ನ್ಯಾಯಾಧೀಶರೆದುರು ಶಶಿತರೂರ್ ಹೇಳಿಕೆ ದಾಖಲು
ಸುನಂದಾ ಪುಷ್ಕರ್ ಅವರ ಸಾವಿಗೆ ಸಂಬಂಧಿಸಿದಂತೆ ಉಪವಿಭಾಗೀಯ ನ್ಯಾಯಾಧೀಶರ ಎದುರು ಕೇಂದ್ರ ಸಚಿವ ಶಶಿತರೂರ್ ಅವರ...
ನವದೆಹಲಿ: ಸುನಂದಾ ಪುಷ್ಕರ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಉಪವಿಭಾಗೀಯ ನ್ಯಾಯಾಧೀಶರ ಎದುರು ಕೇಂದ್ರ ಸಚಿವ ಶಶಿತರೂರ್ ಅವರ ಹೇಳಿಕೆಯನ್ನು ಭಾನುವಾರ ತನಿಖಾಧಿಕಾರಿಗಳು ದಾಖಲಿಸಿಕೊಂಡಿದ್ದಾರೆ.
ನೈಋತ್ಯ ದೆಹಲಿ ಉಪವಿಭಾಗೀಯ ನ್ಯಾಯಾಧೀಶರಾದ ಅಲೋಕ್ ಶರ್ಮಾ ಅವರ ಕಚೇರಿಯಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚಿನ ಕಾಲ ನಡೆದ ವಿಚಾರಣೆಯಲ್ಲಿ ಶಶಿತರೂರ್ ಅವರು, ಸುನಂದಾ ಸಾವಿಗೂ ಮುನ್ನ ನಡೆದ ಘಟನಾವಳಿಗಳ ಕುರಿತಾದ ಹೇಳಿಕೆಯನ್ನು ತನಿಖಾಧಿಕಾರಿಗಳು ದಾಖಲಿಸಿಕೊಂಡಿದ್ದಾರೆ.
ನ್ಯಾಯಾಧೀಶರ ಎದುರು ಹೇಳಿಕೆ ನೀಡಿದ ಬಳಿಕ, ಮಾಧ್ಯಮದವರು ಕೇಳಿದ ಯಾವುದೇ ಪ್ರಶ್ನೆಗಳಿಗೆ ಶಶಿತರೂರ್ ಅವರು ಉತ್ತರಿಸದೆ ಮೌನವಹಿಸಿದ್ದರು.
ನವದೆಹಲಿಯ ಲೀಲಾ ಹೊಟೇಲ್ನಲ್ಲಿ ಶುಕ್ರವಾರ ರಾತ್ರಿ 52 ವರ್ಷದ ಸುನಂದಾ ಪುಷ್ಕರ್ ಅವರ ಮೃತದೇಹ ಪತ್ತೆಯಾಗಿತ್ತು. ಸುನಂದಾ ಅವರ ಸಾವು ಅಸಹಜ ಸಾವಾಗಿರುವುದರಿಂದ ಪ್ರಕರಣವನ್ನು ತನಿಖೆ ಮಾಡುತ್ತಿರುವ ಅಧಿಕಾರಿಗಳು ಪತಿ ಶಶಿತರೂರ್ ಅವರ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ.