ನಿಮಗೆ ಗೊತ್ತಿಲ್ಲದ ರಾಹುಲ್ ಗಾಂಧಿ ವಿಷಯಗಳು!
ಅಮೆರಿಕದ ಅಧ್ಯಕ್ಷರು ಕೂಡ ಆಗಾಗ ಇಂಟರ್ವ್ಯೂ ಕೊಡುತ್ತಾರೆ. ಆದರೆ, ರಾಹುಲ್ ಗಾಂಧಿ ಹಾಗೂ ಅವರ ತಾಯಿ ಸೋನಿಯಾ ಗಾಂಧಿ ಯಾವತ್ತೂ...
ಅಮೆರಿಕದ ಅಧ್ಯಕ್ಷರು ಕೂಡ ಆಗಾಗ ಇಂಟರ್ವ್ಯೂ ಕೊಡುತ್ತಾರೆ. ಆದರೆ, ರಾಹುಲ್ ಗಾಂಧಿ ಹಾಗೂ ಅವರ ತಾಯಿ ಸೋನಿಯಾ ಗಾಂಧಿ ಯಾವತ್ತೂ ಮಾಧ್ಯಮಗಳಿಗೆ ಸಂದರ್ಶನ ಕೊಟ್ಟಿಲ್ಲ. ಆದ್ದರಿಂದಲೇ ಈ ದೇಶದ ಯಾವುದೇ ವಿಷಯದಲ್ಲಿ ಅವರ ಧೋರಣೆಗಳೇನು ಎಂಬುದು ಯಾರಿಗೂ ಅರ್ಥವೇ ಆಗುವುದಿಲ್ಲ. ಅವರ ಹಿಂಬಾಲಕರಿಂದ ಜನರಿಗೆ ಸುತ್ತಿಬಳಸಿ ಸೆಕೆಂಡ್ ಹ್ಯಾಂಡ್ ಮಾಹಿತಿ ಬರಬೇಕಷ್ಟೆ. ಹೀಗಿರುವ ಕಾಂಗ್ರೆಸ್ ರಾಜಕುಮಾರನ ಬಗ್ಗೆ ನಿಮಗೆ ಗೊತ್ತಿಲ್ಲದ ಒಂದಷ್ಟು ಮಾಹಿತಿಗಳು ಇಲ್ಲಿವೆ.
ಈ ಮಾಹಿತಿ ಯುಗದಲ್ಲಿ ಯಾರ ಬಗ್ಗೆ ಬೇಕಾದರೂ ನಿಮಗೆ ಲೋಡುಗಟ್ಟಲೆ ಮಾಹಿತಿ ಸಿಗುತ್ತದೆ. ಇದಕ್ಕೆ ಒಬ್ಬರು ಅಪವಾದವಿದ್ದಾರೆ. ಅವರು ರಾಹುಲ್ ಗಾಂಧಿ. ಇಂದಿರಾ ಗಾಂಧಿಯ ಮೊಮ್ಮಗ, ರಾಜೀವ್ ಗಾಂಧಿಯ ಮಗ ರಾಹುಲ್ ಗಾಂಧಿ ಬಗ್ಗೆ ಈ ದೇಶದ ಪ್ರತಿಯೊಬ್ಬರಿಗೂ ಕುತೂಹಲವಿದೆ. ಆದರೆ ಅವರ ಖಾಸಗಿ ಮಾಹಿತಿಗಳು ಎಲ್ಲೂ ಹೊರಬರದಂತೆ ಕಾಂಗ್ರೆಸ್ನಲ್ಲಿ ವ್ಯವಸ್ಥಿತವಾಗಿ ನೋಡಿಕೊಳ್ಳಲಾಗುತ್ತಿದೆ. ಹಾಗಾಗಿಯೇ ಅವರು ಹೊರಗೆಷ್ಟು ಕಾಣುತ್ತಾರೋ ಅಷ್ಟೇ. ಅದಕ್ಕಿಂತ ಹೆಚ್ಚು ಯಾರಿಗೂ ಅವರ ಬಗ್ಗೆ ಗೊತ್ತಿಲ್ಲ. ಈ ದೇಶದಲ್ಲಿ ಸ್ವಲ್ಪ ಪ್ರಸಿದ್ಧಿ ಬಂದರೂ ಸಾಕು ಅವರಿಗೆ ಯಾವ ಕಲರ್ ಇಷ್ಟ, ಯಾವ ಜ್ಯೂಸ್ ಕುಡಿಯುತ್ತಾರೆ, ದಿನಕ್ಕೆ ಎಷ್ಟು ತಾಸು ವರ್ಕೌಟ್ ಮಾಡುತ್ತಾರೆ, ಅವರ ರೋಲ್ ಮಾಡೆಲ್ ಯಾರು, ಯಾವ ಪುಸ್ತಕ ಓದುತ್ತಾರೆ, ಯಾವ ಸಿನೆಮಾ ನೋಡುತ್ತಾರೆ, ಅವರ ನಾಯಿಯ ಹೆಸರೇನು, ಅವರೇಕೆ ಬೆಕ್ಕು ಸಾಕಿಲ್ಲ, ಅವರು ತಲೆನೋವು ಬಂದಾಗ ಯಾವ ಗುಳಿಗೆ ನುಂಗುತ್ತಾರೆ...? ಉಸ್ಸಪ್ಪಾ ಎನ್ನುವಷ್ಟು ಡೀಟೆಲ್ಸ್ ಪತ್ರಿಕೆ ಹಾಗೂ ಇಂಟರ್ನೆಟ್ನಲ್ಲಿ ಬಂದು ಬಿದ್ದಿರುತ್ತವೆ.
ರಾಹುಲ್ ಗಾಂಧಿ ಬಗ್ಗೆ ಇಂತಹ ಒಂದೇ ಒಂದು ಮಾಹಿತಿ ಯಾರಿಗಾದರೂ ಗೊತ್ತಾ? ಇಲ್ಲ. ಅವರು ಈ ದೇಶದ ಮೋಸ್ಟ್ ಪಾಪ್ಯುಲರ್ ಯಂಗ್ಮ್ಯಾನ್. ಯುವಕ, ಯುವತಿಯರಿಗೆ ಅವರು ರಿಯಲ್ ಹೀರೋ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ, ಸಂಸದ. ಮುಂದಿನ ಪ್ರಧಾನಿ ಎಂದು ಎಲ್ಲರಿಂದ ಕರೆಸಿಕೊಳ್ಳುತ್ತಿರುವವರು. ಇಷ್ಟಾದರೂ ಅವರ ಖಾಸಗಿ ಮಾಹಿತಿಗಳು ಯಾವತ್ತೂ ಹೊರಬರುವುದೇ ಇಲ್ಲ. ರಾಹುಲ್ ಗಾಂಧಿ ಮೊದಲಿನಿಂದಲೂ ಬೆಳೆದಿದ್ದೇ ಹಾಗೆ. ಅವರ ಬದುಕು ಒಂದು ಭದ್ರ ಕೋಟೆ. ಹುಟ್ಟಿದಾಗಲೇ ಅವರು ಪ್ರಧಾನಿಯ ಮೊಮ್ಮಗ. ಬೆಳೆಯುವಾಗ ಪ್ರಧಾನಿಯ ಮಗ. ಬೆಳೆದ ಮೇಲೆ ಭವಿಷ್ಯದ ಪ್ರಧಾನಿ! ಇಂಥ ವ್ಯಕ್ತಿ ಜನಸಾಮಾನ್ಯರಂತೆ ಯಾವತ್ತೂ ಇರಲು ಸಾಧ್ಯವಿಲ್ಲ. ಜನಸಾಮಾನ್ಯರ ಬದುಕನ್ನು ಬೇಕೆಂದರೂ ಬದುಕಲು ಸಾಧ್ಯವಿಲ್ಲ. ಆದ್ದರಿಂದಲೇ ಜನಸಾಮಾನ್ಯರಿಗೆ ಇವರು ಹತ್ತಿರವೂ ಆಗುವುದಿಲ್ಲ. ಆದರೆ ಪತ್ರಿಕೆ ಹಾಗೂ ಟೀವಿ ಸಂದರ್ಶನಗಳಲ್ಲಿ ಮನಸ್ಸು ಬಿಚ್ಚಿ ಮಾತನಾಡಿದರೆ ಇವರನ್ನು ಜನರು ಅರ್ಥ ಮಾಡಿಕೊಳ್ಳಬಹುದು. ಅಮೆರಿಕದ ಅಧ್ಯಕ್ಷರು ಕೂಡ ಆಗಾಗ ಇಂಟರ್ವ್ಯೂ ಕೊಡುತ್ತಾರೆ. ಆದರೆ, ರಾಹುಲ್ ಗಾಂಧಿ ಹಾಗೂ ಅವರ ತಾಯಿ ಸೋನಿಯಾ ಗಾಂಧಿ ಯಾವತ್ತೂ ಮಾಧ್ಯಮಗಳಿಗೆ ಸಂದರ್ಶನ ಕೊಟ್ಟಿಲ್ಲ. ಆದ್ದರಿಂದಲೇ ಈ ದೇಶದ ಯಾವುದೇ ವಿಷಯದಲ್ಲಿ ಅವರ ಧೋರಣೆಗಳೇನು ಎಂಬುದು ಯಾರಿಗೂ ಅರ್ಥವೇ ಆಗುವುದಿಲ್ಲ. ಅವರ ಹಿಂಬಾಲಕರಿಂದ ಜನರಿಗೆ ಸುತ್ತಿಬಳಸಿ ಸೆಕೆಂಡ್ ಹ್ಯಾಂಡ್ ಮಾಹಿತಿ ಬರಬೇಕಷ್ಟೆ.
ಹೀಗಿರುವ ಕಾಂಗ್ರೆಸ್ ರಾಜಕುಮಾರನ ಬಗ್ಗೆ ನಿಮಗೆ ಗೊತ್ತಿಲ್ಲದ ಒಂದಷ್ಟು ಮಾಹಿತಿಗಳು ಇಲ್ಲಿವೆ.
ಮನೆಯೇ ಸ್ಕೂಲು
ರಾಹುಲ್ ಗಾಂಧಿ ತಮ್ಮ ವಿದ್ಯಾರ್ಥಿ ಜೀವನದ ಹೆಚ್ಚು ಭಾಗ ಕಳೆದಿದ್ದು ಮನೆಯಲ್ಲೇ. ಪ್ರಾಥಮಿಕ ಶಿಕ್ಷಣ ದೆಹಲಿಯ ಮಾಡರ್ನ್ ಸ್ಕೂಲ್ನಲ್ಲಾಯಿತು. ಆಗ ಪಂಜಾಬ್ ಭಯೋತ್ಪಾದನೆಯ ಬಿಸಿ ಹೆಚ್ಚಿತ್ತು. ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯಾದರು. ಗಾಂಧಿ ಕುಟುಂಬಕ್ಕೆ ಬಿಗಿ ಭದ್ರತೆ ನೀಡಲಾಯಿತು. ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿಗೆ ಶಾಲೆ ಬಿಡಿಸಿ ಮನೆಯಲ್ಲೇ ಶಿಕ್ಷಕರಿಂದ ಪಾಠ ಮಾಡಿಸಲಾಯಿತು. ನಂತರ ರಾಹುಲ್ ಸೇಂಟ್ ಸ್ಟೀಫನ್ ಕಾಲೇಜಿನಲ್ಲಿ ಬಿ.ಎ.ಗೆ ಸೇರಿಕೊಂಡರು. ಆದರೆ ಒಂದೇ ವರ್ಷಕ್ಕೆ ಕಾಲೇಜು ಬಿಟ್ಟರು. ಅವರಿಗೆ ಆ ಕಾಲೇಜಿನಲ್ಲಿ ಸೀಟು ಸಿಕ್ಕಿದ್ದು ಸ್ಪೋರ್ಟ್ಸ್ ಕೋಟಾದಲ್ಲಿ.
ಶೂಟರ್ ರಾಹುಲ್
ರಾಹುಲ್ ಗಾಂಧಿ ಉತ್ತಮ ಶೂಟರ್. ಚಿಕ್ಕವರಿದ್ದಾಗಿನಿಂದಲೇ ಅವರಿಗೆ ರೈಫಲ್ ಶೂಟಿಂಗ್ ಮತ್ತು ಟ್ರ್ಯಾಪ್ ಶೂಟಿಂಗ್ ತರಬೇತಿ ಕೊಡಿಸಲಾಗಿತ್ತು. ಅಪ್ಪ ರಾಜೀವ್ ಗಾಂಧಿ ಕೂಡ ಒಳ್ಳೆಯ ಶೂಟರ್. ಮಗನಿಗೂ ಅದನ್ನು ಕಲಿಸಿದರು. ಈಗ ರಾಹುಲ್ ಗಾಂಧಿ ಶೂಟಿಂಗ್ ಪ್ರಾಕ್ಟೀಸ್ ಮಾಡುವುದಿಲ್ಲ. ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಆಗಾಗ ನರೇಂದ್ರ ಮೋದಿಗೆ ಮಾತಿನಿಂದ ಶೂಟ್ ಮಾಡುತ್ತಾರೆ.
ವಿನಯ ಮೂರ್ತಿ
ಕಾಲೇಜಿಗೆ ಹೋಗುವಾಗ ರಾಹುಲ್ ಜೊತೆ ಬಾಡಿಗಾರ್ಡ್ಗಳೂ ಹೋಗುತ್ತಿದ್ದರು. ಆದರೆ ತಾನು ಪ್ರಧಾನಿಯ ಮಗ ಎಂಬ ಯಾವುದೇ ಅಹಂ ಅವರಿಗಿರಲಿಲ್ಲ. ಬಹಳ ವಿನೀತ ಹುಡುಗನಾಗಿದ್ದರು. ಎಲ್ಲ ಹುಡುಗರೂ ಒಬ್ಬರೇ ಕಾಲೇಜಿಗೆ ಬರುವಾಗ ತಾನು ಮಾತ್ರ ಭದ್ರತಾ ಸಿಬ್ಬಂದಿ ಜೊತೆ ಬರುತ್ತೇನೆ ಎಂಬುದು ಅವರಿಗೆ ಮುಜುಗರದ ವಿಷಯವಾಗಿತ್ತು. ಅವರು ಆ ಕಾಲೇಜಿಗೆ ಬರುತ್ತಾರೆಂದೇ ಸೇಂಟ್ ಸ್ಟೀಫನ್ ಕಾಲೇಜಿನ ಸುತ್ತ ಭದ್ರತಾ ಸಿಬ್ಬಂದಿ ನಿಂತಿರುತ್ತಿದ್ದರು! ಬಹುಶಃ ಈ ಮುಜುಗರಕ್ಕೇ ಅವರು ಕಾಲೇಜು ಬಿಟ್ಟಿರಬೇಕು.
