ಲೋಕಸಭೆಯಲ್ಲಿ ಗೆದ್ದರೆ ರಾಹುಲ್ ಗಾಂಧಿಯೇ ಪ್ರಧಾನಿ: ಚಿದಂಬರಂ
ನವದೆಹಲಿ: 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದರೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯೇ ಮುಂದಿನ ಪ್ರಧಾನಿ ಎಂದು ಕೇಂದ್ರ ವಿತ್ತ ಸಚಿವ ಪಿ.ಚಿದಂಬರಂ ಅವರು ಬುಧವಾರ ಹೇಳಿದ್ದಾರೆ.
ದಾವೋಸ್ನಲ್ಲಿ ನಡೆಯುತ್ತಿರುವ ವಿಶ್ವ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 2014ರ ಲೋಕಸಭೆಯಲ್ಲಿ ಪಕ್ಷ ಗೆದ್ದು ಸರ್ಕಾರ ರಚಿಸುವಂತಾದರೆ ರಾಹುಲ್ ಗಾಂಧಿಯೇ ಪ್ರಧಾನಮಂತ್ರಿಯಾಗುತ್ತಾರೆ ಎಂದು ಹೇಳಿದರು.
ಚುನಾವಣೆಯ ಬಳಿಕ ಯಾವುದೇ ರಾಷ್ಟ್ರೀಯ ಪಕ್ಷಕ್ಕೂ ಸ್ಪಷ್ಟ ಬಹುಮತ ಬರುವ ಸಾಧ್ಯತೆ ಕಡಿಮೆ. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಸರ್ಕಾರ ರಚಿಸುವ ಅವಕಾಶ ಒದಗಿ ಬಂದರೆ ಖಂಡಿತವಾಗಿಯೂ ರಾಹುಲ್ ಪ್ರಧಾನಿಯಾಗುತ್ತಾರೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಪ್ರಸ್ತುತ ಹಣಕಾಸು ವರ್ಷದಲ್ಲಿ ಭಾರತವು ಶೇ.5 ರಷ್ಟು ಬೆಳವಣಿಗೆ ಸಾಧಿಸುವ ಸಾಧ್ಯತೆಯಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ಬೆಳವಣೆಗೆ ಶೇ. 6ರಷ್ಟು ಹೆಚ್ಚಾಗಲಿದೆ ಎಂದರು.