ಜನತಾ ದರ್ಬಾರ್ ಸಹವಾಸವೇ ಬೇಡವೆಂದ ಕೇಜ್ರಿವಾಲ್
ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಲೆಂದೇ ಹಮ್ಮಿಕೊಂಡಿದ್ದ ಆಮ್ ಆದ್ಮಿ ಪಕ್ಷದ ಜನತಾ ದರ್ಬಾರ್ ಅರ್ಧದಲ್ಲೇ ನಿಂತ ಬೆನ್ನಲ್ಲೇ...
ನವದೆಹಲಿ: ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಲೆಂದೇ ಹಮ್ಮಿಕೊಂಡಿದ್ದ ಆಮ್ ಆದ್ಮಿ ಪಕ್ಷದ ಜನತಾ ದರ್ಬಾರ್ ಅರ್ಧದಲ್ಲೇ ನಿಂತ ಬೆನ್ನಲ್ಲೇ, ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇನ್ನು ಮುಂದೆ ಜನತಾ ದರ್ಬಾರ್ ನಡೆಸುವುದಿಲ್ಲ ಎಂದು ಸೋಮವಾರ ಹೇಳಿದ್ದಾರೆ.
ಸಾರ್ವಜನಿಕರ ಅಹವಾಲು ಸ್ವೀಕರಿಸಲೆಂದೆ ಹಮ್ಮಿಕೊಂಡಿದ್ದ ಜನತಾ ದರ್ಬಾರ್‌ರನ್ನು ಇನ್ನು ಮುಂದೆ ನಡೆಸಲಾಗುವುದಿಲ್ಲ. ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದು ಎಂದು ಎಎಪಿ ಸರ್ಕಾರ ಇಂದು ಹೇಳಿದೆ.
ಆನ್‌ಲೈನ್ ಮುಖಾಂತರ ಅಥವಾ ಸಹಾಯವಾಣಿ ಮುಖಾಂತರ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಬೇಕೆಂದು ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದಾರೆ. ಯಾರಾದರು ಸಿಎಂ ಅವರನ್ನು ಭೇಟಿ ಮಾಡಬೇಕೆಂದಿದ್ದರೇ, ವಾರದಲ್ಲಿ ಒಂದು ಬಾರಿ ಸಿಎಂ ಅವರನ್ನು ಭೇಟಿ ಮಾಡಬಹುದಾಗಿದೆ ಎಂದು ಎಎಪಿ ತಿಳಿಸಿದೆ.
ಸಾರ್ವಜನಿಕರ ಸಮಸ್ಯೆಗೆ ಸ್ಪಂಧಿಸಲೆಂದೇ ಪ್ರತಿ ಶನಿವಾರ ಜನತಾ ದರ್ಬಾರ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಿತ್ತು. ಕಳೆದ ಶನಿವಾರ ಮೊದಲೆ ಬಾರಿಗೆ ಜನತಾ ದರ್ಬಾರ್‌ಗೆ ಚಾಲೆನೆ ನೀಡಲಾಯಿತಾದರು, ಅರ್ಧದಲ್ಲಿ ಸ್ಥಗಿತಗೊಳಿಸಲಾಗಿತ್ತು.
ಯಾವುದೇ ಸೂಕ್ತ ಯೋಜನೆ, ವ್ಯವಸ್ಥೆ, ಬಂದೋಬಸ್ತ್ ಇಲ್ಲದೇ ನಡೆಸಿದ ದರ್ಬಾರ್ ಅಕ್ಷರಶಃ ಸಂತೆಯಾಗಿ ಮಾರ್ಪಾಡಾಯಿತು. ಈ ಅಸ್ತವ್ಯಸ್ತತೆಗೆ ಗಲಿಬಿಗೊಂಡ ಕೇಜ್ರಿವಾಲ್ ಅರ್ಧದಲ್ಲೇ ಅಲ್ಲಿಂದ ಎದ್ದುಹೋಗಬೇಕಾಯಿತು. ಇದರಿಂದ ಅಹವಾಲು ತಂದಿದ್ದ ಜನರಿಗೆ ನಿರಾಸೆಯಾಯಿತು.