳು ಮುಂದಿದ್ದಾರೆ. ಆದರೆ ಇವರಿಗೆ ಅಡ್ಡಿಯಾಗಿ ನಿಂತಿರುವವರು ವಿಧಾನ ಸೌಧ ಮತ್ತಿತರ ಕಡೆಗಳಲ್ಲಿ ಕುಳಿತಿರುವ ಆಂಗ್ಲ ಮೋಹೀ ಅಧಿಕಾರಿಗಳು ಅನ್ನುವ ಮಾತಿದೆ. ಇವರು ಕನ್ನಡದ ಪರವಾಗಿ ನಿಂತರೆ ಕನ್ನಡ ಖಂಡಿತ ಉದ್ದಾರವಾಗುತ್ತದೆ.

ಒಂದು ಉದಾಹರಣೆ ಬೆಂಗಳೂರಿನಲ್ಲಿ ಪ್ರತಿ ವರ್ಷ ಒಂದು ಪುಸ್ತಕ ಪ್ರದರ್ಶನ 10 ದಿನಗಳ ಕಾಲ ಅರಮನೆ ಮೈದಾನದಲ್ಲಿ ನಡೆಯುತ್ತಿತ್ತು. ಸಹಸ್ರ ಜನ ಬಂದು ಪುಸ್ತಕಗಳನ್ನ ಅಲ್ಲಿ ಕೊಳ್ಳುತ್ತಿದ್ದರು. ಈ ಬಾರಿ ಈ ಪ್ರದರ್ಶನಕ್ಕೆ ಕೇವಲ 3 ದಿನ ನೀಡಲಾಯಿತು. ಇಲ್ಲಿ ಪುಸ್ತಕ ಮಾರಾಟ ಲಾಭ ದಾಯಕ ಉದ್ಯಮ ಪುಸ್ತಕ ವ್ಯಾಪಾರಿಗಳು ಹಣ ಮಾಡುತ್ತಾರೆ ಅನ್ನುವ ಕಾರಣಕ್ಕೆ ಹೀಗೆ ಮಾಡಲಾಯಿತು ಅನ್ನುವ ಮಾತು ಕೇಳಿ ಬಂತು. ಪುಸ್ತಕ ವ್ಯಾಪಾರದಿಂದ ಹಣ ಮಾಡಬಹುದು ಅನ್ನುವುದು ಮೊದಲ ಬಾರಿ ನಾನು ಕೇಳಿದ ಮಾತು. ಪುಸ್ತಕ ಮಾರಾಟ ಒಂದು ಸಾಂಸ್ಕೃತಿಕ ಪ್ರಕ್ರಿಯೆ. ಸಾವಿರಾರು ಜನ ಬಂದು ತಮಗೆ ಬೇಕಾದ ಒಂದು ಪುಸ್ತಕವನ್ನ ಆಯ್ಕೆ ಮಾಡಿ ಕೊಂಡು ಹೋಗುತ್ತಾರೆ ಅಂದರೆ ಈ ನೆಲದಲ್ಲಿ ಒಂದು ಉತ್ತಮ ಕೆಲಸವಾಗುತ್ತಿದೆ ಎಂದು ತಿಳಿಯಬೇಕು. ಇದರ ಬದಲು ಲಾಭದ ಮಾತನ್ನ ಆಡುವುದು ಅಕ್ಷಮ್ಯ ಅಪರಾಧ. ಪುಸ್ತಕೋದ್ಯಮವೇ ಕಷ್ಟದಲ್ಲಿ ಇರುವಾಗ ಇಂತಹಾ ವರ್ತನೆ ಖಂಡನಾರ್ಹ. ಜೊತೆಗೆ ಮೂರು ವರ್ಷಗಳಿಂದ ಗ್ರಂಥಾಲಯ ಇಲಾಖೆ ಬಿಡುಗಡೆ ಮಾಡಬೇಕಾದ ಹಣವನ್ನ ಬಿಡುಗಡೆ ಮಾಡಿಲ್ಲವಂತೆ. ಇದು ಕೂಡ ಸರಕಾರ ಗಮನಿಸ ಬೇಕಾದ ವಿಷಯ. ಸರಕಾರದಲ್ಲಿ ಇರುವ ನಮ್ಮ ಬಿಳಿಕಾಲರಿನ ಕೆಲವೇ ಕೆಲ ಜನ ಕನ್ನಡದ ವಿಷಯ ಬಂದಾಗ ತೊಂಚವಂಚ ಮಾಡುತ್ತಿದ್ದಾರೆ. ಕನ್ನಡಕ್ಕೆ ಆಗಬಹುದಾದ ಲಾಭವನ್ನ, ಸಿಗಬೇಕಾದ ಸೌಲಭ್ಯವನ್ನ ಕಾನೂನನ್ನ ತಿರುಚುವುದರ ಮೂಲಕ ಸೌಲಭ್ಯ ವಂಚಿತರನ್ನಾಗಿ ಮಾಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಕನ್ನಡಾಭಿಮಾನಿ ಅಧಿಕಾರಿಗಳು ಇದ್ದಾರೆ, ಆದರೆ ಇವರ ಸಂಖ್ಯೆ ಕಡಿಮೆ. ಕೆಲವರು ಉದ್ದೇಶ ಪೂರ್ವಕವಾಗಿ ಕನ್ನಡದ ಬೆಳವಣಿಗೆಗೆ ಆತಂಕವನ್ನ ತಂದೊಡ್ಡುತ್ತಿದ್ದಾರೆ ಎಂದು ಹೇಳಲಾಗಿದೆ. ನಮ್ಮ ಕನ್ನಢಾಭಿಮಾನ ಮಂತ್ರಿಗಳು ಇಂತಹವರ ಕಿವಿ ಹಿಂಡಿ ಕನ್ನಡದ ಹಿತವನ್ನ ಕಾಪಾಡ ಬೇಕಾಗಿದೆ.

ಕನ್ನಡ ಭಾಷೆಗೆ, ಕರ್ನಾಟಕಕ್ಕೆ ಎಲ್ಲೇ ಅವಮಾನವಾಗಲಿ, ನಷ್ಟವಾಗಲಿ, ಅದರ ವಿರುಧ್ದ ಮೊದಲು ಸರಕಾರ ನಂತರ ಜನ ಸಿಡಿದು ನಿಲ್ಲಬೇಕು. ಮೊನ್ನೆ ಬೆಳಗಾಂನಲ್ಲಿ ಒಂದು ಮಾತು ಕೇಳಿ ಬಂತು.ನಾಲ್ಕು ಜನ ಇದ್ದರೆ ಕರ್ನಾಟಕದ ಹೆಣ ಹೊರುತ್ತೇವೆ, ಐದು ಜನ ಇದ್ದರೆ ಕರ್ನಾಟಕದ ತಿಥಿ ಮಾಡುತ್ತೇವೆ ಅನ್ನುವ ಮಾತದು. ಇದರ ವಿರುಧ್ದ ನಮ್ಮ ರಕ್ಷಣಾ ವೇದಿಕೆಯ ಮಿತ್ರರು ಪ್ರತಿಭಟನೆ ನಡೆಸಿದರು. ಆದರೆ ಈ ಬಗ್ಗೆ, ಸರಕಾರ, ನಮ್ಮ ಜನ ಪ್ರತಿನಿಧಿಗಳು, ಕೊನೆಗೆ ಜನ ಕೂಡ ಪ್ರತಿಭಟಿಸಲಿಲ್ಲ. ಇಂತಹದ್ದೇ ಮಾತು ಮಹಾರಾಷ್ಟ್ರದಲ್ಲಿ ಕೇಳಿ ಬಂದಿದ್ದರೆ ಏನಾಗುತ್ತಿತ್ತು ನಾವು ಯೋಚಿಸ ಬೇಕು. ಕನ್ನಡಕ್ಕೆ ಕರ್ನಾಟಕಕ್ಕೆ ಇಂತಹಾ ದುಸ್ಥಿತಿ ಬರಬೇಕಿತ್ತೆ ನಾನು ಕೇಳುತ್ತಿದ್ದೇನೆ. ನಾನು ಸಮ್ಮೇಳನದ ಅಧ್ಯಕ್ಷನಾಗಿ ಒಪ್ಪಿತನಾಗಿದ್ದೇನೆ ಅಂದ ಕೂಡಲೇ ಕನ್ನಡದ ಜನ ನನ್ನಿಂದ ಕೆಲ ನಿರೀಕ್ಷೆಗಳನ್ನ ಇರಿಸಿ ಕೊಂಡು ನನಗೆ ಪತ್ರ ಬರೆದಿದ್ದಾರೆ, ದೂರವಾಣಿಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ಆ ವಿಷಯಗಳು ಇಡೀ ನಾಡಿನಲ್ಲಿ ಚರ್ಚೆಗೆ ಒಳಗಾಗಿರುವುದರಿಂದ ಅವುಗಳನ್ನ ನಾನಿಲ್ಲಿ ಚುಟುಕಾಗಿ ನಿಮ್ಮ ಮುಂದೆ ಇಡ ಬಯಸುತ್ತೇನೆ. ಜೊತೆಗೆ ಕವಿ ಲೇಖಕ ಎಳೆ ಬಿಸಿಲು, ತಂಪು ಬೆಳದಿಂಗಳು, ಜುಳುಜುಳು ಹರಿಯುವ ನದಿಯ ನೀರು ಇವುಗಳ ಕುರಿತೇ ಬರೆಯ ಬೇಕು ಅನ್ನುವ ತತ್ವಕ್ಕೆ ವಿರೋಧಿ ಯಾದವನು ನಾನು. ಈ ಕಾರಣಕ್ಕೆ ಈ ಕೆಲ ವಿಷಯಗಳನ್ನ ಪ್ರಸ್ತಾಪ ಮಾಡಲಿಕ್ಕೆ ಬಯಸುತ್ತೇನೆ. ಹಾಗೆ ನೋಡಲು ಹೋದರೆ ಹೇಳಲಿಕ್ಕೆ ಬಹಳ ವಿಷಯಗಳಿವೆ. ಆದರೆ ಕೆಲವನ್ನ ಮಾತ್ರ ನಿಮ್ಮ ಜೊತೆಯಲ್ಲಿ ಹಂಚಿಕೊಳ್ಳುವ ಇರಾದೆ ನನ್ನದು.

ಪುಡಾರಿ

Advertisement

Advertisement

ನಮಸ್ಕಾರ.
ನಾ. ಡಿಸೋಜ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement