10 ವರ್ಷದಲ್ಲಿ ಉ-ಪ್ರದೇಶ ಅಭಿವೃದ್ಧಿ: ಮೋದಿ
ನನಗೆ 10 ವರ್ಷ ಕಾಲಾವಕಾಶ ಕೊಡಿ ಉತ್ತರ ಪ್ರದೇಶವನ್ನು ಗುಜರಾತ್ಗಿಂತ ಹೆಚ್ಚು ಅಭಿವೃದ್ಧಿ ಪಡಿಸುತ್ತೇನೆ ಎಂದು ಭಾರತೀಯ ಜನತಾ...
ಗೋರಖ್ಪುರ್/ಉತ್ತರ ಪ್ರದೇಶದ: ನನಗೆ 10 ವರ್ಷ ಕಾಲಾವಕಾಶ ಕೊಡಿ ಉತ್ತರ ಪ್ರದೇಶವನ್ನು ಗುಜರಾತ್ ಗಿಂತ ಹೆಚ್ಚು ಅಭಿವೃದ್ಧಿ ಪಡಿಸುತ್ತೇನೆ ಎಂದು ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದ್ದಾರೆ.
ಗೋರಖ್ಪುರದಲ್ಲಿ ಬಿಜೆಪಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಈಗಾಗಲೇ 2014ರ ಫಲಿತಾಂಶದ ಮುನ್ಸೂಚನೆ ಕಾಣಿಸುತ್ತಿದೆ ಎಂದರು. ಈ ವೇಳೆ, ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಮೋದಿ, ಕಾಂಗ್ರೆಸ್ ಬಡವರನ್ನು ಬಡವರಾಗಿಯೇ ಉಳಿಸಿದೆ. ಇಂದಿನ ದುಸ್ಥಿತಿಗೆ ಕಾಂಗ್ರೆಸ್ ಆಡಳಿತವೇ ಹೊಣೆ ಎಂದು ಕಿಡಿಕಾರಿದ್ದಾರೆ.
ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಬಡವರ ವಿರೋಧಿ ಕಾಂಗ್ರೆಸ್ಗೆ ನೀವು ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕು. ಕಾಂಗ್ರೆಸ್ ಬಡವರನ್ನು ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಮಾತ್ರ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ಜನತೆ ಕೆಲಸಕ್ಕಾಗಿ ಗುಜರಾತ್ ಗೆ ಬರ್ತಾರೆ. ಅಂತಹ ಸ್ಥಿತಿ ಬದಲಾಗಬೇಕು. ಇಲ್ಲಿನ ಜನತೆಗೆ ಇಲ್ಲಿಯೇ ಕೆಲಸ ಸಿಗಬೇಕು. ಅದಕ್ಕೆ ಉತ್ತರ ಪ್ರದೇಶ ಅಭಿವೃದ್ಧಿಯಾಗಬೇಕು. ಇದಕ್ಕಾಗಿ ಜನತೆ ಬಿಜೆಪಿಗೆ ಮತ ನೀಡಿ ಎಂದರು.
ಇದೇ ವೇಳೆ, ಉತ್ತರ ಪ್ರದೇಶವನ್ನು ಗುಜರಾತ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಸಮಾಜವಾದಿ ಪಕ್ಷದಿಂದ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಅಖಿಲೇಶ್ ಯಾದವ್ ವಿರುದ್ಧ ಹರಿಹಾಯ್ದರು.