ಮಾಣಿಕ್ ಷಾ ಪೆರೇಡ್ ಗ್ರೌಂಡ್‌ನಲ್ಲಿ 65ನೇ ಗಣರಾಜ್ಯೋತ್ಸವ ಸಂಭ್ರಮ
ಮಾಣಿಕ್ ಷಾ ಪೆರೇಡ್ ಗ್ರೌಂಡ್‌ನಲ್ಲಿ ನಡೆದ 65ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು...
ಬೆಂಗಳೂರು: ಮಾಣಿಕ್ ಷಾ ಪೆರೇಡ್ ಗ್ರೌಂಡ್‌ನಲ್ಲಿ ನಡೆದ 65ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಭಾನುವಾರ ಧ್ವಜಾರೋಹಣ ನೇರವೇರಿಸಿ, ಪಥಸಂಚಲನದ ಗೌರವ ವಂದನೆ ಸ್ವೀಕರಿಸಿದರು.
ಸಮಾರಂಭದಲ್ಲಿ ನಾಗರಿಕ ಸೇವೆ, ವಾಯುಪಡೆ, ಡಿಆರ್‌ಪಿಎಫ್, ಬಿಎಸ್‌ಎಫ್, ಕೇಂದ್ರೀಯ ಮೀಸಲು ಪಡೆ, ಸಿಎಆರ್, ಅಗ್ನಿಶಾಮಕ, ಗೃಹ ರಕ್ಷಕ, ಸ್ಕೌಟ್ಸ್ ಅಂಡ್ ಗೈಡ್ಸ್, ಎನ್‌ಸಿಸಿ ಸೇರಿದಂತೆ ವಿವಿಧ ಶಾಲಾ ಮಕ್ಕಳು ಪಥ ಸಂಚಲನ ನಡೆಸಿಕೊಟ್ಟರು. ಅಲ್ಲದೆ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ವಿವಿಧ ವೇಷಭೂಷಣ, ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ನೃತ್ಯವನ್ನು ಪ್ರದರ್ಶಿಸಿದರು.
ಧ್ವಜಾರೋಹಣ ನಂತರ ಮಾತನಾಡಿದ ರಾಜ್ಯಪಾಲರು, ನಾಡಿನ ಜನತೆಗೆ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದರು.
ಭಾರತ ಅಭಿವೃದ್ಧಿ ಪತದಲ್ಲಿ ಮುಂಚೂಣಿ ರಾಷ್ಟ್ರಗಳ ಸಾಲಿನಲ್ಲಿ ಸ್ಥಾನಪಡೆದುಕೊಂಡಿದೆ. ಅಲ್ಲದೆ ಭಾರತ ಜಾತ್ಯತೀತ ರಾಷ್ಟ್ರವಾಗಿದ್ದು, ಜಾತ್ಯತೀತ ಬದ್ಧತೆ ಬಗ್ಗೆ ನಾವು ರಾಜಿ ಮಾಡಿಕೊಳ್ಳಬಾರದು. ರಾಜಿ ಮಾಡಿಕೊಂಡರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಬಹುಸಂಸ್ಕೃತಿ ಕಲ್ಪನೆಯನ್ನೇ ಮೊಟಕು ಗೊಳಿಸಿದಂತಾಗುತ್ತದೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.
ಆಹಾರ ಭದ್ರೆತೆ ಖಾತ್ರಿಪಡಿಸುವ ಮೂಲಕ ರಾಜ್ಯ ದಿಟ್ಟ ಹೆಜ್ಜೆ ಇಟ್ಟಿದೆ. ಅಲ್ಲದೆ ಆರೋಗ್ಯ ವಲಯದಲ್ಲಿಯೂ ಸಾಧನೆ ಮಾಡಿದೆ. ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗೆ ರಾಜ್ಯವು ಮತ್ತಷ್ಟು ದೃಢ ಸಂಕಲ್ಪ ಮಾಡಬೇಕು. ಅಲ್ಲದೆ ರಾಜ್ಯದಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆ ಜಾರಿಯಾಗುವ ಅಗತ್ಯವಿದೆ ಎಂದು ಹಂಸರಾಜ್ ಭಾರದ್ವಾಜ್ ಅವರು ಹೇಳಿದ್ದಾರೆ.
'ಸಕಾಲ' ಯೋಜನೆಯಂತಹ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಕರ್ನಾಟಕ ಮಾದರಿ ರಾಜ್ಯವಾಗಿದ್ದು, ಗಮನಾರ್ಹ ಸಾಧನೆಯಿಂದ ಕರ್ನಾಟಕ ದೇಶದಲ್ಲಿ ಮನೆಮಾತಾಗಿದೆ. ಅಲ್ಲದೆ ಅಭಿವೃದ್ಧಿಯಲ್ಲಿ ಅತ್ಯಂತ ಎತ್ತರಕ್ಕೆ ಏರಿರುವ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ ಎಂದರು.