ದೇವಯಾನಿ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ
ವೀಸಾ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ದೋಷಾರೋಪ ಸಲ್ಲಿಕೆಯ ದಿನಾಂಕವನ್ನು ಮುಂದೂಡುವಂತೆ...
ನ್ಯೂಯಾರ್ಕ್: ವೀಸಾ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ದೋಷಾರೋಪ ಸಲ್ಲಿಕೆಯ ದಿನಾಂಕವನ್ನು ಮುಂದೂಡುವಂತೆ ಕೋರಿ ಭಾರತದ ಉಪರಾಯಭಾರಿ ದೇವಯಾನಿ ಖೋಬ್ರಾಗಡೆ ಅವರು ಸಲ್ಲಿಸಲಾಗಿದ್ದ ಅರ್ಜಿಯನ್ನು ಅಮೆರಿಕ ನ್ಯಾಯಾಧೀಶರು ವಜಾಗೊಳಿಸಿದ್ದಾರೆ.
ವೀಸಾ ವಂಚನೆ ಪ್ರಕರಣದ ದೋಷಾರೋಪ ಸಲ್ಲಿಸಲು ಜನವರಿ 13 ನಿಗದಿಯಾಗಿತ್ತು. ಆದರೆ ದೇವಯಾನಿ ಪರ ವಕೀಲರು ಗಡುವನ್ನು ಫೆಬ್ರವರಿ 12ಕ್ಕೆ ಮುಂದೂಡುವಂತೆ ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ ಸರ್ಹ ನೆಟಬರ್ನ್ ಅವರು ಅರ್ಜಿಯನ್ನು ತಿರಸ್ಕರಿಸಿದ್ದಾರೆ. ದಿನಾಂಕವನ್ನು ಮುಂದೂಡುವುದರಿಂದ ದೋಷರೋಪದ ಮೇಲೆ ಯಾವುದೇ ಪರಿಣಾಮ ಬೀರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಭಾರತದ ಉಪರಾಯಭಾರಿ ಆಗಿ ನೇಮಕಗೊಂಡಿದ್ದ ದೇವಯಾನಿ ಕೋಬ್ರಾಗಡೆ ತಮ್ಮ ಮನೆಗೆಲಸದಾಕೆ ಸಂಗೀತಾ ರಿಚರ್ಡ್ ಎಂಬಾಕೆಗೆ ನೀಡುತ್ತಿರುವ ಸಂಬಳದ ಕುರಿತು ವೀಸಾ ದಾಖಲಾತಿಯಲ್ಲಿ ತಪ್ಪು ಮಾಹಿತಿ ನೀಡಿದ್ದ ಆರೋಪದಡಿ ಡಿಸೆಂಬರ್ 12ರಂದು ದೇವಯಾನಿಯನ್ನು ಬಂಧಿಸಲಾಗಿತ್ತು. ಆ ನಂತರ 2.4 ಲಕ್ಷ ಡಾಲರ್ ಭದ್ರತೆ ನೀಡಿ ಜಾಮೀನಿನ ಮೇಲೆ ದೇವಯಾನಿ ಬಿಡುಗಡೆ ಆಗಿದ್ದರು.