ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬೇಂದ್ರೆ 'ಪಾತರಗಿತ್ತಿ' ಹಾರಿಹೋದ ಕ್ಷಣ: ಫಲ್ಗುಣ

ಯಶವಂತ ಹಳಿಬಂಡಿ ಹೆಸರು ಕೇಳುತ್ತಿದ್ದಂತೆ ನೆನಪಾಗುವುದು ಸುಗಮ ಸಂಗೀತ...

Mainashree
Updated On : 22 Jan 2014, 5:14 am

ಅಂಬಿಕಾತನಯದತ್ತ ಕಾವ್ಯನಾಮ ಹೊಂದಿದ್ದ ಕನ್ನಡದ ವರಕವಿ ದ.ರಾ ಬೇಂದ್ರೆಯವರ ಗೀತೆಗಳನ್ನು ಹಾಡಿ ಬೇಂದ್ರೆ ಅವರ ಮೆಚ್ಚುಗೆಗೆ ಪಾತ್ರರಾದ ಯಶವಂತ ಹಳಿಬಂಡಿ ಇನ್ನಿಲ್ಲ.

ಯಶವಂತ ಹಳಿಬಂಡಿ ಹೆಸರು ಕೇಳುತ್ತಿದ್ದಂತೆ ನೆನಪಾಗುವುದು ಸುಗಮ ಸಂಗೀತ. 1950 ಮೇ25ರಂದು ಜನಿಸಿದ ಇವರು ತಮ್ಮ 10ನೇ ವಯಸ್ಸಿನಲ್ಲೇ ಸಂಗೀತ ಕ್ಷೇತ್ರಕ್ಕೆ ಹೆಜ್ಜೆ ಇಟ್ಟವರು. ಹಳಿಬಂಡಿ ಅವರ ಇಬ್ಬರು ಮಕ್ಕಳಾದ ಗಾಯಕ ಪಂಚಮ್ ಹಳಿಬಂಡಿ ಹಾಗೂ ತಬಲ ವಾದಕ ಪ್ರೀತಮ್ ಹಳಿಬಂಡಿ ಸಾಫ್ಟವೇರ್ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದಾರೆ.

ಆ ಹುಡಗನನ್ನು ಕಂಡು ಅವನ ಗಾಯನವನ್ನು ಕೊಂಡಾಡಿದ್ದ ಬೇಂದ್ರೆ, ಸಂದರ್ಶನವೊಂದರಲ್ಲಿ ಹುಡುಗ ಬಹಳ ಚೆನ್ನಾಗಿ ಹಾಡ್ತಾನೆ, ನನ್ನ ಗೀತೆಗಳನ್ನಾ ಇಷ್ಟೋಂದು ಸೊಗಸಾಗಿ ಹಾಡುವವರನ್ನು ನಾನು ಕಂಡಿಲ್ಲ. ಅದೆಂತ ಸೊಗಸು, ಭಾವಾಭಿವ್ಯಕ್ತಿ, ಲಯ, ಲಾಸ್ಯ ಎಂದಿದ್ದರು. ಆ ಹುಡುಗ ಬೇರೆ ಯಾರು ಅಲ್ಲ ಇಂದು ನಮ್ಮನಗಲಿದ ಬೇಂದ್ರೆ ಮೆಚ್ಚಿದ ಗಾಯಕ ಯಶವಂತ ಹಳಿಬಂಡಿ.

ಯಶವಂತ ಹಳಿಬಂಡಿ ಬೇಂದ್ರೆ ಕಾವ್ಯವಾಣಿ ಎಂಬ ಕಾರ್ಯಕ್ರಮ ಮಾಡುತ್ತಿದ್ದರು. ಕಳೆದ 20 ವರ್ಷಗಳಿಂದ ಜಿಲ್ಲೆ ಜಿಲ್ಲೆಗೂ ಹೋಗಿ ಬೇಂದ್ರೆ ಕಾವ್ಯವನ್ನು ಜೀವಂತ ವಾಗಿರಿಸುವಲ್ಲಿ ಯಶವಂತರ ಕೊಡುಗೆ ಅನನ್ಯ.

ಹಾಗೆ ನೋಡಿದಲ್ಲಿ ಸಿ. ಅಶ್ವತ್, ಶಿವಮೊಗ್ಗ ಸುಬ್ಬಣ್ಣ ಅವರಿಗೂ ಮುನ್ನವೇ ಸುಗಮ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದವರು ಯಶವಂತಹಳಿ ಬಂಡಿ. ಬೆಂಗಳೂರಿಗೆ ಬಂದ ನಂತರ ಇಲ್ಲಿನ ಜನರಿಗೆ ಮೊದಲು ಪರಿಚಯವಾಗಿ ನಂತರ ಸುಗಮ ಸಂಗೀತ ಕ್ಷೇತ್ರದಲ್ಲಿ ತಡವಾಗಿ ಗುರುತಿಸಿಕೊಂಡರು.

ಪ್ರಸಿದ್ಧ ಗೀತೆಗಳಾದ ಹೋಗು ಮನಸೆ, ಕುಂಬಾರಕ್ಕಿ, ಕುರುಡು ಕಾಂಚಾಣ ಕುಣಿಯುತಲಿತ್ತು ಹಾಗೂ ಪಾತರಗಿತ್ತಿ ಪಕ್ಕ ಗೀತೆಗಳು ಬಹಳ ಜನಪ್ರಿಯ.

ಪ್ರಸ್ತುತ ಚಾಮರಾಜಪೇಟೆಯಲ್ಲಿ ಸಂಗೀತ ಶಾಲೆ ನಡೆಸುತ್ತಿದ್ದರು.

ಇತ್ತೀಚೆಗಷ್ಟೇ ತಾನೆ ಅವರ ಜೊತೆ ಮಾತನಾಡಿದ್ದೇ, ಶಿಶುನಾಳ ಶರೀಫ ಸಂಗೀತ ಪ್ರಶಸ್ತಿ ಸಮಿತಿ ಅಧ್ಯಕ್ಷರಾಗಿದ್ದರು. ಪ್ರಶಸ್ತಿ ಬರಬೇಕಾಗಿದ್ದು ನಿಮಗೆ ಆದರೆ ನೀವೇ ಅಧ್ಯಕ್ಷರಾಗಿದ್ದೀರಿ ಎಂದು ಕೇಳಿದ್ದೆ. ಸುಗಮ ಸಂಗೀತದ ಯಾವುದೇ ಕಾರ್ಯಕ್ರಮಕ್ಕೆ ಕರೆದಾಗಲು ಹೃತ್ಪೂರ್ವಕವಾಗಿ ಬಂದು ಭಾಗವಹಿಸುತ್ತಿದ್ದರು. ಜನವರಿ 27ಕ್ಕೆ ಹೊಂಬಾಳೆ ತಂಡದಿಂದ ಜಿ.ಎಸ್ ಶಿವರುದ್ರಪ್ಪ ಅವರ ಗೀತನಮನ ಕಾರ್ಯಕ್ರಮಕ್ಕೆ ಯಶವಂತ ಹಳಿಬಂಡಿ ಅವರು ಆಗಮಿಸಬೇಕಾಗಿತ್ತು. ಸುಗಮ ಸಂಗೀತ ಕ್ಷೇತ್ರ ಅವರಿಲ್ಲದೇ ತೀರ ಬಡವಾಗಿದೆ.

-ಹೆಚ್.ಫಲ್ಗುಣ
ಗಾಯಕ, ಸಂಗೀತ ನಿರ್ದೇಶಕ ಸಂಘಟಕ

===

ಬೇಂದ್ರೆ ಮೆಚ್ಚಿದ ಗಾಯಕನ ಬಗ್ಗೆ ಗಣ್ಯರ ಅಭಿಪ್ರಾಯ ಹಾಗೂ ಸಂತಾಪ

ಬೇಂದ್ರೆ ಅವರ ಮುಂದೆ ಹಾಡುವಂತಹ ಸೌಭಾಗ್ಯ ಯಶವಂತ್ ಹಳಿಬಂಡಿಯವರದಾಗಿತ್ತು. ಕುರುಡು ಕಾಂಚಾಣ, ಕಾನ್ ಕಾನ್ ಒತ್ತಿ ಒತ್ತಿ ಎಂಬ ಹಾಡುಗಳು ನನಗೆ ಬಹಳ ಇಷ್ಟವಾದ ಗೀತೆಗಳು. ಅವರು ತಮ್ಮದೇ ಆದ ವಿಶಿಷ್ಟ ಶೈಲಿ ಹೊಂದಿದ್ದರು. ಹಳಿಬಂಡಿ ಅವರ ಧ್ವನಿ ವಿಭಿನ್ನವಾಗಿತ್ತು. ಕರ್ನಾಟಕದಲ್ಲಿ ಊರು ಊರು ಸುತ್ತಿ ಸಾಕಷ್ಟು ಶಿಷ್ಯರನ್ನು ತಯಾರು ಮಾಡಿದ ಹೆಗ್ಗಳಿಗೆ ಅವರದು. ಹಳಿಬಂಡಿ ನಿಧನದಿಂದ ನೋವುಂಟಾಗಿದೆ.

-ಎಂ.ಡಿ ಪಲ್ಲವಿ
ಗಾಯಕಿ

=====
ಯಶವಂತ ಹಳಿಬಂಡಿ ಸ್ನೇಹ ಜೀವಿ. ಹಳಿಬಂಡಿ ಮತ್ತು ನನ್ನದು 32 ವರ್ಷಗಳ ಸ್ನೇಹ. ಅವರೊಟ್ಟಿಗೆ ಅನೇಕ ಗೀತೆಗಳನ್ನು ಹಾಡಿದ್ದು, ಹಂಪಿ ಉತ್ಸವ, ಬೀದರ್ ಉತ್ಸವಗಳಲ್ಲಿ ಭಾಗವಹಿಸಿ ಒಟ್ಟಿಗೆ ಹಾಡಿದ್ದೇವು. ಹಳಿಬಂಡಿ ಅವರ ಸಂಗೀತ ನಿರ್ದೇಶನದ ಬೇಂದ್ರೆ ಅವರ 'ಹುದುಗಲಾರದ ದುಃಖ ಹುಗಿದಿರಿಸಿ ಎದೆಯಲಿ ನಸು ನಗುತ ಬಂದೆ ಇದಿರು' ಬಹಳ ಇಷ್ಟವಾದ ಗೀತೆ. ಈ ಗೀತೆ ಬಹಳ ಜನಪ್ರಿಯವಾಗಿತ್ತು.

ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾದರೆ ತಾವು ತೊಡುವಂತಹ ವಸ್ತ್ರದ ಬಗ್ಗೆ ಹೆಚ್ಚು ಆಸಕ್ತಿ. ಕಾರ್ಯಕ್ರಮದ ತಕ್ಕಾಗಿ ಅವರು ವಸ್ತ್ರ ತೊಡುತ್ತಿದ್ದರು. ಇದಕ್ಕಾಗಿ ತಾವೇ ವಿನ್ಯಾಸವು ಮಾಡುತ್ತಿದ್ದರು. ಹಾಗಾಗಿ ನಾನು ಅವರನ್ನು ಹಿರೋ ಎಂದು ಕರೆಯುತ್ತಿದೆ. 150ರಿಂದ 200ಕ್ಕೂ ಹೆಚ್ಚು ಸುಗಮ ಸಂಗೀತಗಳ ಕಾರ್ಯಗಾರ ಮಾಡಿ ಯುವಪೀಳಿಗೆ ಅನುಕೂಲವಾಗಲಿ ಎಂದು ದುಡಿದ ವ್ಯಕ್ತಿ. ಸಾಂಸ್ಕೃತಿಕ ಪರಂಪರೆಯ ಬಗ್ಗೆ ಅತ್ಯಂತ ಪ್ರೀತಿ ಹೊಂದಿದ್ದ ವ್ಯಕ್ತಿ. ಗಲ್ಫ್ ದೇಶದಲ್ಲು ಗೀತೆಗಳನ್ನು ಹಾಡಿ ಜನರ ಮೆಚ್ಚುಗೆಗೆ ಭಾಜನರಾಗಿದ್ದರು.
ನಾಡು-ನುಡಿ ಕಾಳಜಿ ಇರುವಂತಹ ವ್ಯಕ್ತಿ ಅಗಲಿಕೆ ತುಂಬಾ ನೋವು ತಂದಿದೆ.

-ಪುತ್ತೂರು ನರಸಿಂಹ ನಾಯಕ್
=====

ಯಶವಂತ ಹಳಿಬಂಡಿಯವರಿಗಿದೋ ಶ್ರದ್ಧಾಂಜಲಿ

ಸುಗಮ ಸಂಗೀತ ಕ್ಷೇತ್ರದ ಮತ್ತೊಬ್ಬ ಸಂಗೀತ ಸಂಯೋಜಕ, ಗಾಯಕ ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿ ಎಂದೇ ಹೆಸರಾದ ಶ್ರೀ ಯಶವಂತ ಹಳಿಬಂಡಿಯವರು ಇಂದು ನಮ್ಮನ್ನೆಲ್ಲಾ ಬಿಟ್ಟು ಅಗಲಿದ್ದಾರೆ. ಕನ್ನಡ ಸುಗಮ ಸಂಗೀತ ಕ್ಷೇತ್ರಕ್ಕೆ ಈಗ ಮತ್ತೊಂದು ಆಘಾತ ಹಾಗೂ ನಷ್ಟ.

