ಆರೆಸ್ಸೆಸ್ಸ್ನ್ನು ರಾವಣನಿಗೆ ಹೋಲಿಸಿದ ದಿಗ್ವಿಜಯ್ ಸಿಂಗ್
ಬುಧವಾರ ಗಾಜಿಯಾಬಾದ್ನಲ್ಲಿ ಆಪ್ ಕಚೇರಿ ಮೇಲಿನ ದಾಳಿಗೆ ಸಂಬಂಧಪಟ್ಟಂತೆ ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ...
ನವದೆಹಲಿ: ಬುಧವಾರ ಗಾಜಿಯಾಬಾದ್ನಲ್ಲಿ ಆಪ್ ಕಚೇರಿ ಮೇಲಿನ ದಾಳಿಗೆ ಸಂಬಂಧಪಟ್ಟಂತೆ ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ ಕಾಂಗ್ರೆಸ್ ನೇತಾರ ದಿಗ್ವಿಜಯ್ ಸಿಂಗ್ ಆರ್ಎಸ್ಸೆಸ್ಸ್ನ್ನು ರಾವಣನಿಗೆ ಹೋಲಿಸಿದ್ದಾರೆ.
ಬಿಜೆಪಿ ಮತ್ತು ಸಂಘ ಪರಿವಾರದವರು ಆಪ್ ಕಚೇರಿ ಮೇಲೆ ದಾಳಿ ಮಾಡಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಸಂಘಪರಿವಾರದಲ್ಲಿ ನೂರೈವತ್ತಕ್ಕಿಂತಲೂ ಹೆಚ್ಚು ಸಂಘಟನೆಗಳಿವೆ. ಇವರು ಒಂದು ಕೈಯಲ್ಲಿ ಹೊಡೆದರೆ ಇನ್ನೊಂದು ಕೈಯಲ್ಲಿ ಮುಲಾಮು ಹಚ್ಚುತ್ತಾರೆ. ಎರಡು ಮುಖವಿರುವ ಪಕ್ಷ ಇದು. ಇದೆನ್ನೆಲ್ಲಾ ನೋಡಿದರೆ ಪುರಾಣದಲ್ಲಿ ಒಂದು ದೇಹ 10 ತಲೆಯಿರುವ ರಾವಣ ನೆನಪಿಗೆ ಬರುವುದಿಲ್ಲವೇ? ಎಂದು ದಿಗ್ವಿಜಯ್ ಟ್ವೀಟಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಸೇನಾ ನಿಯೋಜನೆಗೆ ಜನಾಭಿಪ್ರಾಯ ಸಂಗ್ರಹಿಸಬೇಕೆಂದು ಹೇಳಿದ್ದ ಆಪ್ ಹಿರಿಯ ನೇತಾರ ಪ್ರಶಾಂತ್ ಭೂಷಣ್ ಹೇಳಿಕೆಯನ್ನು ಖಂಡಿಸಿ ಬುಧವಾರ ಕೌಶಂಬಿಯಲ್ಲಿ ಆಪ್ ಕಚೇರಿ ಮೇಲೆ ದಾಳಿ ನಡೆದಿತ್ತು.