ರೈತ ಸಂಘ, ಚಿತ್ರೋದ್ಯಮದಿಂದ ಪ್ರತಿಭಟನೆ: ನಗರದ ವಿವಿಧೆಡೆ ಟ್ರಾಫಿಕ್ ಜಾಮ್
ಡಬ್ಬಿಂಗ್ ವಿರೋಧಿಸಿ ಕನ್ನಡ ಚಿತ್ರೋದ್ಯಮದ ಕಲಾವಿದರು ಹಾಗೂ ಕಬ್ಬಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ...
ಬೆಂಗಳೂರು: ಡಬ್ಬಿಂಗ್ ವಿರೋಧಿಸಿ ಕನ್ನಡ ಚಿತ್ರೋದ್ಯಮದ ಕಲಾವಿದರು ಹಾಗೂ ಕಬ್ಬಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಸೋಮವಾರ ನಗರದ ವಿವಿಧೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ.
ಡಬ್ಬಿಂಗ್ ವಿರೋಧಿಸಿ ಕಲಾವಿದರು ನಗರದ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಗೆ ಸಾಥ್ ನೀಡಲು ಕನ್ನಡ ಪರ ಅಭಿಮಾನಿ ಸಂಘಗಳು ನಗರದ ನಾನಾ ಭಾಗಗಳಿಂದ ಆಗಮಿಸುತ್ತಿರುವುದರಿಂದ ಮೆಜೆಸ್ಟಿಕ್, ಶೇಷಾದ್ರಿಪುರಂ ಮೈಸೂರ್ ಬ್ಯಾಂಕ್, ಕೆ. ಆರ್. ವೃತ್ತಗಳಲ್ಲಿ ಟಾಫ್ರಿಕ್ ಜಾಮ್ ಉಂಟಾಗಿದೆ.
ಸಾ.ರಾ. ಗೋವಿಂದ್ ಅವರು ನೇತೃತ್ವದಲ್ಲಿ ಕನ್ನಡ ಚಿತ್ರರಂಗದ ನಾಯಕ ನಾಯಕಿಯರು, ಸಹ ಕಲಾವಿದರು, ಕಿರುತೆರೆ ಕಲಾವಿದರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದು, ಕನ್ನಡ ಪರ ಅಭಿಮಾನಿಗಳು, ಕನ್ನಡ ಪರ ಸಂಘಟನೆಗಳು ಪ್ರತಿಭಟನೆಗೆ ಸಾಥ್ ನೀಡಲಿದ್ದಾರೆ. ಪ್ರತಿಭಟನೆಗೆ ಸುಮಾರು 25 ಸಾವಿರ ಮಂದಿ ಭಾಗವಹಿಸುವ ಸಾಧ್ಯತೆಗಳಿವೆ.
ಚಿತ್ರೋದ್ಯಮ ಬಂದ್ ಹಿನ್ನೆಲೆಯಲ್ಲಿ ಗಾಂಧಿ ನಗರದ ಪ್ರಮುಖ ಚಿತ್ರಮಂದಿರಗಳಲ್ಲಿ ಮಾರ್ನಿಂಗ್ ಶೋಗಳು ರದ್ದುಗೊಂಡಿವೆ.
ರಾಜಾಜಿನಗರದ ರಾಜ್ ಅಭಿಮಾನಿಗಳ ಸಂಘದ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸುತ್ತಿದ್ದಾರೆ. ರಾಜಾಜಿನಗರದಿಂದ ಆರಂಭಗೊಳ್ಳುವ ಬೈಕ್ ರ್ಯಾಲಿ ಆನಂದ್ ಸರ್ಕಲ್ ಮುಖಾಂತರ ಸೆಂಟ್ರಲ್ ಕಾಲೇಜು ಮೈದಾನವನ್ನು ಪ್ರವೇಶಿಸಲಿದ್ದಾರೆ.
ಮತ್ತೊಂದೆಡೆ, ಕಬ್ಬಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿ ಪಡಿಸುವಂತೆ ಆಗ್ರಹಿಸಿ ರೈತ ಸಂಘ ಪ್ರತಿಭಟನೆ ನಡೆಸುತ್ತಿದೆ. ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಇದಕ್ಕಾಗಿ ರೈತರು ಆನಂದ್ ರಾವ್ ಸರ್ಕಲ್‌ಯಿಂದ ರ್ಯಾಲಿ ನಡೆಸುತ್ತಿದ್ದಾರೆ.
ರೈತ ಸಂಘ, ಚಿತ್ರೋದ್ಯಮಗಳ ಪ್ರತಿಭಟನೆಯಿಂದಾಗಿ ಮೆಜೆಸ್ಟಿಕ್ ಸುತ್ತ ಮುತ್ತ ಟ್ರಾಫಿಕ್ ಕಿರಿಕಿರಿ ಉಂಟಾಗಿದ್ದು, ಮೈಸೂರ್ ಬ್ಯಾಂಕ್, ಕೆ. ಆರ್. ವೃತ್ತಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.