ಭ್ರಷ್ಟ ಪೊಲೀಸರ ವಿರುದ್ಧ ನ್ಯಾಯಾಂಗ ತನಿಖೆ: ಶಿಂಧೆ
ಐವರು ಪೊಲೀಸ್ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇವರನ್ನು ಅಮಾನತ್ತುಗೊಳಿಸುವಂತೆ ಆಗ್ರಹಿಸಿ ದೆಹಲಿ ...
ನವದೆಹಲಿ: ಐವರು ಪೊಲೀಸ್ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇವರನ್ನು ಅಮಾನತ್ತುಗೊಳಿಸುವಂತೆ ಆಗ್ರಹಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಧರಣಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಐವರು ಪೊಲೀಸರ ವಿರುದ್ಧ ದೆಹಲಿ ಉಪ ರಾಜ್ಯಪಾಲರು ನ್ಯಾಯಾಂಗ ತನಿಖೆಗೆ ಆದೇಶಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ ಅವರು ಸೋಮವಾರ ತಿಳಿಸಿದ್ದಾರೆ.
ಭ್ರಷ್ಟ ಪೊಲೀಸರನ್ನು ಅಮಾನತ್ತು ಮಾಡುವಂತೆ ಆಗ್ರಹಿಸಿ ಅರವಿಂದ್ ಕೇಜ್ರಿವಾಲ್ ಅವರು ರೈಲ್ ಭವನ್ ಹತ್ತಿರ ಧರಣಿ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಭ್ರಷ್ಟ ಪೊಲೀಸರ ವಿರುದ್ಧ ಈಗಾಗಲೇ ನ್ಯಾಯಾಂಗ ತನಿಖೆ ಉಪರಾಜ್ಯಪಾಲ ನಜೀಬ್ ಜಂಗ್ ಆದೇಶಿಸಿದ್ದು, ಭ್ರಷ್ಟರ ವಿರುದ್ಧ ಉಪರಾಜ್ಯಪಾಲರು ದಿಟ್ಟ ಹೆಜ್ಜೆ ಹಿಟ್ಟಿದ್ದಾರೆ ಎಂದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟ ಪೊಲೀಸರ ವಿರುದ್ಧ ಉಪರಾಜ್ಯಪಾಲರು ತನಿಖೆಗೆ ಆದೇಶಿಸಿದ್ದು, ಐವರು ಪೊಲೀಸರ ವಿರುದ್ದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ತನಿಖೆ ನಡೆಸಲಿದೆ. ಹೀಗಾಗಿ ಧರಣಿ ನಿರತ ಕೇಜ್ರಿವಾಲ್ ಧರಣಿ ಕೈಬಿಡುವಂತೆ ಶಿಂಧೆ ತಿಳಿಸಿದ್ದಾರೆ.
ಈ ವೇಳೆ, ದೆಹಲಿ ಪೊಲೀಸರನ್ನು ಕೇಂದ್ರ ಸರ್ಕಾರದ ಸುಪರ್ಧಿಯಿಂದ ಮುಕ್ತಗೊಳಿಸಿ, ಎಎಪಿ ಸರ್ಕಾರದ ಅಧಿನದಡಿ ತರುವ ಬೇಡಿಕೆಯನ್ನು ತಿರಸ್ಕರಿಸಿದ ಶಿಂಧೆ ಅವರು, ಕೇಜ್ರಿವಾಲ್‌ರ ಈ ಬೇಡಿಕೆಯನ್ನು ಪೂರೈಸಲಾಗದು ಎಂದರು.
ಕೇಜ್ರಿವಾಲ್‌ರ ಧರಣಿಗೆ ಪಕ್ಷದ ಇತರ ಸಹೋದ್ಯೋಗಿಗಳು ಸಾಥ್ ನೀಡಿದ್ದಾರೆ. ಅಲ್ಲದೆ ಎಎಪಿ ಪಕ್ಷದ ಅಪಾರ ಕಾರ್ಯಕರ್ತರು ಸ್ಥಳದಲ್ಲಿ ಬಿಡುಬಿಟ್ಟಿದ್ದು, 'ಹಿನ್ಖಿಲಾಬ್ ಜಿಂದಾಬಾದ್' ಎಂಬ ಘೋಷ ವಾಕ್ಯಗಳನ್ನು ಕೂಗುತ್ತಿದ್ದಾರೆ. ಹೀಗಾಗಿ ರೈಲ್ ಭವನ್ ಹತ್ತಿರ ಪ್ರತಿಭಟನೆಯ ಕಾವು ಜೋರಾಗಿದೆ.