ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಫೇಸ್‌ಬುಕ್‌ನಲ್ಲಿ ಹೆಚ್ಚಿದ 'ಡಬ್ಬಿಂಗ್‌' ಚರ್ಚೆ

ಡಬ್ಬಿಂಗ್ ಪರ ಹಾಗೂ ವಿರುದ್ಧವಾಗಿ ಬಂದ ಫೇಸ್‌ಬುಕ್ ಪೋಸ್ಟ್‌ಗಳು..

Lingaraj Badiger
Updated On : 28 Jan 2014, 4:22 am

ನಿನ್ನೆಯಷ್ಟೆ ಡಬ್ಬಿಂಗ್ ವಿರುದ್ಧ ಕನ್ನಡ ಚಿತ್ರರಂಗದ ಘಟಾನುಘಟಿಗಳು, ಹಿರಿತೆರೆ-ಕಿರುತೆರೆ ಕಲಾವಿದರು, ತಂತ್ರಜ್ಞರು, ಕಾರ್ಮಿಕರು ಹಾಗೂ ಕನ್ನಡಪರ ಹೋರಾಟಗಾರರು ಬೀದಿಗಿಳಿದು ಪ್ರತಿಭಟಿಸಿದ್ದರು. ಇದೀಗ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಡಬ್ಬಿಂಗ್ ಪರ ಹಾಗೂ ವಿರೋಧದ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ಡಬ್ಬಿಂಗ್ ಪರ ಹಾಗೂ ವಿರುದ್ಧವಾಗಿ ಬಂದ ಫೇಸ್‌ಬುಕ್ ಪೋಸ್ಟ್‌ಗಳು
Roopa Lakshmi
ಇವತ್ತಿನ ‘ಡಬ್ಬಿಂಗ್ ಬೇಡಾ - ಹೀಗೊಂದು ಹೋರಾಟ’ಎನ್ನುವ ನಾಟಕದ ಬಗೆಗಿನ ತಲೆಬುಡವಿಲ್ಲದ ಒಂದು ವಿಮರ್ಶೆ / ವರದಿ!
 (ತಪ್ಪಿದ್ದರೆ ಕ್ಷಮಿಸಿ, ತಿದ್ದಿಕೊಳ್ಳುತ್ತೇನೆ!)

 ೧. ಸಾ.ರಾ.ಗೋವಿಂದು - ಪಾಪ, ಅವರು ತಮ್ಮ ವಾಣಿಜ್ಯಮಂಡಳಿಯಲ್ಲಿನ ಪದಾಧಿಕಾರಿಯ ಸ್ಥಾನಕ್ಕೆ ರಾಜೀನಾಮೆ ಇತ್ತು ಹೋರಾಟಕ್ಕೆ ಬಂದರಂತೆ.

(ರಾಜೀನಾಮೆ ನೀಡದೆ ಬಂದಿದ್ದರೆ ಫೈನ್ ಕಟ್ಟಬೇಕಿತಲ್ವಾ?, ಹೋರಾಟ ಮುಗಿದ ಮೇಲೆ ಮತ್ತೆ ಸೇರಿಕೊಳ್ಳುತ್ತಾರೆ! ಅಷ್ಟೆ ) ಉಳಿದಂತೆ ಅವರ ಪಾತ್ರದಲ್ಲಿ ವಿಶೇಷ ಉತ್ಸಾಹ ಇರಲಿಲ್ಲ.

೨. ವಾಟಾಳ್ ನಾಗರಾಜ್ - ಸುಮಾರು ವರ್ಷಗಳಿಂದ ಕನ್ನಡಕ್ಕಾಗಿ ಕೈ ಎತ್ತಿ ಹೋರಾಡುತ್ತಿದ್ದು, ರಾಜ್ಯದ ಬೀದಿ, ಬೀದಿಗಳಲ್ಲಿ ಕನ್ನಡದ ಕಹಳೆ ಮೊಳಗಿರುವ ಏಕೈಕ ವ್ಯಕ್ತಿ (ಶಿವಣ್ಣ ಪ್ರಕಾರ) ರಿಮೇಕ್ ಚಿತ್ರಗಳು ಕೂಡ ಬರಬಾರದು ಎಂದು ಒಂದಿಷ್ಟು ಹೆಚ್ಚಿನ ತೂಕದ ಮಾತುಗಳಾಡಿದ ಇವರು, ಇನ್ನೂ ೩೦ ವರ್ಷಗಳ ಕಾಲ ಕನ್ನಡ ಡಬ್ಬಿಂಗ್ ಬೇಡಾ ಎಂದು ಹೋರಾಡುತ್ತಾರಂತೆ. ಮುಂದಾ? (ಮುಂದಕ್ಕೆ ಇನ್ನೇನು? ಇನ್ನೆಷ್ಟು ವರ್ಷ ಹೋರಾಡುತ್ತಾರೆ?

ನಿವೃತ್ತಿಯ ವಯಸ್ಸು ಈಗಾಗಲೇ ಆಗಿದೆ!) ಇವರು ಚಂದವಾಗಿಯೇ ನಟಿಸಿದರೂ ಕೂಡ, ಈಗಾಗಲೇ ಅದೇ ರೀತಿಯ ಪಾತ್ರಗಳನ್ನು ನಿರ್ವಹಿಸುತ್ತ ಬಂದಿರುವುದರಿಂದ, ಕ್ಲೀಷೆಯಾಗಿಯೇ ಕಂಡಿದ್ದು ಪಾತ್ರ ರಚನೆಯಲ್ಲಿನ ದೋಷ!

೩. ಹಂಸಲೇಖ - ಇವರಿಗೆ ನೀಡಿರುವ ಪಾತ್ರ ಅತ್ಯಂತ ಸಂಕೀರ್ಣವಾಗಿದ್ದು, ಅದು ಅವರ ಮುಖದಲ್ಲಿಯೂ, ಮಾತುಗಳಲ್ಲಿಯೂ ಎದ್ದು ಕಾಣುತ್ತಿತ್ತು.

ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ದೊರೆಯಬೇಕು ಎನ್ನುತ್ತಾ, ರಿಮೇಕ್ ಮೂವೀಗಳನ್ನು ತಿರಸ್ಕರಿಸುತ್ತಾ, ಕನ್ನಡದ ಸೊಗಡನ್ನು ಇಟ್ಟುಕೊಳ್ಳಿ ಎಂದು ಬುದ್ಧಿ ಮಾತು ಹೇಳಿದ ಹಂಸಲೇಖ ಅವರು, ಡಬ್ಬಿಂಗ್ ಬೇಕು ಎಂದು ಹೇಳುತ್ತಿರುವುದು, ಮಾತೃಭಾಷೆಯಲ್ಲಿಯೇ ಮಕ್ಕಳಿಗೆ ಕಾರ್ಟೂನ್, ಡಿಸ್ಕವರಿ ಚಾನೆಲ್ ಗಳನ್ನು ನೋಡುವುದಕ್ಕಾಗಿ ಎಂಬುದು ಅರ್ಥವಾಗಲಿಲ್ಲವೇ? ಅವರ ಕನ್ನಡ ಭಾಷೆ ಕೇಳಲು ಚಂದವಿದ್ದರೂ ಕೂಡ ಬಹಳ ಗೊಂದಲದಲ್ಲಿದ್ದಂತೆ ಕಂಡುಬರುತ್ತಿತ್ತು.

೪. ಜಗ್ಗೇಶ್ - ಮೀಟರ್ ಇದ್ದರೆ ಜನರ ಮಧ್ಯೆ ಬಂದು ಡಬ್ಬಿಂಗ್ ಬೇಕು ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡ ಜಗ್ಗೇಶ್. ಇವರ ಪಾತ್ರದ ಚಿತ್ರಣ ಅತ್ಯಂತ ವೀರಾವೇಶ ಹಾಗೂ ರೋಚಕತೆಯಿಂದ ಕೂಡಿತ್ತು. ‘ಗಾಸಿಪ್ ಮಾಂಗಿಂಗ್’,‘ಮೀಟರ್’, ‘ಆಯಮ್ಮನ ಜೊತೆ ಅಫೇರ್’ ಮುಂತಾದ ಕನ್ನಡ ಶಬ್ಧಗಳು ಯಥೇಚ್ಛವಾಗಿ ಉಪಯೋಗಿಸಿದ ಇವರ ಬಳಿ ಕನ್ನಡಿಗರು ಯಾವ ಯಾವ ಊರುಗಳಲ್ಲಿ, ಎಷ್ಟೆಷ್ಟು ಮಂದಿ ಇದ್ದಾರೆ! ಎಂಬ ಅಂಕಿ ಅಂಶ ಕೂಡ ಇತ್ತು. ತಮಿಳು ನಾಡಿನಲ್ಲಿ, ಆಂಧ್ರದಲ್ಲಿ, ಅಮೇರಿಕಾದಲ್ಲಿ ಸಾವಿರಾರು ಮಂದಿ ಕನ್ನಡಿಗರಿದ್ದಾಗ್ಯೂ ಕೂಡ ಇವರಿಗೆ ಸ್ವಾಭಿಮಾನವಿಲ್ಲ, ಚಂದದ ಕನ್ನಡ ಚಿತ್ರ ನೋಡುವ ಮನಸ್ಸಿಲ್ಲ ಎಂದೆಲ್ಲಾ ಹೇಳಿ, ತಮಿಳು ನಾಡಿನ ‘ಕಮಲ್ ಹಾಸನ್’ ಅವರ ಹೆಸರು ಹೇಳಿ ಒಂದರೆಕ್ಷಣ ಪೆಚ್ಚಾದರು. ಏಕೆಂದರೆ ಕಮಲ ಹಾಸನ್ ‘ಕನ್ನಡಿಗರು ವಿಶಾಲ ಹೃದಯದವರು, ಒಂಭತ್ತು ಭಾಷೆಗಳ ಚಿತ್ರಗಳನ್ನು ನೋಡುತ್ತಾರೆ’ ಎಂದೇನೋ ಅವರು ಹೇಳಿದ್ದಾರಂತೆ. ‘ಅದಕ್ಕೆ ಸ್ವಾಮಿ ಜಗ್ಗೇಶ್ - ಡಬ್ಬಿಂಗ್ ಬೇಕು ಎಂದು ನಾವು ಹೇಳುತ್ತಿರುವುದು’ ಎಂಬುದನ್ನು ಈ ರೋಚಕ ‘ಪಾತ್ರ’ ಕ್ಕೆ ಅರ್ಥ ಪಡಿಸುವುದು ಹೇಗೆ? ಇರಲಿ ಬಿಡಿ.

ಡಬ್ಬಿಂಗ್ ಬೇಕು ಎಂದು ಹೇಳುತ್ತಿರುವವರಿಗೆ ಓಪೆನ್ ಚಾಲೆಂಜ್ ಕೂಡ ಕೊಟ್ಟಿದ್ದಾರೆ ‘ಅವರು ತಪ್ಪು ಮಾಡುತ್ತಿದ್ದರೆ, ಅವರನ್ನು ಒದೆಯಬಹುದಂತೆ! ಮೀಟರ್ ‘ಜಗ್ಗೇಶ್’ ಮಾತುಗಳು ಎರಡು ಕಿಲೋಮೀಟರ್ ನಷ್ಟು ಉದ್ದವಿದ್ದುದರಿಂದ, ಅರ್ಧಕ್ಕೆ ಕಟ್ ಮಾಡಿದ್ದೇನೆ. ಒಟ್ಟಿನಲ್ಲಿ ಪೈಸಾ ವಸೂಲ್ ಪಾತ್ರ

೫. ಅಶೋಕ್ - ನಿರ್ದೇಶಕ ‘ಶಿವಣ್ಣ’ ಇವರಿಗೆ ಪಾತ್ರದ ಬಗ್ಗೆ ಸರಿಯಾಗಿ ವಿವರಿಸದೇ ಇದ್ದುದು, ನಾಟಕ ನಡೆಯುವಾಗ ಭಯಂಕರ ಅಭಾಸವಾಗಿಬಿಟ್ಟಿತು. ‘ಡಬ್ಬಿಂಗ್ ಬೇಡ’ ಎಂಬ ನಾಟಕದ ಕಾನ್ಸೆಪ್ಟ್ ಹೋಗಿ, ‘ಪ್ರಾದೇಶಿಕ ಪಕ್ಷ’ ಕಟ್ಟುವುದರ ಬಗ್ಗೆ ಮಾತಾಡಿದ್ದು ಇಡೀ ನಾಟಕದ
ದುರಂತ! ‘ಕನ್ನಡಿಗರು ವಿಶಾಲ ಹೃದಯಿಗಳು’ ಎಂದುಬ್ಬಿಸಿ, ಬೇರೆ ಭಾಷೆಗಳವರು ಇಲ್ಲಿಗೆ ಬಂದು ಕುಳಿತಿದ್ದಾರೆ, ತಮಿಳುನಾಡು ತನ್ನ ರಾಜ್ಯಕ್ಕೆ ಬೇಲಿ ಹಾಕಿಕೊಂಡಿದೆ, ಆಂಧ್ರ ಹಾಕಿಕೊಂಡಿದೆ. ಆದರೆ ಕರ್ನಾಟಕಕ್ಕೆ ಮಾತ್ರ ಯಾವುದೇ ಬೇಲಿಯಿಲ್ಲ. ಹಾಗಾಗಿ ಎಲ್ಲಾ ಭಾಷೆಗಳು ಇಲ್ಲಿಗೆ ಲಗ್ಗೆ ಹಾಕುತ್ತಿರುವುದರಿಂದ, ನಾವೊಂದು ‘ಪ್ರಾದೇಶಿಕ ಪಕ್ಷ’ ಕಟ್ಟಬೇಕು ಎಂದು ಹೇಳಿ ಮಾತನ್ನು ಮುಗಿಸಿದರು. ನಮ್ಮ ಕನ್ನಡಿಗರು (ಜಗ್ಗೇಶ್ ಅವರ ಅಂಕಿ ಅಂಶಗಳ ಪ್ರಕಾರ) ಆಯಾ ರಾಜ್ಯಗಳಲ್ಲಿ ‘ತಮಿಳು’, ‘ತೆಲುಗು’, ‘ಇಂಗ್ಲೀಷ್’ ನೋಡಿ ಸಂಭ್ರಮಿಸುತ್ತಿದ್ದಾರೆ ಅಲ್ಲವೇ? ಹಾಗಾದರೆ ಬೇರೆ ಭಾಷೆಗಳ ಜನರು ಇಲ್ಲಿ ‘ಕನ್ನಡ’ ದಲ್ಲಿಯೇ ಎಲ್ಲಾ ಚಾನೆಲ್ ಗಳನ್ನು ನೋಡಿ ಸಂಭ್ರಮಿಸಲಿ. ತಪ್ಪೇನು? ಒಟ್ಟಿನಲ್ಲಿ ಇವರದು ‘ದುರಂತ’ ಪಾತ್ರ.

ಇಷ್ಟೆಲ್ಲಾ ಆದ ಮೇಲೆ ಎಮೋಷನಲ್ ಪಾತ್ರವಿಲ್ಲದಿದ್ದಲ್ಲಿ, ನಾಟಕ ಕಳೆಗಟ್ಟುವುದು ಹೇಗೆ? ‘ಲೀಲಾವತಿ’ ಅಮ್ಮನವರು ಬಂದು, ಆಗಿನ ತಮ್ಮ ನಾಯಕನನ್ನು ನೆನೆದು, ಅವರ ಮಗನನ್ನು ಬೆಂಬಲಿಸಿ, ಒಂದಿಷ್ಟು ಕಣ್ಣೀರುಗರೆದು, ‘ಶಿವಣ್ಣ’ ನಿಗೆ ಕೋಪ ಬರಿಸಬೇಡಿ, ಆತನ ಮೂರ್ಗಣ್ಣು, ನಾಲ್ಗಣ್ಣು ನೋಡುವುದು ಬೇಡ, ಆತ ಹೇಳಿದಂತೆ ಮಾಡಿ ಎಂದು ಎಲ್ಲಾ ಹೆಂಗಳೆಯರ ಮನ ಕರಗಿಸುವಲ್ಲಿ ಯಶಸ್ವಿಯಾದರು. ಪಾಪ! ಫ್ಯಾಮಿಲಿ ಸೆಂಟಿಮೆಂಟ್ ನೋಡಿ ‘ಶಿವಣ್ಣ’ ನಾಚಿ ನೀರಾದದ್ದು ಕೇಳಲೇ ಬೇಡಿ.

ನಾಟಕದ ಮುಖ್ಯ ‘ವಿಲನ್’ ಪಾತ್ರಧಾರಿ ಪ್ರೇಮ್ ಬಂದು ವೀರಾವೇಶದ ಮಾತುಗಳನ್ನು ಹೇಳಿಕೊಟ್ಟಿದ್ದರೂ, ಸರಿಯಾಗಿ ಮಾತನಾಡದೇ, ಕಂಬಾರರ ಕ್ಷಮೆ ಕೇಳಿ, ಸ್ಟೇಜ್ ಮೇಲಿಂದ ನಿರ್ಗಮಿಸಿದ್ದು, ಅರ್ಥವಾಗಲಿಲ್ಲ. ಎರಡನೇ ನಾಯಕ ಪಾತ್ರಧಾರಿ ‘ಪುನೀತ್’ ಎಂದಿನಂತೆ, ಅತ್ಯಂತ ಮೃದು ಧ್ವನಿಯಲ್ಲಿ, ಸ್ಪಷ್ಟತೆಯಿಲ್ಲದ ಮಾತುಗಳಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದ್ದು ಹೀಗೆ - ನಾವು ಬೇರೆ ಭಾಷೆಗಳನ್ನು ದ್ವೇಷಿಸುತ್ತಿಲ್ಲ, ಬೇರೆ ಭಾಷೆಗಳವರು ಬರಲಿ,

ನಾವು ಇರುತ್ತೇವೆ, ಆದರೆ ಡಬ್ಬಿಂಗ್ ಬೇಡ’ ಎಂದರು. ಬೇರೆ ಭಾಷೆಗಳ ಚಿತ್ರಗಳು ಕನ್ನಡದಲ್ಲಿ ಡಬ್ ಕೂಡ ಆಗಲಿ ತಪ್ಪೇನು? ಪುನೀತ್ ಅವರ ಪಾತ್ರ ರಚನೆಯಲ್ಲಿ ಸ್ಪಷ್ಟತೆಯಿರಲಿಲ್ಲ.

ಇನ್ನುಳಿದಂತೆ ಸಣ್ಣ ಪುಟ್ಟ ಪಾತ್ರಗಳಾದ ದುನಿಯಾ ವಿಜಿ, ಪ್ರಜ್ವಲ್, ಶ್ರೀನಗರ ಕಿಟ್ಟಿ ಇತ್ಯಾದಿ ಇವರಿಗೆ ತಮ್ಮ ಪಾತ್ರಗಳ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ. ಬಹುಶಃ ಡೈಲಾಗ್ ಪ್ರಾಕ್ಟೀಸ್ ಕೂಡ ಸರಿಯಾಗಿ ಮಾಡಿರಲಿಲ್ಲವೇನೋ? ಹೇಳಿಕೊಟ್ಟ ‘ಗಿಳಿಪಾಠ’ವನ್ನು ಉಚ್ಚರಿಸಿ ವಾಪಾಸು ಬಂದರು.

‘ಬ್ರೇಕ್ ಟೈಮ್’ ನಲ್ಲಿ ‘ಸುದೀಪ್, ದರ್ಶನ್’ ಮುಂತಾದವರು ಬಂದು ಹೋದ ಕಾರಣ, ಅವರ ಮಾತುಗಳು ನನಗೆ ತಿಳಿಯಲಿಲ್ಲ.

ಇಡೀ ನಾಟಕದಲ್ಲಿ ನನಗೆ ಎದ್ದು ಕಂಡಿದ್ದು ‘ನಾಯಕಿ’ಯರ ಕೊರತೆ. ‘ಅಮೂಲ್ಯ’ ಬಿಟ್ಟರೆ, ಇನ್ಯಾರೂ ನಾಯಕೀಮಣಿಗಳೇ ಇಲ್ಲದಿದ್ದದು, ಬಹುಶಃ ಬೇರೆ ಭಾಷೆಗಳ ‘ನಾಯಕಿ’ಯರಿಗೆ ಈ ನಾಟಕದಲ್ಲಿ ‘ಪಾತ್ರ’ ದೊರಕದೇ ಇದ್ದದು! ರಮ್ಯಾ ಎಂಪಿಯಾಗಿ, ರಕ್ಷಿತಾ, ರಾಧಿಕಾ ಹೌಸ್ ವೈಫ್ ಗಳಾಗಿಬಿಟ್ಟಿದ್ದರಿಂದ, ಇವರನ್ನು ನೋಡುವ ಭಾಗ್ಯ ಪ್ರೇಕ್ಷಕರಿಗಿರಲಿಲ್ಲ. ಉಳಿದ ಕನ್ನಡದ ನಾಯಕಿಯರು ಈಗಾಗಲೇ ಪೋಷಕ ಪಾತ್ರಧಾರಿಗಳಾಗಿಬಿಟ್ಟಿರುವುದರಿಂದ, ಅವರು ಹಿಂದಿನ ಲೈನ್ ಗೆ ಟ್ರಾನ್ಸ್ ಫರ್ ಆಗಿದ್ದರು. ಮಾಲಾಶ್ರೀ, ಶೃತಿ ಇಬ್ಬರೂ ಮಾತಾಡಿದರೂ ಕೂಡ ಅಂತಹ ಮೋಡಿಯನ್ನೇನೂ ಮಾಡಲಿಲ್ಲ. ಕನ್ನಡಮ್ಮನನ್ನು ಅತ್ಯಾಚಾರದಿಂದ ‘ಬಚಾವ್’ ಮಾಡಿದ ಮಾಳವಿಕ ಅವಿನಾಶ್ ಎಲ್ಲೂ ಕೂಡ ಕಾಣಲಿಲ್ಲ.

ಈ ಪಾತ್ರಗಳೆಲ್ಲವನ್ನೂ ನಿರ್ವಹಿಸಿ, ಮಾತುಗಳನ್ನು ಹೇಳಿಕೊಟ್ಟು ಬಸವಳಿದಿದ್ದ ನಾಟಕದ ನಿರ್ದೇಶಕ ‘ಶಿವಣ್ಣ’ ನವರ ನಾಲ್ಕನೇ ಕಣ್ಣು ತೆರೆಯುವುದೆಂದು ಕ್ಲೈಮಾಕ್ಸ್ ವರೆಗೂ ಕಾದಿದ್ದೇ ಬಂತು. ‘ಶಿವಣ್ಣ’ ನ ಪಾತ್ರ ಮಾತ್ರ ಬಹಳ ಸಪ್ಪೆಯಾಗಿಬಿಟ್ಟಿತು. ಡಬ್ಬಿಂಗ್ ಬೇಡ ಎಂಬ ಕಾನ್ಸೆಪ್ಟ್ ಹೇಳಹೊರಟಿದ್ದ ಇಡೀ ನಾಟಕ ತಂಡ, ಸರಿಯಾದ ಮಾಹಿತಿ ಇಲ್ಲದೆ, ವಿಷಯದ ಮೇಲೆ ಹಿಡಿತವಿಲ್ಲದೆ, ತಾಲೀಮು ನಡೆಸದೆ, ಏನೇನೋ ಮಾತಾಡಿ, ನೋಡಿದಪ್ರೇಕ್ಷಕರೆಲ್ಲರಿಗೂ ‘ಡಬ್ಬಿಂಗ್ ಬೇಕು, ಇಲ್ಲವೇ ಬೇರೆ ಭಾಷೆಗಳ ಚಿತ್ರಗಳನ್ನು ನೋಡಿ, ಕನ್ನಡ ಚಿತ್ರಗಳನ್ನು ಬಹಿಷ್ಕರಿಸುತ್ತೇವೆ’ ಎಂದೆನಿಸಿದ್ದು ಮಾತ್ರ ಸುಳ್ಳಲ್ಲ. ಇದು ನಾಟಕದ ಸೋಲು!

KS Harshakumar Kugwe
ಪುನೀತ್ ರಾಜ್ ಕುಮಾರ್ ಸಿನಿಮಾ ತೆಲುಗು ತಮಿಳು, ಹಿಂದಿ ಭಾಷೆಗೆ ಡಬ್ಬಿಂಗ್ ಆಗುವಾಗ, ಶಿವಣ್ಣನ 'ಭಜರಂಗಿ' ಹಿಂದಿಗೆ ಡಬ್ ಆಗುವಾಗ, ಬಂದಷ್ಟು ಲಾಭ ಬರಲಿ, ಕನ್ನಡ ಒತ್ತಟ್ಟಿಗಿರಲಿ. ಉಪೇಂದ್ರ ತೆಲುಗಿನಲ್ಲಿ ಸಿನಿಮಾ ಮಾಡುವಾಗ ಲಾಭ ಬರಲಿ ಕನ್ನಡ ಒತ್ತಟ್ಟಿಗಿರಲಿ, ಸುದೀಪ್ ಬಾಲಿವುಡ್ ಕಾಲಿವುಡ್ ಟಾಲಿವುಡ್ ಗಳಲ್ಲಿ ನಟಿಸುವಾಗಲೂ ಕನ್ನಡ ಒತ್ತಟ್ಟಿಗಿರಲಿ, ಪರಭಾಷೆ ನಟಿಯರನ್ನು ಹಾಡುಗಾರರನ್ನು ಬಳಸಿಕೊಳ್ಳುವಾಗ ಬಂದಷ್ಟು ಲಾಭ ಬರಲಿ ಕನ್ನಡದ ಕಲಾವಿದೆಯರು, ಕಲವಾವಿದರು ಒತ್ತಟ್ಟಿಗಿರಲಿ, ಲಾಟ್ ಗಟ್ಟಲೆ ತಮಿಳು ಸಿನಿಮಾಗಳನ್ನು ಮಕ್ಕೀ ಕಾ ಮಕ್ಕೀ ಆಗಿ ಕನ್ನಡಕ್ಕೆ ರಿಮೇಕ್ ಮಾಡುವಾಗ ಬಂದಷ್ಟು ಲಾಭ ಬರಲಿ ಕನ್ನಡತನ ಬದಿಗಿರಲಿ, ಕನ್ನಡದ ಪ್ರೇಕ್ಷಕರಿಗೆ ಲಾಂಗು ಮಚ್ಚು ಸಂಸ್ಕೃತಿಯನ್ನು, ಸಿನಿಮಾದ ಹೆಸರಲ್ಲಿ ಉಣಬಡಿಸುವಾಗ ಕನ್ನಡತನ ಒತ್ತಟ್ಟಿಗಿರಲಿ- ಕನ್ನಡಿಗರು ಏನು ಹೇಳಿದರೆ ಏನು ನಮ್ಮ ಲಾಭಕ್ಕಾಗಿ ನಾವು ಡಬ್ಬಿಂಗ್ ವಿರೋಧಿಸಿಯೇ ಸಿದ್ದ. ಅದಕ್ಕಾಗಿ ಕನ್ನಡದ ಹೆಸರನ್ನು ಎಷ್ಟು ಸಲ ಬೇಕಾದರೂ ಊಳಿಡುತ್ತೇವೆ!! ಅಗತ್ಯ ಬಿದ್ದರೆ ಮೂರನೇ ಕಣ್ಣು ತೆರೆಯೋಕೂ ತಯಾರು. ತಲೆಹಿಡುಕರು ಎನ್ನಲೂ ತಯಾರು....ಎದೆ ಮೇಲೆ ಕಾಲಿಡಲೂ ತಯಾರು! ದಮ್ಮಿದ್ದರೆ ಎದುರು ಬನ್ನಿ!!!

Chetana Thirthahalli
ಸಿನೆಮಾ ಒಂದರಲ್ಲಿ ರಾಜ್ಯದ ಕಲಾವಿದರಿಗೆ, ತ಼ಂತ್ರಜ್ಞರಿಗೆ ಶೇ.95ರಷ್ಟು ಆದ್ಯತೆ ಕೊಡ್ತಾರಾ?
ಮರ ಸುತ್ತೋಕೂ ಪಕ್ಕದ ಭಾಷೆ ಹುಡುಗಿ ಬೇಕು ಅನ್ನೋರೆಲ್ಲ ಡಬ್ಬಿ಼ಂಗ್ ಇಂದ ಕನ್ನಡಿಗರಿಗೆ ತೊ಼ಂದ್ರೆ ಆಗತ್ತೆ ಅ಼ಂತ ಕೂಗಾಡೋದು ನೋಡೋಕೆ ಮಜಾ ಅನ್ಸತ್ತೆ!
(ಡಬ್ಬಿಂಗ್ ಸರಿ- ತಪ್ಪಿನ ಬಗ್ಗೆ ಹೇಳ್ತಿಲ್ಲ.,, ವಿರೋಧಕ್ಕೆ ನಿಂತಿರುವ ಕೆಲವರನ್ನ ಕಂಡು ಹೀಗನಿಸ್ತು)

Raghu Apara
ಡಬ್ಬಿಂಗ್‌: ನನ್ನ ಅನಿಸಿಕೆಗಳು
೧. ನಂಗಂತೂ ಇಷ್ಟ ಇಲ್ಲ.
೨. ಅಕಸ್ಮಾತ್‌ ಡಬ್ಬಿಂಗ್‌ ಬಂದ್ರೂ ದೊಡ್ಡ ಫ್ಲಾಫ್‌ ಆಗುತ್ತೆ ಅನ್ಸುತ್ತೆ.
೩. ಭಾಷಾಭಿಮಾನ ಜಾಸ್ತಿ ಇರೋ ಭಾಷೆಗಳು ಡಬ್ಬಿಂಗ್‌ ಅನ್ನು ನಿಭಾಯಿಸಿದಷ್ಟು ಸುಲಭವಾಗಿ ಕನ್ನಡ ನಿಭಾಯಿಸೋಕಾಗಲ್ಲ. ಹಾಗಾಗಿ ನಮಗೆ ಬೇಡ ಅನ್ನೋದು.
೪. ಡಬ್ಬಿಂಗ್‌ ಬರೀ ಸಿನಿಮಾರಂಗಕ್ಕೆ ಸಂಬಂಧಿಸಿದ ವಿಷಯ ಅನ್ಸಲ್ಲ. ಒಟ್ಟಾರೆ ಕನ್ನಡಕ್ಕೆ ಸಂಬಂಧಿಸಿದ್ದು. ಹಾಗೆಯೇ ನೋಡಬೇಕು ಅನ್ಸುತ್ತೆ ಅದನ್ನ.
೫ ಕನ್ನಡದಲ್ಲಿ ಸಾಕಷ್ಟು ಒಳ್ಳೆಯ ಸಿನಿಮಾ ಬರ‍್ತಿಲ್ಲ ಅನ್ನೋದು ನಿಜ. ಆ ಕಾರಣಕ್ಕಾಗಿ ಡಬ್ಬಿಂಗ್‌ ಬರಲಿ ಅನ್ನೋ ವಾದ ಒಪ್ಪೋಕಾಗಲ್ಲ.
೬. ಡಬ್ಬಿಂಗ್‌ಗೂ ಡಿಸ್ಕವರಿ ಚಾನೆಲ್‌ಗೂ ಸಂಬಂಧವಿಲ್ಲ. ಬರೀ ವಿಜ್ಞಾನ ತಂತ್ರಜ್ಞಾನದ ಕಾರ್ಯಕ್ರಮಗಳಿಗೆ ಬಂದ್ರೆ ಆಕ್ಷೇಪವಿಲ್ಲ.

Tejaswini Hegde
ಡಬ್ಬಿಂಗ್ ಬೇಕಾ? ಬೇಡ್ವಾ? ಗೊತ್ತಿಲ್ಲ. ನನ್ನ ಅನಿಸಿಕೆಯೇನು ಅನ್ನೋದಷ್ಟನ್ನೇ ಹೆಳುತ್ತಿದ್ದೇನೆ. ಕನ್ನಡದ ಉಳಿಕೆಗೆ ಅಥವಾ ಅಳಿವಿಗೆ ಯಾವುದೋ ಒಂದು ಕಾರಣವಾಗುತ್ತೆ ಅನ್ನೋದ್ರಲ್ಲಿ ನಂಬಿಕೆ ಇಲ್ಲ. ಭಾಷೆ ಮತ್ತು ನೀರು ಬಳಸಿದಂತೆ ಅಂತಾರೆ ನಮ್ಮಮ್ಮ. ಹಾಗಾಗಿ ಎಲ್ಲಿಯವರೆಗೆ ನಮ್ಮಂತಹ ಕನ್ನಡ ಪ್ರೇಮಿಗಳು ಒಳ್ಳೊಳ್ಳೆ ಕನ್ನಡ ಪುಸ್ತಕಗಳನ್ನು, ಒಳ್ಳೊಳ್ಳೆ ಚಲನಚಿತ್ರಗಳನ್ನು ನೋಡುತ್ತೇವೋ, ಕನಿಷ್ಟ ಕರ್ನಾಟಕದಲ್ಲಾದರೂ ಅಚ್ಚ ಕನ್ನಡದಲ್ಲೇ

ಮಾತನಾಡುತ್ತಾ ಕನ್ನಡಿಗರಾಗೇ ಉಳಿಯುತ್ತೇವೋ ನಮ್ಮ ಕಟ್ಟ ಕಡೆಯ ಪೀಳಿಗೆಯವರೆಗೂ ಕನ್ನಡ ಇದ್ದೇ ಇರುತ್ತದೆ. ದಬ್ಬಿಂಗ ಪರ ಮಾತೋಡೆರೆಲ್ಲಾ ಕನ್ನಡ ವಿರೋಧಿಗಳು, ವಿರೋಧಿಸುವವರೆಲ್ಲಾ ಕನ್ನಡ ಪರರು ಅನ್ನೋದನ್ನೂ ಒಪ್ಪುತ್ತಿಲ್ಲ. ಆದರೆ.......

ಆದರೆ..... ಒಂದಂತೂ ಸತ್ಯ... ಹಿಂದಿ, ತಮಿಳು, ತೆಲುಗು, ಇಂಗ್ಲೀಷ್ ಯಾವುದೇ ಭಾಷೆಯಿರಲಿ, ಅದರ ಮೂಲದಲ್ಲೇ ನೋಡುವಂತಾದರೆ ಚೆನ್ನ. ಅವರು ಅನ್ನೋ ಮಾತಿಗೆ ಕನ್ನಡ ಭಾಷೆಯ ಮುಖವಾಡ ಕೊಟ್ಟು ತೋರಿದರೆ ಭರನಾಟ್ಯ ವಸ್ತ್ರಕ್ಕೆ ಯಕ್ಷಗಾನದ ಮುಖವಾಡ ತೊಡಿಸಿದಂತೇ (ಅ)ಭಾಸವಾಗುತ್ತದೆ.

ಹಾಗೆಯೇ ಇದು ಅದೆಷ್ಟೋ ಶ್ರಮಜೀವಿಗಳ ತುತ್ತನ್ನೂ ಕಸಿದುಕೊಳ್ಳುವುದೂ ನಿಜವೇ. ಅವರ ಪಾಡು ಅವರಿಗೆ ನನ್ನ ಮೋಜು ನನಗೆ ಎನ್ನುವುದು ಸ್ವಾರ್ಥ.

ಅವರಿಗೋಸ್ಕರ ಪರ್ಯಾಯ ವ್ಯವಸ್ಥೆ ಮಾಡಿಕೊಟ್ಟರೆ ತುಂಬಾ ಸಂತೋಷ. ಇನ್ನು ಇದು ಅವರವರ ಆಯ್ಕೆ ಅನ್ನೋದಾದರೆ ಹಾಗೇ ಆಗಲಿ ಬಿಡಿ. ಅನ್ಯ ಭಾಷೆಗೆ ನಮ್ಮ ಭಾಷೆಯ ಲೇಪನ ಕೊಟ್ಟದ್ದು ಅವರವರಿಗೆ ವೇದ್ಯವಾಗುತ್ತಾದರೆ ಅದು ಅವರ ಆಯ್ಕೆ. ಇಷ್ಟ ಆದವರು ನೊಡುತ್ತಾರೆ. ಕಷ್ಟ ಆದವರು ಮುಲಾಜಿಲ್ಲದೇ ತಿರಸ್ಕರಿಸುತ್ತಾರೆ. ಟೇಸ್ಟ್ ಅನ್ನೋದು ಅವರವರ ಮನೋಭಾವಕ್ಕೆ ಬಿಟ್ಟಿದ್ದು. ನಾನಂತೂ ಆಯಾ ಭಾಷೆಯದ್ದನ್ನು ಅದೇ ಭಾಷೆಯಲ್ಲಿ
ನೋಡಲಿಚ್ಛಿಸುತ್ತೇನೆ. ಹಾಗಾಗಿ ನನಗೆ ಡಬ್ಬಿಂಗ ಅನಿವಾರ್ಯವಲ್ಲ. ಭಾಷೆ ಬರದ ಚಿತ್ರಗಳನ್ನು ಸಬ್‍ಟೈಟಲ್ ಹಾಕೊಕೊಂಡೋ ಇಲ್ಲಾ ಆ ಭಾಷೆಯನ್ನು ಕಲಿಯಲೆತ್ನಿಸಿಯೋ ನೋಡುವೆ ಹೊರತು ಅದಕ್ಕೆ ಕನ್ನಡದ ಮುಖವಾಡ ನನಗೆ ಸಹ್ಯವೆನಿಸದು. ಇದು ನನ್ನ ಆಯ್ಕೆ. ಅದನ್ನು ನಾನು ಎಲ್ಲರ ಮೇಲೂ ಹೇರಲಾರೆ.. ಹಾಗೆ ಹೇರಲೂಬಾರದು.. ಆದರೆ ಅದೆಷ್ಟೋ ಕಾರ್ಮಿಕರು ತಮ್ಮ ಹೊಟ್ಟೆಪಾಡಿಗೆ ನೆಚ್ಚಿರುವ ಕನ್ನಡ ಚಿತ್ರರಂಗ, ಕಿರುತರೆಯನ್ನು ಅವರ ಪಾಲಿಗೆ ಮುಚ್ಚದಂತೇ ಎಚ್ಚರಿಕೆವಹಿಸುವುದೂ ಮಾನವೀಯತೆ, ಧರ್ಮ ಎಂದೆನಿಸುತ್ತದೆ. - ಇದು ನನ್ನ ಪ್ರಾಮಾಣಿಕ ಅಭಿಪ್ರಾಯ.

Vijay Heragu
ಏನಾದ್ರೂ ಆಗ್ಲಿ ಡಬ್ಬಿಂಗ್ ಬರ್ಲಿ , ಶಿವಣ್ಣನ ನಾಲ್ಕನೇ ಕಣ್ಣು ನೋಡ್ಬೇಕು ಅಂತ ತುಂಬಾ ಆಸೆ ಆಗ್ತಿದೆ

Arun Javgal
ಡಬ್ಬಿಂಗ್ ಬೇಡ ಎಂದು ನೀಡುವ ಕಾರಣ ಗಳಿಗೆ ಡಬ್ಬಿಂಗ್ ವಿರೋಧಿಗಳು ನಡೆಸಿದ ಪ್ರತಿಭಟನೆ ಮತ್ತು ಕೆಲವು ದಿನಗಳಿಂದ ನಡೆಯುತ್ತಿರುವ ಚರ್ಚೆಗಳಲ್ಲಿ ಡಬ್ಬಿಂಗ್ ವಿರೋದಿಗಳೇ ಉತ್ತರ ನೀಡುತ್ತಿದ್ದಾರೆ...ಕೆಲವು ಉದಾಹರಣೆ-

1. ಕೆಲವು ಮಾಸ್ ಹೀರೊಗಳು ಡಬ್ಬಿಂಗ್ ಬಂದರೆ ಸಾವಿರಾರು ಜನರಿಗೆ ತೊಂದರೆಯಾಗಲಿದೆ ಎಂದರು ಆದರೆ ನಾಯಕ ನಟಿ ಶೃತಿ ಸೇರಿದಂತೆ ಹಲವರು ಇದನ್ನು ಒಪ್ಪದೇ ಇರುವಂತಹಾ ಹೇಳಿಕೆ ನೀಡೊದ್ದಾರೆ

2. ಡಬ್ಬಿಂಗ್ ನಿಂದ ಕನ್ನಡ ಸಂಸ್ಕೃತಿಗೆ ಹಾನಿಯಾಗುತ್ತದೆ ಎಂದು ಕೆಲವರು ಹೇಳಿದ್ದಾರೆ-
ಪ್ರತಿಭಟನೆಯ ಮುಂಚೂಣಿಯಲ್ಲಿ ಇರುವ ನಟಿ ತಾರ ನೆನ್ನೆ ವಾಹಿನಿಯೋಂದರಲ್ಲಿ ಪರಭಾಷೆಯ ಚಿತ್ರಗಳು ಆಯಾ ಭಾಷೆಯಲ್ಲೆ ಬಿಡುಗಡೆಯಾಗದೆ ಎಲ್ಲವೂ ಡಬ್ ಆಗಿ ಕನ್ನಡದಲ್ಲಿ 'ಮಾತ್ರ' ಬಿಡುಗಡೆಯಾದರೆ ಓಕೆ ಎನ್ನುವ ಹೇಳಿಕೆ ನೀಡಿದ್ದಾರೆ. ಅಂದರೆ ಇಲ್ಲಿ ಸಂಸ್ಕೃತಿಯ ಪ್ರಶ್ನೆ ಬರುವುದಿಲ್ಲ ಎನ್ನುವುದಾಗಿದೆ.

3. ಜಗ್ಗೇಶ್ ಮತ್ತು ನೀನಾಸಂ ಸತೀಶ್ ಇನ್ನಿತರರು ಡಬ್ಬಿಂಗ್ ಸಿನೆಮಾ ಬಂದರೆ ಬೇರೆ ಭಾಷೆ ಕಲಿಯಲು ಅವಕಾಶ ಸಿಗದು ಎಂದಿದ್ದಾರೆ. ತಾರ ರವರು ನೀಡಿರುವ ಮೇಲಿನ ಹೇಳಿಕೆ ಇದಕ್ಕೆ ವಿರುದ್ಧವಾಗಿದೆ.

4 ಇನ್ನು ತುಟಿ ಚಲನೆ/ ಭಾಷೆ ಹಾಳಾಗುತ್ತೆ ಇತ್ಯಾದಿ ಕಾರಣಗಳಿಗೆ ಮೇಲೆ ಹೇಳಿರುವ ಕಾರಣಗಳು ಉತ್ತರವಾಗಿದೆ.

5 ಡಬ್ಬಿಂಗ್ ಕೆಲವೇ ಕೆಲವರಿಗೆ ಬೇಕಾಗಿದೆ ಎನ್ನುವ ಕಾರಣಕ್ಕೆ ನಟ ಶಿವರಾಜ್ ಕುಮಾರ್ ರವರೇ ಉತ್ತರ ನೀಡಿದ್ದಾರೆ- ಡಬ್ಬಿಂಗ್ ಬೇಡ ಎನ್ನಲು ಮೈದಾನದ ತುಂಬ ಜನ ಬರಬೇಕಿಲ್ಲ. 5 ಜನ ಬೇಡ ಅಂದ್ರು ಬೇಡ, ಒಬ್ಬ ಬೇಡ ಅಂದ್ರು ಬೇಡ.
ಇದೇ ಡಬ್ಬಿಂಗ್ ಬೇಕು ಅನ್ನುವವರಿಗೂ ಅನ್ವಯಿಸುತ್ತೆ ಅಲ್ಲವೇ

ಒಟ್ಟಾರೆಯಾಗಿ ಒಬ್ಬರು ಡಬ್ಬಿಂಗ್ ಬೇಡ ಎನ್ನಲು ನೀಡುವ ಬಹುತೇಕ ಎಲ್ಲಾ ಕಾರಣಗಳಿಗೆ ಅವರ ಜೊತೆಯವರೇ ಉತ್ತರ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement