'ಪ್ರೇಮನಗರ'ಕ್ಕೆ 'ದೇವದಾಸು' ಪಯಣ
ತೆಲುಗು ಕಲಾ ಮಾತೆಯ ಸುಪುತ್ರ ಕಲಾ ಸಾಮ್ರಾಟ್, ದಾದಾ ಸಾಹೇಬ್ ಫಾಲ್ಕೆ...
ಹೈದರಾಬಾದ್: ತೆಲುಗು ಕಲಾ ಮಾತೆಯ ಸುಪುತ್ರ 'ಕಲಾ ಸಾಮ್ರಾಟ್', 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ ಪುರಸ್ಕೃತ ಅಕ್ಕಿನೇನಿ ನಾಗೇಶ್ವರರಾವುರವರು ಇಹಲೋಕ ತ್ಯಜಿಸಿದ್ದಾರೆ. ದಶಕಗಳ ಕಾಲ ಚಿತ್ರರಸಿಕರ ಮನ ತಣಿಸಿದ ಅದ್ಭುತ, ಧೀಮಂತ ಚೇತನವೊಂದು ಆರಿಹೋಗಿದೆ.
ಇತ್ತೀಚೆಗೆ ಕರುಳು ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು, ಅಭಿಮಾನಿಗಳ ಪ್ರೀತಿ, ಹಾರೈಕೆ, ಆಶೀರ್ವಾದಗಳಿಂದ ಇನ್ನಷ್ಟು ವರ್ಷಗಳ ಆಯುಷ್ಯವಿದ್ದರೆ ಹೀಗೆ ಬದುಕುವ ಇರಾದೆ ವ್ಯಕ್ತಪಡಿಸಿದ್ದರು. ಮಂಗಳವಾರ ರಾತ್ರಿ 2.45ರ ಸಮಯದಲ್ಲಿ ಉಸಿರಾಟಕ್ಕೆ ತೊಂದರೆ ಅನುಭವಿಸುತ್ತಿದ್ದ ನಾಗೇಶ್ವರರಾವುರವರನ್ನು, ಬಂಜಾರ ಹಿಲ್ಸ್ನಲ್ಲಿರುವ ಕೇರ್ ಆಸ್ಪತ್ರೆಗೆ ದಾಖಲಿಸಲಾಯಿತು. ಆಕ್ಸಿಜನ ವ್ಯವಸ್ಥೆಯನ್ನು ಮಾಡಿದರೂ ಕೂಡ, ಹತ್ತು ನಿಮಿಷಗಳಲ್ಲಿ ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳ ತಿಳಿಸಿವೆ. ಅವರ ಮಗಳು ನಾಗಸುಶೀಲ ಹಾಗೂ ಮೊಮ್ಮಗ ಸುಶಾಂತ ಆ ಸಮಯದಲ್ಲಿ ಜೊತೆಯಿದ್ದರು ಎನ್ನಲಾಗಿದೆ.
91 ವರ್ಷದ ಚಿರ ಯೌವ್ವನಿಗ ನಾಗೇಶ್ವರರಾವುರವರು ಕರುಳು ಕ್ಯಾನ್ಯರ್ಗೆ ಚಿಕಿತ್ಸೆಯನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಪಡೆಯುತ್ತಿದ್ದರು. ಶಸ್ತ್ರ ಚಿಕಿತ್ಸೆಯನ್ನು ಪೂರೈಸಿ ಕೀಮೋಥೆರಪಿಯನ್ನು ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ. ಅವರ ನಿಧನದ ವಾರ್ತೆಯನ್ನು ಕೇಳಿದ ಜನರು, ಚಿತ್ರರಂಗದ ಗಣ್ಯರು, ಮತ್ತಿತರರು ತಂಡೋಪ ತಂಡವಾಗಿ ಆಸ್ಪತ್ರೆಗೆ ಧಾವಿಸಿದ್ದಾರೆ.
ಅಕ್ಕಿನೇನಿ ಜೀವನದ ಹೆಜ್ಜೆಗುರುತು:
*ಕೃಷ್ಣಾ ಜಿಲ್ಲೆಯ ವೆಂಕಟರಾಮಪುರದಲ್ಲಿ 1924 ಸೆಪ್ಟೆಂಬರ್ 20 ರಂದು ಜನಿಸಿದ್ದಾರೆ.
*ತಂದೆ ವೆಂಕಟರತ್ನ ಮತ್ತು ತಾಯಿ ಪುನ್ನಮ್ಮ
*ನಾಲ್ಕನೇ ತರಗತಿಯವರೆಗೆ ಓದಿದ್ದಾರೆ.
*ರಾಘವಾಪುರದಲ್ಲಿ ನಡೆದ ನಾಟಕದಲ್ಲಿ ಚಂದ್ರಮತಿಯಾಗಿ ಹೆಣ್ಣುವೇಷ ಧರಿಸಿ, ರಂಗ ಪ್ರವೇಶ.
*ಕೆಲವೇ ದಿನಗಳಲ್ಲಿ ಎಕ್ಸೆಲ್ಷಿಯರ್ ನಾಟಕ ಕಂಪನಿಯಲ್ಲಿ ಕೆಲಸ ಗಿಟ್ಟಿಸಿದರು.
*ಘಂಟಸಾಲ ಬಲರಾಮಯ್ಯನವರ ಮೂಲಕ ಬೆಳ್ಳಿತೆರೆಗೆ ಪರಿಚಯ
*1944 ಮೇ 8 ರಂದು ಮದ್ರಾಸಿನಲ್ಲಿ ಸಿನಿಮಾ ನಟನಾಗಿ ಅಕ್ಕಿನೇನಿಯವರ ಸಿನಿದಶೆ ಪ್ರಾರಂಭ
*'ತಲ್ಲಿಪ್ರೇಮ' ಎನ್ನುವ ಚಿತ್ರದಲ್ಲಿ ಹುಡುಗನಾಗಿ ಮೊದಲ ವೇಷ
*17ನೇ ವಯಸ್ಸಿನಲ್ಲಿ 'ಧರ್ಮಪತ್ನಿ' ಚಿತ್ರದ ಮೂಲಕ ತಾರಾ ಜೀವನ ಪ್ರಾರಂಭ
*'ಕೀಲುಗುರ್ರಂ' ಖ್ಯಾತಿಯ ಬಾಲರಾಜುರವರ ಚಿತ್ರಗಳ ಮೂಲಕ ಜಾನಪದ ಕಥಾ ನಾಯಕನಾಗಿ ಛಾಪನ್ನು ಮೂಡಿಸಿದರು.
*ಸಾಂಸಾರಿಕ ಚಿತ್ರಗಳಿಗೆ ಸಂಸಾರಂ ಚಿತ್ರದ ಮೂಲಕ ಪ್ರವೇಶ ಮಾಡಿದರು.
*ಕೆಲವೇ ದಿನಗಳಲ್ಲಿ ತನ್ನ ಚಿತ್ರಗಳಿಗೆ ತಾವೇ ಗೀತೆಗಳನ್ನು ಹಾಡಲು ಮೊದಲು ಮಾಡಿದರು.
*ಸಿನಿ ಜೀವನದ ಅತಿ ದೊಡ್ಡ ಮೈಲಿಗಲ್ಲು ದೇವದಾಸು ಚಿತ್ರ
*1953 ಜೂನ್ 26ರಂದು ದೇವದಾಸು ಚಿತ್ರ ತೆರೆ ಕಂಡಿತ್ತು
*ಅಕ್ಕಿನೇನಿ ಮತ್ತು ಎನ್.ಟಿ.ಆರ್ ಅವರು ಜತೆಯಾಗಿ ನಟಿಸಿದ ಮೊದಲ ಚಿತ್ರ ಪಲ್ಲೆಟೂರಿ ಪಿಲ್ಲ
*ಸಂಸಾರಂ ಮಿಸ್ಸಮ್ಮ ತೆನಾಲಿ ರಾಮಕೃಷ್ಣ ಇವರಿಬ್ಬರ ಜೋಡಿಯ ಕೆಲವು ಮಹತ್ವದ ಚಿತ್ರಗಳು
*ಸುಡಿ ಗುಂಡಾಲು ಚಿತ್ರಕ್ಕೆ ಮೊದಲ ಫಿಲಂಫೇರ್ ಪ್ರಶಸ್ತಿ
ಹೆಮ್ಮೆಯ ಗರಿಗಳು:
1957 - ನಟಸಾಮ್ರಾಟ್
1968 - ಪದ್ಮಶ್ರೀ
1977 - ಕಳಾ ಪ್ರಪೂರ್ಣ
1989 - ರಘುಪತಿ ವೆಂಕಯ್ಯ ಪ್ರಶಸ್ತಿ
1991 - ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ
1993 - ಗೌರವ ಡಾಕ್ಟರೇಟ್
1995 - ಅನ್ನಾ ಅವಾರ್ಡ್(ತಮಿಳುನಾಡಿನಿಂದ)
1996 - ಎನ್‌ಟಿಆರ್ ಜಾತೀಯ ಫಿಲಂ ಅವಾರ್ಡ್
1998 - ಪದ್ಮಭೂಷಣ
2011 - ಪದ್ಮವಿಭೂಷಣ
2012ರಲ್ಲಿ ಜೀವಮಾನ ಸಾಧನೆಗಾಗಿ ಪ್ರಶಸ್ತಿ(ತೆಲುಗು ಅಸೋಸಿಯೋಷನ್ ಆಫ್ ನಾರ್ತ್ ಅಮೆರಿಕಾ ವತಿಯಿಂದ )
-ಎಸ್. ನಾಗಶ್ರೀ