ದೆಹಲಿಯಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಹೆಲ್ಪ್‌ಲೈನ್
ನವದೆಹಲಿ: ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ದೆಹಲಿ ಸರ್ಕಾರ ಭ್ರಷ್ಟಾಚಾರ ನಿರ್ಮೂಲನೆಗಾಗಿ ಸಹಾಯವಾಣಿ ಕೇಂದ್ರವನ್ನು ಬುಧವಾರ ಸ್ಥಾಪಿಸಿದೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಸರ್ಕಾರಿ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಲಂಚ ನೀಡುವಂತೆ ಪೀಡಿಸುವ ಅಧಿಕಾರಿಗಳ ವಿರುದ್ಧ ಜನರು ಭ್ರಷ್ಟಾಚಾರ ನಿರ್ಮೂಲನೆ ಸಹಾಯವಾಣಿಗೆ ಕರೆ ಮಾಡಿ. ಅವರು ತಮಗೆ ಚುಟುಕು ಕಾರ್ಯಚರಣೆ ಹೇಗೆ ನಡೆಸಬೇಕು ಎಂಬುದನ್ನು ಹೇಳಿಕೊಡುತ್ತಾರೆ. ಹೀಗಾಗಿ ನೀವು ಮಾಡುವ ಒಂದು ಕರೆ ಒಬ್ಬ ಲಂಚಕೋರನ ಬಣ್ಣ ಬಯಲು ಮಾಡಲು ಸಹಾಯವಾಗುತ್ತದೆ ಎಂದರು.
ಭ್ರಷ್ಟಾಚಾರ ನಿರ್ಮೂಲನೆ ವಿರುದ್ಧ ಹೋರಾಡುವುದು ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಹೀಗಾಗಿ ಜನರೇ ಪೊಲೀಸ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುವ ಪರಿಸ್ಥಿತಿ ಬಂದೊಗಿದೆ. ಹೀಗಿನ ಸ್ಥಿತಿಯಲ್ಲಿ ಲಂಚಕೋರರ ವಿರುದ್ಧ ಸ್ವತಃ ನಾವೇ ಕಾರ್ಯಪೌರುತ್ತರಾಗಬೇಕಿದೆ ಎಂದರು. ಇದಕ್ಕಾಗಿ ಸರ್ಕಾರ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಿದೆ. ಸಹಾಯವಾಣಿ ಕೇಂದ್ರದ ಸಂಖ್ಯೆ 011-27357169 ಆಗಿದ್ದು, ಇದು ಬೆಳಗ್ಗೆ 8ರಿಂದ ರಾತ್ರಿ 10 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ ಎಂದರು.
ಸದ್ಯಕ್ಕೆ ಈ ಮೇಲಿನ ಸಂಖ್ಯೆಯನ್ನು ಭ್ರಷ್ಟಾಚಾರ ನಿರ್ಮೂಲನೆಗಾಗಿ ಬಳಸಬಹುದಾಗಿದೆ. ಮುಂದೆ ಈ ಅಂಕಿಯನ್ನು 4 ಅಂಕಿಗಳಿಗೆ ಇಳಿಸಲಾಗುವುದು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.