ಮತ್ತೊಬ್ಬ ನಿವೃತ್ತ ನ್ಯಾಯಾಧೀಶರ ವಿರುದ್ಧ ಲೈಂಗಿಕ ಕಿರುಕುಳ ಆರೋಪ
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಎ.ಕೆ ಗಂಗೂಲಿ ನಂತರ ಈಗ ಮತ್ತೊಬ್ಬ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರ...
ನವದೆಹಲಿ: ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಎ.ಕೆ ಗಂಗೂಲಿ ನಂತರ ಈಗ ಮತ್ತೊಬ್ಬ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ.
2011ರಲ್ಲಿ ತರಬೇತಿ ನಿರತ ಕಾನೂನು ವಿದ್ಯಾರ್ಥಿನಿಗೆ ನಿವೃತ್ತ ನ್ಯಾಯಾಧೀಶ ಸ್ವತಂತ್ರ ಕುಮಾರ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆಂದು ವಿದ್ಯಾರ್ಥಿನಿ ಆರೋಪ ಮಾಡಿರುವುದಾಗಿ ಪ್ರಮುಖ ಸುದ್ದಿ ವಾಹಿನಿಯೊಂದು ಶುಕ್ರವಾರ ವರದಿ ಮಾಡಿದೆ.
ಕೊಲ್ಕತಾದಲ್ಲಿರುವ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿನಿ, 2011ರಲ್ಲಿ ಸ್ವತಂತ್ರ ಕುಮಾರ್ ಬಳಿ ಪ್ರಾಯೋಗಿಕ ತರಬೇತಿ ಪಡೆಯುತ್ತಿದ್ದ ವೇಳೆ ತನಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿದ್ದಾಳೆ. ಲೈಂಗಿಕ ಕಿರುಕುಳದಿಂದ ಬೇಸತ್ತ ವಿದ್ಯಾರ್ಥಿನಿ ಪ್ರಾಯೋಗಿಕ ತರಬೇತಿಯನ್ನು ಅರ್ಧಕ್ಕೆ ಬಿಟ್ಟು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ವಿದ್ಯಾರ್ಥಿನಿ ಸುಪ್ರೀಂ ಕೋರ್ಟ್ನಲ್ಲಿ ದೂರು ದಾಖಲಿಸಿದ್ದು, ಸ್ವತಂತ್ರ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾಳೆ.