ಬೆಂಗಳೂರಿಗೆ ಬರುತ್ತಿಲ್ಲ ಬೆನ್ನಿ ಹಿನ್
ಜನವರಿ 15ಕ್ಕೆ ಬೆಂಗಳೂರಿಗೆ ಆಗಮಿಸಬೇಕಿದ್ದ ಅಮೆರಿಕದ ಕ್ರೈಸ್ತ ಮತ ಪ್ರಚಾರಕ ಬೆನ್ನಿ ಹಿನ್ ತೀವ್ರ ವಿರೋಧದ ಹಿನ್ನೆಲೆಯಲ್ಲಿ ತಮ್ಮ ಬೆಂಗಳೂರು ಕಾರ್ಯಕ್ರಮವನ್ನು ರದ್ದು...
ಬೆಂಗಳೂರು: ಜನವರಿ 15ಕ್ಕೆ ಬೆಂಗಳೂರಿಗೆ ಆಗಮಿಸಬೇಕಿದ್ದ ಅಮೆರಿಕದ ಕ್ರೈಸ್ತ ಮತ ಪ್ರಚಾರಕ ಬೆನ್ನಿ ಹಿನ್ ತೀವ್ರ ವಿರೋಧದ ಹಿನ್ನೆಲೆಯಲ್ಲಿ ತಮ್ಮ ಬೆಂಗಳೂರು ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ.
ಜ.15ರಿಂದ 19ರ ವರೆಗೆ ಬೆಂಗಳೂರಿನ ಜಕ್ಕೂರಿನಲ್ಲಿ ನಿಗದಿಯಾಗಿದ್ದ ಬೆನ್ನಿ ಹಿನ್ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಬೆನ್ನಿ ಹಿನ್ ವಿರುದ್ಧ ಹಲವು ಹಿಂದೂಪರ ಸಂಘಟನೆಗಳು ಬೀದಿಗಳಿದು ಉಗ್ರ ಪ್ರತಿಭಟನೆ ನಡೆಸಿದ್ದವು. ಪ್ರತಿಭಟನೆಗೆ ಬೆದರಿದ ಬೆನ್ನಿ ಹಿನ್ ಕಡೆಗೂ ತಮ್ಮ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ.
ಬೆನ್ನಿಹಿನ್ ರೋಗಗಳನ್ನು ಗುಣಪಡಿಸುವ ನಾಟಕವಾಡಿ, ಜನರನ್ನು ಕ್ರೈಸ್ತ ಮತಕ್ಕೆ ಮತಾಂತರವಾಗುವುದಕ್ಕೆ ಪ್ರಚೋದನೆ ನೀಡುತ್ತಾರೆ ಎಂದು ಹಿಂದೂಪರ ಸಂಘಟನೆಗಳು ಆರೋಪಿಸಿವೆ.
2005 ರಲ್ಲಿ ಧರ್ಮಸಿಂಗ್ ಸರ್ಕಾರ ಕಾನೂನನ್ನು ಗಾಳಿಗೆ ತೂರಿ ಬೆನ್ನಿಹಿನ್ಗೆ ಅವಕಾಶ ಕಲ್ಪಿಸಿಕೊಟ್ಟಿತ್ತು. ಆ ಸಂದರ್ಭದಲ್ಲಿ ಆತನ ವಿರುದ್ಧ ಉಚ್ಚನ್ಯಾಯಲಯದಲ್ಲಿ 5 ಪ್ರಕರಣಗಳು ದಾಖಲಾಗಿದ್ದವು. ಅಷ್ಟೇ ಅಲ್ಲದೆ ಸಾರ್ವಜನಿಕರ ಆಕ್ರೋಶದಿಂದಾಗಿ 100 ಕ್ಕೂ ಅಧಿಕ ಬಿಎಂಟಿಸಿ ಬಸ್ಗಳು ಹಾನಿಗೊಳಗಾಗಿದ್ದವು. ಈ ಬಾರಿ ಪುನಃ ಅವಕಾಶ ನೀಡಿದ್ದು ಸಮಾಜದಲ್ಲಿ ಶಾಂತಿಯನ್ನು ಕೆಡಿಸುವ ಪ್ರಯತ್ನವಾಗಿದೆ ಎಂದು ಹಲವು ಸಂಘಟನೆಗಳು ಆರೋಪಿಸದ್ದವು.