ಉ.ಕ. ಹಾಲು ಉತ್ಪಾದಕರಿಗೆ 3 ರು. ಬೋನಸ್
ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ(ಕೆಎಂಎಫ್) ಉತ್ತರ ಕರ್ನಾಟಕ ಭಾಗದ ರೈತರಿಗೆ ಬಂಪರ್ ಕೊಡುಗೆ ನೀಡಿದ್ದು,..
ಬಳ್ಳಾರಿ: ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ(ಕೆಎಂಎಫ್) ಉತ್ತರ ಕರ್ನಾಟಕ ಭಾಗದ ರೈತರಿಗೆ ಬಂಪರ್ ಕೊಡುಗೆ ನೀಡಿದ್ದು, ಶುಕ್ರವಾರ ಪ್ರತಿ ಲೀಟರ್ ಹಾಲಿಗೆ ರೈತರಿಗೆ ನೀಡುತ್ತಿರುವ ದರದಲ್ಲಿ 3ರುಪಾಯಿ ಹೆಚ್ಚಳ ಮಾಡಲಾಗಿದೆ. ಇದರಿಂದ ಗ್ರಾಹಕರಿಗೆ ಯಾವುದೇ ತೊಂದರೆ ಇಲ್ಲ.
ಫೆಬ್ರುವರಿ 1ರಿಂದ ನೂತನ ದರ ಜಾರಿಗೆ ಬರಲಿದೆ. ಆದರೆ ಇದು ಫೆಬ್ರುವರಿ 1ರಿಂದ ಮಾರ್ಚ್ 31ರವರೆಗೆ ಮಾತ್ರ ಅನ್ವಯವಾಗಲಿದ್ದು, ಹಾಲು ಒಕ್ಕೂಟಗಳು ಲಾಭದಲ್ಲಿದ್ದರೆ ಮಾತ್ರ ನೂತನ ದರ ಮುಂದುವರೆಯಲಿದೆ ಎಂದು ಕೆಎಂಎಫ್ ಅದ್ಯಕ್ಷ ಸೋಮಶೇಖರ್ ರೆಡ್ಡಿ ಅವರು ತಿಳಿಸಿದ್ದಾರೆ.
ಸದ್ಯ ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ ದರ ಏರಿಕೆ ಮಾಡಲಾಗಿದೆ. ಮುಂದೆ ರಾಜ್ಯದ 13 ಹಾಲು ಒಕ್ಕೂಟಗಳಲ್ಲಿ ದರ ಹೆಚ್ಚಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ರೆಡ್ಡಿ ಹೇಳಿದ್ದಾರೆ.
ಜನವರಿ 1ರಿಂದ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಮತ್ತು ಅವಿಭಜಿತ ಕೋಲಾರ ಜಿಲ್ಲೆಯ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 2 ರುಪಾಯಿ ಹೆಚ್ಚಳ ಮಾಡಲಾಗಿತ್ತು.