ಮೋದಿ ಎಷ್ಟು ದುಡ್ಡು ಕೊಟ್ಟಿದ್ದಾರೆ? ಮಾಧ್ಯಮಕ್ಕೆ ಸೋಮನಾಥ್ ಭಾರ್ತಿ ಪ್ರಶ್ನೆ
ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ನಿಮಗೆ ಎಷ್ಟು ದುಡ್ಡು ಕೊಟ್ಟಿದ್ದಾರೆ ..
ನವದೆಹಲಿ: ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ನಿಮಗೆ ಎಷ್ಟು ದುಡ್ಡು ಕೊಟ್ಟಿದ್ದಾರೆ ಎಂದು ದೆಹಲಿ ಕಾನೂನು ಸಚಿವ ಸೋಮನಾಥ್ ಭಾರ್ತಿ ಅವರು ಶನಿವಾರ ಮಾಧ್ಯಮಕ್ಕೆ ಪ್ರಶ್ನಿಸಿದ್ದಾರೆ.
ಮಧ್ಯರಾತ್ರಿ ಉಗಾಂಡ ಮಹಿಳೆಯರ ಮೇಲಿನ ದಾಳಿಯನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿರುವ ಭಾರ್ತಿ, ಮಧ್ಯರಾತ್ರಿ ದಾಳಿಯ ನೈತಿಕ ಹೊಣೆಹೊತ್ತು ತಾವು ರಾಜಿನಾಮೆ ನೀಡಬೇಕೆ ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ದೆಹಲಿ ಮಾಧ್ಯಮದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಸಚಿವರು, ಮೋದಿ ಅವರು ನಿಮಗೆ ಎಷ್ಟು ಹಣ ನೀಡಿದ್ದಾರೆ ಹೇಳಿ ಎಂದರು. ಮೋದಿಯಿಂದ ದುಡ್ಡು ತೆಗೆದುಕೊಂಡು ನನ್ನ ವಿರುದ್ಧ ಬರೆಯುತ್ತಿದ್ದೀರಿ ಎಂದು ದೂರಿದರು. ಅಲ್ಲದೆ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಕಾಂಗ್ರೆಸ್ನ ಸದಸ್ಯೆ ಎಂದು ಭಾರ್ತಿ ಆರೋಪಿಸಿದರು.
ಈ ಹೇಳಿಕೆಗೆ ರಾಜಕೀಯ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಭಾರ್ತಿ ಅವರು ಕೂಡಲೇ ಕ್ಷಮೆಯಾಚಿಸಿದ್ದಾರೆ ಮತ್ತು ತಾವು ಆ ಅರ್ಥದಲ್ಲಿ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಉಗಾಂಡ ಮಹಿಳೆಯರ ಮೇಲಿನ ದಾಳಿಯಿಂದಾಗಿ ಸೋಮನಾಥ್ ಭಾರ್ತಿ ಅವರು ತೀವ್ರ ವಿವಾದಕ್ಕೀಡಾಗಿದ್ದರು. ಈ ಸಂಬಂಧ ಮಹಿಳಾ ಆಯೋಗ ಸಹ ಭಾರ್ತಿ ಅವರಿಗೆ ನೋಟಿಸ್ ಜಾರಿ ಮಾಡಿತ್ತು.