ಪ್ರತಿ ಶನಿವಾರ ಕೇಜ್ರಿವಾಲ್‌ರಿಂದ ಜನಸ್ಪಂದನ ಕಾರ್ಯಕ್ರಮ
ದೆಹಲಿಯಲ್ಲಿ ಭ್ರಷ್ಟಾಚಾರ ನಿಗ್ರಹ ಸಹಾಯವಾಣಿಗೆ ಚಾಲನೆ ನೀಡಿದ ಬೆನ್ನಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್...
ನವದೆಹಲಿ: ದೆಹಲಿಯಲ್ಲಿ ಭ್ರಷ್ಟಾಚಾರ ನಿಗ್ರಹ ಸಹಾಯವಾಣಿಗೆ ಚಾಲನೆ ನೀಡಿದ ಬೆನ್ನಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಇದೀಗ ಜನರ ಸಮಸ್ಯೆಗಳನ್ನು ಆಲಿಸುವ ಜನಸ್ಪಂದನ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ.
ಪ್ರತಿ ಶನಿವಾರ ದೆಹಲಿ ವಿಧಾನಸೌಧದ ಹೊರಗೆ ಜನಸ್ಪಂದನ ಕಾರ್ಯಕ್ರಮದ ಮೂಲಕ ಜನರ ಅಹವಾಲುಗಳನ್ನು ಆಲಿಸುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ.
ಭ್ರಷ್ಟಾಚಾರ ನಿಗ್ರಹ ಸಹಾಯವಾಣಿಗೆ ಮೊದಲ ದಿನವೇ 4,000 ಕರೆಗಳು ಬಂದಿವೆ. 800 ಕ್ಕಿಂತಲೂ ಹೆಚ್ಚಿನ ಕರೆಗಳಿಗೆ ಉತ್ತರಿಸಲಾಗಿದ್ದು, ಇದರಲ್ಲಿ 38 ಜನರು ಭ್ರಷ್ಟಾಚಾರ ನಿಗ್ರಹಕ್ಕಾಗಿ ಪಣತೊಟ್ಟಿದ್ದಾರೆ ಎಂದು ಸಹಾಯವಾಣಿ ಬಗ್ಗೆ ಮಾತನಾಡಿದ ಕೇಜ್ರಿವಾಲ್ ಹೇಳಿದ್ದಾರೆ.
ಜನರ ಅಹವಾಲುಗಳನ್ನು ಸ್ವೀಕರಿಸುವ ಮೂಲಕ ನಾವು ನಮ್ಮ ಕಾರ್ಯನೀತಿಯನ್ನು ಇನ್ನಷ್ಟು ಉತ್ತಮ ಪಡಿಸಲು ಯತ್ನಿಸುತ್ತೇವೆ. ದೆಹಲಿ ಸರ್ಕಾರದ ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಚಿವರು ಪ್ರತಿ ಶನಿವಾರ ದೆಹಲಿ ವಿಧಾನಸೌಧದ ಹೊರಗಡೆ ಕುಳಿತು ಜನರ ಸಮಸ್ಯೆಗಳನ್ನು ಆಲಿಸಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್ ಹೇಳಿದ್ದಾರೆ.
ಪ್ರತಿ ಶನಿವಾರ ಎಲ್ಲ ಸಚಿವರು ಬೆಳಗ್ಗೆ 9.30ರಿಂದ 11 ಗಂಟೆಯ ವರೆಗೆ ವಿಧಾನಸೌಧದ ಹೊರಗೆ ಕುಳಿತು ಜನರೊಂದಿಗೆ ಮಾತನಾಡಲಿದ್ದಾರೆ. ಆ ವೇಳೆ ಒಬ್ಬರು ಸದಸ್ಯರು ಜನರ ಸಮಸ್ಯೆಗಳ ಬಗ್ಗೆ ಎಲ್ಲ ಸಚಿವರಿಗೂ ಮನವರಿಕೆ ಮಾಡಿಕೊಡಲಿದ್ದಾರೆ.
ತುರ್ತು ಸಮಸ್ಯೆಗಳೇನಾದರೂ ಇದ್ದರೆ ಸ್ಥಳದಲ್ಲೇ ಕರೆ ಮಾಡಿ ಪರಿಹಾರವೊದಗಿಸಲಾಗುವುದು. ಅದೇ ವೇಳೆ ಸರ್ಕಾರದ ಕಾರ್ಯ ನೀತಿಗಳ ಬಗ್ಗೆ ನಿಲುವುಗಳ ಬಗ್ಗೆ ಜನರಿಗೆ ಆಕ್ಷೇಪಗಳಿದ್ದರೂ ಅದನ್ನ ಆಲಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಹೇಳಿದ್ದಾರೆ.
ಇದು ಮಾತ್ರವಲ್ಲದೆ ಜನರ ಸಮಸ್ಯೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿದ್ದಾರೆಯೇ? ಇಲ್ಲವೇ ಎಂಬುದರ ಬಗ್ಗೆ ಜನರು ಎಸ್ಸೆಮ್ಮೆಸ್ಸ್ ಮೂಲಕ ತಿಳಿಸಬಹುದಾಗಿದೆ ಎಂದು ಕೇಜ್ರಿವಾಲ್ ತಮ್ಮ ಕಾರ್ಯಕ್ರಮದ ಬಗ್ಗೆ ವಿವರಣೆ ನೀಡಿದ್ದಾರೆ.