ಸುಗಮ ಸಂಗೀತದ ಮೇರುಗಾಯಕರಲ್ಲಿ ಒಬ್ಬರಾದ ಶ್ರೀ ಯಶವಂತ ಹಳಿಬಂಡಿ ನಲವತ್ತು ವರ್ಷಗಳಿಂದ ಸುಗಮ ಸಂಗೀತದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅವರು ವಿಶೇಷವಾದ ಗಾನಶೈಲಿ, ಧಾರವಾಡದ ಸೊಗಡು ಹಾಗೂ ಜಾನಪದ ಧಾಟಿಯ ಗಾಯನದಿಂದ ಎಲ್ಲರ ಮನ ಗೆದ್ದಿದ್ದರು. ಕನ್ನಡದ ಮೇರು ಕವಿಗಳಾದ ದ ರಾ ಬೇಂದ್ರೆ, ಸಂತ ಶಿಶುನಾಳ ಷರೀಫ ಸಾಹೇಬ, ಆನಂದಕಂದ ಹಾಗೂ ಎಲ್ಲಾ ಮೇರು ಕವಿಗಳ ಕವಿತೆಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಪಾತರಗಿತ್ತಿ ಪಕ್ಕಾ ಮತ್ತು ಬೇಂದ್ರೆ ಗೀತೆಗಳು ಇವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಜನಪ್ರಿಯ ಹಾಗೂ ಎಂದಿಗೂ ಮನದಲ್ಲೇ ಉಳಿದುಕೊಳ್ಳುವ ದ್ವನಿಮುದ್ರಿಕೆಗಳು. ಪಾತರಗಿತ್ತಿ ಪಕ್ಕಾ, ಹುದುಗಲಾರದ ದುಃಖ, ಒಲವೆಂಬ ಹೊತ್ತಿಗೆ, ಕಾಂತನ ಒತ್ತಿ ಒತ್ತಿ, ಕುಂಬಾರಕ್ಕಿ ಇಕ್ಕಿ, ಕುರುಡು ಕಾಂಚಾಣಾ, ತಂಬುಲದ ತುಟಿಯ ತೋರಿ ಹಾಗೂ ಮೊದಲಾದ ಜನಪ್ರಿಯ ಗೀತೆಗಳು ಇವರ ಕಂಠಸಿರಿಯಲ್ಲಿ ಹೊರಹೊಮ್ಮಿವೆ.

ಯಶವಂತ ಹಳಿಬಂಡಿಯವರೊ ಒಬ್ಬ ಅತ್ಯಂತ ಸರಳ ಸ್ವಭಾವದ ವ್ಯಕ್ತಿಯಾಗಿದ್ದರು ಹಾಗೂ ಅವರ ಅಪಾರ ಶಿಷ್ಯವೃಂದವನ್ನು ಬಿಟ್ಟಗಲಿದ್ದಾರೆ. ಇವರು ಯಾವಾಗ ಹಾಡುಗಳನ್ನು ಹಾಡಿದರೂ ನಗುಮೊಗದಿಂದಲೇ ಹಾಡುತ್ತಿದ್ದರೆನ್ನುವುದು ಮರೆಯಲಸಾಧ್ಯ. ಹಳಿಬಂಡಿಯವರಿಗೆ ಎಲ್ಲಾ ಮೇರು ಸುಗಮ ಸಂಗೀತದ ಗಾಯಕರು, ಸಂಗೀತ ಸಂಯೋಜಕರೊಂದಿಗೂ ಒಳ್ಳೆಯ ಒಡನಾಟವಿತ್ತು. ಇವರು ಧರ್ಮಪತ್ನಿ ಹಾಗೂ ತಮ್ಮ ಮಕ್ಕಳಾದ ಶ್ರೀ ಪಂಚಮ ಹಳಿಬಂಡಿ ಮತ್ತು ಪ್ರೀತಂ ಹಳಿಬಂಡಿಯವರನ್ನೂ ಬಿಟ್ಟಗಲಿದ್ದಾರೆ.

- ಪ್ರವೀಣ್ ಬಿವಿ & ಪ್ರದೀಪ್ ಬಿವಿ
ಸುಗಮ ಸಂಗೀತ ಗಾಯಕ
ಸೋದರರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement