ಸುನಂದಾ ಪ್ರಕರಣ: ತನಿಖೆಯಿಂದ ಶಶಿತರೂರ್‌ಗೆ ಕ್ಲೀನ್‌ಚಿಟ್?
ದೆಹಲಿಯ ಲೀಲಾ ಹೊಟೇಲ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಕೇಂದ್ರ ಮಾನವ ಸಂಪನ್ಮೂಲ ರಾಜ್ಯ ಸಚಿವ ಶಶಿತರೂರ್ ಪತ್ನಿ ಸುನಂದಾ ಪುಷ್ಕರ್...
ನವದೆಹಲಿ: ದೆಹಲಿಯ ಲೀಲಾ ಹೊಟೇಲ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಕೇಂದ್ರ ಮಾನವ ಸಂಪನ್ಮೂಲ ರಾಜ್ಯ ಸಚಿವ ಶಶಿತರೂರ್ ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣದಿಂದ ಶಶಿತರೂರ್‌ಗೆ ಕ್ಲೀನ್‌ಚಿಟ್ ಸಿಗುವ ಸಾಧ್ಯತೆಯಿದೆ ಎಂದು ಮಂಗಳವಾರ ತಿಳಿದುಬಂದಿದೆ.
ನಿಗೂಢವಾಗಿ ಸಾವನ್ನಪ್ಪಿದ್ದ ಸುನಂದಾ ಪುಷ್ಕರ್ ಅವರ ಮರಣೋತ್ತರ ಪರೀಕ್ಷಾ ನಿನ್ನೆ ಏಮ್ಸ್ ವೈದ್ಯರು ಬಹಿರಂಗಪಡಿಸಿದ್ದರು. ಅಲ್ಲದೆ ವರದಿಯಲ್ಲಿ ಸುನಂದಾ ಅವರು ಒತ್ತಡ ನಿವಾರಣೆಗಾಗಿ ಸೇವಿಸುವ ಅಲ್ಪ್ರಾಕ್ಸ್ ಮಾತ್ರೆಯನ್ನು ಅತಿಯಾಗಿ ಸೇವನೆ ಮಾಡಿರುವುದರಿಂದ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರು.
ಏಮ್ಸ್ ವೈದ್ಯರು ನಿನ್ನೆ ಉಪವಿಭಾಗೀಯ ನ್ಯಾಯಾಧೀಶರಿಗೆ ಸುನಂದಾ ಮರಣೋತ್ತರ ಪರೀಕ್ಷಾ ವರದಿಯನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನೋಡಿಕೊಳ್ಳುತ್ತಿರುವ ನ್ಯಾಯಾಧೀಶರಾದ ಅಲೋಕ್ ಶರ್ಮಾ ಅವರು ಇಂದು ವರದಿಯನ್ನು ಪರಿಶೀಲಿಸಲಿದ್ದು, ಸುನಂದಾ ಸಾವು ಅಲ್ಪ್ರಾಕ್ಸ್ ಮಾತ್ರೆ ಸೇವನೆಯಿಂದ ಆಗಿರುವುದರಿಂದ ಸುನಂದಾ ಪತಿ ಶಶಿತರೂರ್ ಅವರನ್ನು ತನಿಖೆಯಿಂದ ದೂರವಿಡಲು ನಿರ್ಧರಿಸುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸುನಂದಾ ನಿಗೂಢ ಸಾವಿನಿಂದಾಗಿ ಪತಿ ಶಶಿತರೂರ್ ಅವರ ಮೇಲೆ ಅನುಮಾನಗಳು ಶುರುವಾಗಿದ್ದವು. ಅಲ್ಲದೆ ಪ್ರಕರಣದಲ್ಲಿ ಶಶಿತರೂರ್ ಅವರ ಕೈವಾಡ ಇರುವುದಾಗಿ ಶಂಕಿಸಲಾಗಿತ್ತು. ನಿನ್ನೆ ವೈದ್ಯರು ನೀಡಿರುವ ವರದಿಯಿಂದ ಸುನಂದಾ ಸಾವಿನ ನಿಗೂಢ ಬಯಲಾಗಿದ್ದು, ಪ್ರಕರಣದಿಂದ ಶಶಿತರೂರ್ ನಿರಾಳರಾಗಿದ್ದಾರೆ.