ಡಿಗ್ರಿ ಮಾಡಿದ್ದಾರಾ?
ದಿಲ್ಲಿಯಲ್ಲಿ ಕಾಲೇಜು ಬಿಟ್ಟ ಕೆಲವು ವರ್ಷಗಳ ನಂತರ ರಾಹುಲ್ ಅಮೆರಿಕಕ್ಕೆ ಓದಲು ಹೋದರು. ಅಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪದವಿಗೆ ಸೇರಿಕೊಂಡರು. ಆದರೆ ಒಳ್ಳೆಯ ಗ್ರೇಡ್ ಬರಲಿಲ್ಲ. ಹಾಗಾಗಿ ಅವರು ಡಿಗ್ರಿ ಮುಗಿಸಿದ ಬಗ್ಗೆ ಅನುಮಾನಗಳಿವೆ. ಆದರೆ ಅವರು ಚುನಾವಣೆಗೆ ಸ್ಪರ್ಧಿಸುವಾಗ ನೀಡಿದ ಅಫಿಡವಿಟ್ನಲ್ಲಿ ಅವರು ಹಾರ್ವರ್ಡ್ ವಿವಿಯಿಂದ ಪದವಿ ಪಡೆದಿದ್ದರ ಬಗ್ಗೆ ಸರ್ಟಿಫಿಕೆಟ್ ಲಗತ್ತಿಸಲಾಗಿದೆ.
ಅಜ್ಜಿಯೂ ಡಿಗ್ರಿ ಓದಿಲ್ಲ!
ರಾಹುಲ್ ಗಾಂಧಿ ಡಿಗ್ರಿ ಮುಗಿಸಿರುವ ಬಗ್ಗೆ ಅನುಮಾನವಿದ್ದರೂ ಅದೇನೂ ದೊಡ್ಡ ವಿಷಯವಲ್ಲ. ಏಕೆಂದರೆ, ಅವರ ಅಜ್ಜಿ ಇಂದಿರಾ ಗಾಂಧಿ ಆಕ್ಸ್ಫರ್ಡ್ನಲ್ಲಿ ಕಾಲೇಜಿಗೆ ಹೋದರೂ ಡಿಗ್ರಿ ಮುಗಿಸಿರಲಿಲ್ಲ. ಅವರ ತಂದೆ ರಾಜೀವ್ ಗಾಂಧಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ಹೋದರೂ ಡಿಗ್ರಿ ಮುಗಿಸಿರಲಿಲ್ಲ. ಹಾಗಂತ ಅವರ ನಾಯಕತ್ವ ಗುಣದಲ್ಲೇನಾದರೂ ಕೊರತೆಯಿತ್ತೇ? ಇವತ್ತಿಗೂ ಈ ದೇಶ ಕಂಡ ಪ್ರಭಾವಿ ಪ್ರಧಾನಿ ಇಂದಿರಾ ಗಾಂಧಿ. ಈ ದೇಶ ಕಂಡ ದೂರದರ್ಶಿತ್ವದ ಪ್ರಧಾನಿ ರಾಜೀವ್ ಗಾಂಧಿ. ಮಾಹಿತಿ ತಂತ್ರಜ್ಞಾನ ಕ್ರಾಂತಿಗೆ ರಾಜೀವ್ ಮುನ್ನುಡಿ ಬರೆಯದಿದ್ದರೆ ಭಾರತ ಯಾವತ್ತೂ ಜಗತ್ತಿನ ಐಟಿ ರಾಜಧಾನಿಯಾಗಲು ಸಾಧ್ಯವಿರಲಿಲ್ಲ.
ಲಂಡನ್ನಲ್ಲಿ ನೌಕರಿ
ಹಾರ್ವರ್ಡ್ನಿಂದ ಬಂದ ಮೇಲೆ ರಾಹುಲ್ಗಾಂಧಿ ಏನು ಮಾಡಿದರು ಎಂಬ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಕೆಲವರ ಪ್ರಕಾರ, ಅವರು ಲಂಡನ್ನಲ್ಲಿ ಫೈನಾನ್ಷಿಯಲ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡಿದರು. ಇನ್ನು ಕೆಲವರ ಪ್ರಕಾರ ಫೈನಾನ್ಷಿಯಲ್ ಕನ್ಸಲ್ಟಿಂಗ್ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದರು. ಇನ್ನು ಕೆಲವರ ಪ್ರಕಾರ ಲಂಡನ್ನು, ಅಮೆರಿಕದ ನಡುವೆ ಓಡಾಡಿಕೊಂಡು ಹಾಯಾಗಿದ್ದರು. ಯಾವ ಕೆಲಸವನ್ನೂ ಮಾಡಲಿಲ್ಲ.
ರಾಜಕೀಯ ಅಂದ್ರೆ ಅಲರ್ಜಿ
ಅಜ್ಜಿ ಹಾಗೂ ಅಪ್ಪ ಪ್ರಧಾನಿಯಾಗಿದ್ದಾಗಲೇ ಹತ್ಯೆಗೀಡಾಗಿದ್ದನ್ನು ರಾಹುಲ್ ನೋಡಿದ್ದರು. ಅದರಿಂದಾಗಿ ತಮ್ಮ ಕುಟುಂಬ ಕಷ್ಟ ಅನುಭವಿಸಿದ್ದನ್ನೂ ಕಂಡಿದ್ದರು. ಹಾಗಾಗಿ ಅವರಿಗೆ ರಾಜಕೀಯದಲ್ಲಿ ಕಿಂಚಿತ್ತೂ ಆಸಕ್ತಿಇರಲಿಲ್ಲ. ಬದಲಿಗೆ ರೇಜಿಗೆಯೇ ಇತ್ತು. ಅವರ ಅಪ್ಪ ರಾಜೀವ್ ಕೂಡ ಮೊದಲು ಹೀಗೇ ಇದ್ದರು. ಪೈಲಟ್ ಕೆಲಸ ಮಾಡಿಕೊಂಡು ನೆಮ್ಮದಿಯಾಗಿದ್ದರು. ಆದರೆ ತಾಯಿಯ ಹತ್ಯೆಯಾದ ನಂತರ ಅನಿವಾರ್ಯವಾಗಿ ಪ್ರಧಾನಿಯಾದರು. ರಾಹುಲ್ ಕೂಡ ಅಪ್ಪನ ಹತ್ಯೆಯಾದ ನಂತರ ಅಮ್ಮನಿಗೆ ಕಾಂಗ್ರೆಸ್ ಪಕ್ಷ ಸಂಭಾಳಿಸಲು ನೆರವು ನೀಡಲು ಭಾರತಕ್ಕೆ ಬಂದು ರಾಜಕೀಯ ಸೇರಿದರು.
ಗರ್ಲ್ಫ್ರೆಂಡ್ ಇದ್ದಾಳಂತೆ!
ರಾಹುಲ್ಗೊಬ್ಬಳು ಗರ್ಲ್ಫ್ರೆಂಡ್ ಇದ್ದಾಳೆಂಬ ಗುಸುಗುಸು ಇದೆ. ಅದರ ಬಗ್ಗೆ ಯಾರೂ ಅಧಿಕೃತವಾಗಿ ಇಲ್ಲಿಯವರೆಗೆ ಮಾತಾಡಿಲ್ಲ. ಹಾಗಾಗಿ ಅದು ವದಂತಿ ಮಾತ್ರ. ನಿಜವೋ ಸುಳ್ಳೋ ಗೊತ್ತಿಲ್ಲ. ಮೂಲಗಳ ಪ್ರಕಾರ ಅವರಿಗೊಬ್ಬಳು ಪ್ರೇಯಸಿ ಇದ್ದಾಳೆ. ಆಕೆಯ ಹೆಸರು ಜೌನಿತಾ. ಅವಳು ಕೊಲಂಬಿಯಾದವಳು. ಹಾರ್ವರ್ಡ್ನಲ್ಲಿ ರಾಹುಲ್ ಓದುತ್ತಿದ್ದಾಗ ಆದ ಪರಿಚಯವಂತೆ. ಕೊಲಂಬಿಯಾದ ಉದ್ಯಮಿಯ ಮಗಳಂತೆ. ತಂಗಿ ಪ್ರಿಯಾಂಕಾ ಹಾಗೂ ಭಾವ ರಾಬರ್ಟ್ ವಾದ್ರಾ ಜೊತೆ ರಾಹುಲ್ ಈಕೆಯನ್ನು ಕರೆದುಕೊಂಡು ಕೇರಳದ ಹಿನ್ನೀರು ಪ್ರದೇಶಕ್ಕೆ ಪ್ರವಾಸ ಹೋಗಿದ್ದರಂತೆ. ಜೌನಿತಾ ದೆಹಲಿಯಲ್ಲೇ ಇರುತ್ತಾಳಂತೆ. ಗಾಂಧಿ ಕುಟುಂಬದ ಫಾರ್ಮ್ಹೌಸ್ನಲ್ಲಿ ವಾಸಿಸುತ್ತಾಳಂತೆ. ಇನ್ನೊಂದು ಮೂಲದ ಪ್ರಕಾರ, ಅವರ ಪ್ರೇಯಸಿ ಹೆಸರು ವೆರೋನಿಕಾ. ಆಕೆ ಸ್ಪೇನ್ನವಳು. ಅವಳಜೊತೆ ಲಂಡನ್ನಲ್ಲಿ ಕ್ರಿಕೆಟ್ ವರ್ಲ್ಡ್ ಕಪ್ ನೋಡಲು ರಾಹುಲ್ ಹೋಗಿದ್ದರಂತೆ. ಎಲ್ಲವೂ ಅಂತೆ ಕಂತೆ. ಇವರಿಬ್ಬರೂ ಒಬ್ಬರೇ ಇರಬಹುದು.
ರಾಹುಲ್ ಗಾಂಧಿ ಯಾವತ್ತಾದ್ರೂ ಮದುವೆಯಾಗ್ತಾರಾ?
ರಾಹುಲ್ ಗಾಂಧಿ ತಮಗೊಬ್ಬಳು ಗರ್ಲ್ಫ್ರೆಂಡ್ ಇದ್ದಾಳೆಂದು 2004ರಲ್ಲಿ ಅಮೇಠಿಯಲ್ಲಿ ಚುನಾವಣಾ ಪ್ರಚಾರ ಮಾಡುವಾಗ ಒಪ್ಪಿಕೊಂಡಿದ್ದರು. 'ಅವಳಿಗೆ ಪ್ರಪೋಸ್ ಮಾಡು' ಅಂತ ಅಮ್ಮ ಹಾಗೂ ತಂಗಿ ಒತ್ತಾಯ ಮಾಡುತ್ತಲೇ ಇರ್ತಾರೆ. ನೀನು ಮಾಡದಿದ್ರೆ ನಾವೇ ಮಾಡ್ತೀವಿ ಅಂತಾರೆ' ಎಂದು ಬಹಿರಂಗವಾಗಿ ಹೇಳಿದ್ದರು.
'ಒಂದೂರಲ್ಲಿ ಒಬ್ಬ ರಾಜಕುಮಾರ ಇದ್ನಂತೆ. ಅವನು ನೋಡೋದಕ್ಕೆ ತುಂಬಾ ಚೆನ್ನಾಗಿದ್ನಂತೆ. ಅವನತ್ರ ತುಂಬಾ ದುಡ್ಡಿತ್ತಂತೆ. ಎಲ್ಲರೂ ಅವನು ಹೇಳಿದಂಗೇ ಕೇಳ್ತಿದ್ರಂತೆ. ಅವನಿಗೆ ಮದುವೆ ಆಗೋದಕ್ಕೇ ಇಷ್ಟ ಇರಲಿಲ್ವಂತೆ....' ಈಗ ಮಕ್ಕಳಿಗೆ ಕತೆ ಹೇಳುವ ರೂಢಿಯಿಲ್ಲ. ಇದ್ದಿದ್ದರೆ ರಾಹುಲ್ ಗಾಂಧಿಯ ಈ ಕತೆಯನ್ನೇ ಹೇಳಬಹುದಿತ್ತು!
ರಾಹುಲ್ ಗಾಂಧಿ ಮದುವೆ ಎಂಬುದು ಬಹಳ ವರ್ಷಗಳಿಂದ ಗುಬ್ಬಿ ಪುರಾಣವೇ ಆಗುಳಿದಿದೆ. ನಮ್ಮ ದೇಶದಲ್ಲಿ ಇಬ್ಬರು ಮೋಸ್ಟ್ ಎಲಿಜಿಬಲ್ ಬ್ಯಾಚಲರ್ಗಳು ಬಹಳ ವರ್ಷಗಳಿಂದ ಆ ಹುದ್ದೆಯಲ್ಲೇ ಇದ್ದಾರೆ. ಒಬ್ಬರು ರಾಹುಲ್ ಗಾಂಧಿ, ಇನ್ನೊಬ್ಬರು ಸಲ್ಮಾನ್ ಖಾನ್. ರಾಹುಲ್ಗೆ 43 ಆಯಿತು. ಸಲ್ಮಾನ್ಗೆ 50 ಆಯಿತು. ಇಬ್ಬರೂ ಮದುವೆ ವಿಷಯ ಕೇಳಿದರೆ ಏನೋ ಕತೆ ಹೇಳಿ ಸಾಗಹಾಕುತ್ತಾರೆ.
ರಾಹುಲ್ ಮದುವೆ ಏಕೆ ಬಹಳ ಇಂಪಾರ್ಟೆಂಟು ಅಂದರೆ, ಕಾಂಗ್ರೆಸ್ನವರಿಗೆ ಇದು ಭವಿಷ್ಯದ ಪ್ರಶ್ನೆ. ಸದ್ಯಕ್ಕೆ ಹೇಗಿದ್ದರೂ ಅವರಿಗೆ ನಾಯಕಿಯಾಗಿ ಸೋನಿಯಾ ಗಾಂಧಿ ಇದ್ದಾರೆ. ನಂತರದ ನಾಯಕನಾಗಿ ರಾಹುಲ್ ಇದ್ದಾರೆ. ಆಮೇಲೆ! ರಾಹುಲ್ ಗಾಂಧಿ ಮದುವೆಯನ್ನೇ ಆಗದಿದ್ದರೆ ದಿಲ್ಲಿಯ '10 ಜನಪಥ್'ನಲ್ಲಿ ಕುಳಿತು ಕಾಂಗ್ರೆಸ್ಸನ್ನು ಮುನ್ನಡೆಸುವವರು ಯಾರು? ಹಾಗಾಗಿ ಕಾಂಗ್ರೆಸ್ನಲ್ಲಿ ರಾಹುಲ್ ಜೊತೆ ಮುಕ್ತವಾಗಿ ಮಾತಾಡುವ ಸಲುಗೆ ಯಾವೆಲ್ಲ ನಾಯಕರಿಗಿದೆಯೋ ಅವರೆಲ್ಲರೂ ರಾಹುಲ್ ಬಳಿ ಒಮ್ಮೆಯಾದರೂ ಮದುವೆಯ ವಿಷಯ ಪ್ರಸ್ತಾಪಿಸಿದ್ದಾರೆ.
ರಾಹುಲ್ಗೆ ಸಾಂಪ್ರದಾಯಿಕವಾಗಿ ಮತ್ತು ರಾಜಕೀಯವಾಗಿ ಅನುರೂಪಳಾದ ಹುಡುಗಿಯೊಬ್ಬಳನ್ನು ಹುಡುಕಬೇಕೆಂದರೆ ಉತ್ತರ ಪ್ರದೇಶದ ಬ್ರಾಹ್ಮಣ ಕನ್ಯೆಯರ ಜಾತಕ ತರಿಸಿಕೊಳ್ಳಬೇಕು! ಅವರ ಮುತ್ತಾತ ಜವಾಹರಲಾಲ್ ನೆಹರೂ ಹುಟ್ಟಿದ್ದು ಉತ್ತರ ಪ್ರದೇಶದ ಅಲಹಾಬಾದಿನಲ್ಲಿ. ಹಾಗಾಗಿ ಗಾಂಧಿ ಕುಟುಂಬದ ಬೇರು ಅಲ್ಲಿದೆ. ಆದರೆ ಅವರ ಕುಟುಂಬ ಹೀಗೆ ಜಾತಿಯಲ್ಲಿ ಮದುವೆಯಾಗುವುದಕ್ಕೆ ಪ್ರಸಿದ್ಧವಲ್ಲ. ಅವರ ಅಜ್ಜಿ ಇಂದಿರಾ ಗಾಂಧಿ ಅಲಹಾಬಾದಿನ ಉದ್ಯಮಿ, ಪಾರ್ಸಿ ಧರ್ಮದ ಫಿರೋಜ್ ಗಾಂಧಿಯನ್ನು ಮದುವೆಯಾಗಿದ್ದರು. ಅವರ ತಂದೆ ರಾಜೀವ್ ಇಟಲಿಯ ಕ್ರಿಶ್ಚಿಯನ್ ಹುಡುಗಿ ಸೋನಿಯಾ ಮೈನೋಳನ್ನು ಮದುವೆಯಾದರು. ಅವರ ಚಿಕ್ಕಪ್ಪ ಸಂಜಯ್ ಗಾಂಧಿ ಸಿಖ್ ಧರ್ಮದ, ರೂಪದರ್ಶಿ ಹುಡುಗಿ ಮನೇಕಾಳನ್ನು ಮದುವೆಯಾಗಿದ್ದರು. ಆ ಕಾರಣಕ್ಕೇ ಅವರನ್ನು ಇಂದಿರಾ ಗಾಂಧಿ ಮನೆಯಿಂದ ಹೊರಹಾಕಿದ್ದರು. ಈಗ ಮನೇಕಾ ಕುಟುಂಬ ಬಿಜೆಪಿಯಲ್ಲಿದೆ. ಮನೇಕಾರ ಮಗ ವರುಣ್ ಗಾಂಧಿ ಕೂಡ ಸಂಸದರು ಮತ್ತು ಅವರಿಗೆ ಮದುವೆಯಾಗಿದೆ.
ರಾಹುಲ್ ಗಾಂಧಿ ತಮಗೊಬ್ಬಳು ಗರ್ಲ್ಫ್ರೆಂಡ್ ಇದ್ದಾಳೆಂದು 2004ರಲ್ಲಿ ಅಮೇಠಿಯಲ್ಲಿ ಚುನಾವಣಾ ಪ್ರಚಾರ ಮಾಡುವಾಗ ಒಪ್ಪಿಕೊಂಡಿದ್ದರು. 'ಅವಳಿಗೆ ಪ್ರಪೋಸ್ ಮಾಡು ಅಂತ ಅಮ್ಮ ಹಾಗೂ ತಂಗಿ ಒತ್ತಾಯ ಮಾಡುತ್ತಲೇ ಇರ್ತಾರೆ. ನೀನು ಮಾಡದಿದ್ರೆ ನಾವೇ ಮಾಡ್ತೀವಿ ಅಂತಾರೆ' ಎಂದು ಬಹಿರಂಗವಾಗಿ ಹೇಳಿದ್ದರು. 'ಅವಳು ಯಾವ ದೇಶದವಳು ಎಂದು ಹೇಳುವುದು ಕಷ್ಟ. ಅವಳ ಪಾಲಕರು ಸ್ಪೇನ್ನವರು. ಆಕೆ ಬೆಳೆದಿದ್ದು ವೆನಿಜುವೆಲಾದಲ್ಲಿ' ಎಂದೂ ಸುಳಿವು ಕೊಟ್ಟಿದ್ದರು.
ಆಕೆಯ ಹೆಸರು ವೆರೋನಿಕಾ. ಸ್ಪೇನ್ನ ಉದ್ಯಮಿಯ ಮಗಳು. ವೆನಿಜುವೆಲಾದಲ್ಲಿ ಬೆಳೆದವಳು. ಅವಳೊಬ್ಬಳು ಆರ್ಕಿಟೆಕ್ಟ್. ಗಾಂಧಿ ಮನೆತನದ ಜೊತೆಗಿನ ಸೂಕ್ಷ್ಮಗಳನ್ನು ಅರ್ಥಮಾಡಿಕೊಂಡಿರುವ ಆಕೆ ತೆರೆಮರೆಯಲ್ಲೇ ಇರುವಂತಿದೆ. ಆಫ್ಘಾನಿಸ್ತಾನದ ಮಾಜಿ ರಾಜನ ಮೊಮ್ಮಗಳ ಜೊತೆಗೂ ರಾಹುಲ್ ಹೆಸರು ಕೇಳಿಬಂದಿದ್ದುಂಟು. ಆಕೆ ಆಭರಣ ವಿನ್ಯಾಸಕಾರ್ತಿ. ಅವಳ ಅಮ್ಮ ಇಟಲಿಯವಳು. ಈಗೀಗ ಮದುವೆ ಬಗ್ಗೆ ವರದಿಗಾರರು ಕೇಳಿದರೆ ರಾಹುಲ್ ಸಿಟ್ಟಾಗುತ್ತಾರೆ. 'ನನ್ನ ಮದುವೆ ಯಾವತ್ತೋ ನನಗೆ ಗೊತ್ತಿಲ್ಲ. ನನಗಿಂತ ಹೆಚ್ಚು ನಿಮಗೇ ಗೊತ್ತಿರಬೇಕು. ಆಗಾಗ ನನ್ನ ಮದುವೆ ಬಗ್ಗೆ ವರದಿ ಬರೆಯುತ್ತಿರುತ್ತೀರಿ? ಹೇಳಿ, ನನ್ನ ಮದುವೆ ಯಾವಾಗ?'.
ಮದುವೆ ಬಗ್ಗೆ ಅವರ ಮನಸ್ಸಿನಲ್ಲೇನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಯಾವತ್ತಾದರೂ ಮದುವೆಯಾಗುತ್ತಾರಾ? ಅಥವಾ ಅಟಲ್ ಬಿಹಾರಿ ವಾಜಪೇಯಿ ಅವರಂತೆ ಬ್ರಹ್ಮಚಾರಿಯಾಗೇ ಉಳಿಯುತ್ತಾರಾ? ಅಥವಾ ಈಗಿನ ಟ್ರೆಂಡ್ನಂತೆ ಮದುವೆಯಾಗದೆ, ಆದರೆ ಪ್ರೇಯಿಸಿಯ ಜೊತೆ ಮಕ್ಕಳನ್ನೂ ಹೊಂದಿ ಹಾಯಾಗಿರುತ್ತಾರಾ? ಗೊತ್ತಿಲ್ಲ. ಹಾಗಾದರೆ ರಾಹುಲ್ ಮದುವೆ ಬಗ್ಗೆ ಅಮ್ಮ ಸೋನಿಯಾ ಅಥವಾ ತಂಗಿ ಪ್ರಿಯಾಂಕಾ ಏನು ಹೇಳುತ್ತಾರೆ? 'ಅವರನ್ನೇ ಕೇಳಿ'.
- ರೇಖಾ
(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ (ಸೆ.1, 2013ರ ಸಂಚಿಕೆ) ಆಯ್ದ ಬರಹ)
ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555
Visit: sakhi.in